More

    ಸುಶಿಕ್ಷಿತರಿಂದ ದೇಶದ ಸಂಸ್ಕೃತಿ ಹಾಳು

    ಚಾಮರಾಜನಗರ: ಅನೈತಿಕ ಯಶಸ್ಸನ್ನು ಗಳಿಸುವರು ಸಮಾಜ ಕಂಟಕರಾಗಿದ್ದಾರೆ, ಸುಶಿಕ್ಷಿತರೇ ಸಮಾಜವನ್ನು ಜಾಸ್ತಿ ಆಳು ಮಾಡುತ್ತಿದ್ದಾರೆ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಚಿಂತಕ ಪ್ರೊ.ಜಿ.ಎಸ್.ಜಯದೇವ್ ಬೇಸರ ಹೊರಹಾಕಿದರು.

    ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಸಮಾಜದಲ್ಲಿ ಒಳಿತು ಮತ್ತು ಕೆಡುಕು ಎರಡೂ ಇದ್ದು, ಒಳಿತುಗಳು ಹೆಚ್ಚಾದಷ್ಟು ಸಮಾಜ ಆರೋಗ್ಯಪೂರ್ಣವಾಗಿರುತ್ತದೆ. ಘನತೆಯ ಜೀವನವನ್ನು ಸಾಗಿಸುವವರಿಗೆ ಬಹಿರಂಗ ಬದುಕು ಪರಿಶುದ್ಧವಾಗಿರುತ್ತದೆ. ತುಂಬಾ ಮನುಷ್ಯರ ಒಳಗೆ ಯಾರು ಇರುವುದಿಲ್ಲ, ಬದಲಾಗಿ ಪಶು ಸದೃಶವಾದ ಆಚರಣೆ ಇರುತ್ತದೆ. ಇತ್ತೀಚೆಗೆ ಸಂಸ್ಕಾರ, ಸಂಸ್ಕೃತಿ ಎಂಬುದು ಧರ್ಮ ರಾಜಕಾರಣದ ಭಾಗವಾಗಿ ದ್ವೇಷವಾಗುತ್ತಿದೆ. ಕೋಮು ಸಾಮರಸ್ಯವನ್ನು ಕದಡುವ ಕೆಲಸ ಮಾಡಲಾಗುತ್ತಿದೆ. ಸಂಸ್ಕೃತಿ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದರು.

    ನಮ್ಮ ದೇಶವನ್ನು ಸಂವಿಧಾನ ಒಗ್ಗೂಡಿಸಿದೆ. ಈ ಒಗ್ಗಟ್ಟನ್ನು ಹೊಡೆಯುವ ಪ್ರಯತ್ನಗಳು ಆಗುತ್ತಿದೆ. ನಮ್ಮ ದೇಶವನ್ನು ಬಹುಸಂಸ್ಕೃತಿಯ ನಾಡು ಎಂದು ಕರೆಯುತ್ತೇವೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ವಿಭಿನ್ನವಾದ ಸಂಸ್ಕೃತಿ ಗೋಚರವಾಗುತ್ತದೆ. ನಮ್ಮ ಪ್ರಾದೇಶಿಕ ಆಚರಣೆ, ಧರ್ಮ, ನಂಬಿಕೆಯ ನಡುವೆಯೂ ಒಟ್ಟಾಗಿ ಬದುಕುತ್ತಿದ್ದೇವೆ. ಸರ್ವ ಜನಾಂಗದ ಶಾಂತಿಯ ತೋಟ ಕಟ್ಟಬೇಕಾದರೆ ಸಾಮರಸ್ಯದ ಸಂಸ್ಕೃತಿ ಅಗತ್ಯವಾಗಿದೆ. ಹೆಣ್ಣು ಮಕ್ಕಳೇ ಈ ದೇಶದ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು.

    ಸಂಸ್ಕೃತಿ ಅಂದರೆ ನಮ್ಮ ಮನೋಧರ್ಮವಾಗಿದೆ, ಎಲ್ಲರೂ ಬದುಕಬಹುದಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಪ್ರತಿಯೊಬ್ಬರು ಸಮಾಜದ ಋಣವನ್ನು ತೀರಿಸುವ ಜವಾಬ್ದಾರಿಯನ್ನು ಮನಗಾಣಬೇಕು. ದೊಡ್ಡ ಕಾರ್ಪೋರೇಟ್ ಕಂಪನಿಗಳನ್ನು ಕಟ್ಟಿ ಪರಿಸರವನ್ನು ಸುಶಿಕ್ಷಿತರೇ ಆಳು ಮಾಡುತ್ತಿದ್ದಾರೆ. ಕೇವಲ ಆರ್ಥಿಕ ಅಭಿವೃದ್ಧಿ, ತಲಾ ಆದಾಯವನ್ನು ಹೆಚ್ಚಿಸಿದರೆ ಮನುಷ್ಯ ಉತ್ತಮವಾಗಿ ಬದುಕಲಾರ, ಬದಲಾಗಿ ಉತ್ತಮವಾದ ಸಂಸ್ಕೃತಿಯ ಅಗತ್ಯವಿದೆ ಎಂದು ಸಲಹೆ ನೀಡಿದರು.

    ನನ್ನ ಬದುಕು ಎಷ್ಟು ಮುಖ್ಯವೋ ಇನ್ನೊಬ್ಬರ ಬದುಕು ಅಷ್ಟೇ ಮುಖ್ಯ ಎಂಬ ಅರಿವು ಮೂಡಿಸುವ ಶಿಕ್ಷಣದ ಅಗತ್ಯವಿದೆ. ಆದರೆ ನಮ್ಮ ಶಿಕ್ಷಣ ನಿಜಜೀವನದಿಂದ ದೂರಾಗಿದೆ. ಇಂತಹ ಶಿಕ್ಷಣದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣವನ್ನು ನೆನಪಿನ ಆಟ ಮಾಡಿಕೊಂಡಿದ್ದೇವೆ. ಕ್ರೀಡಾ ಮನೋಧರ್ಮ ಮತ್ತು ಉತ್ತಮವಾದ ಸಂಸ್ಕೃತಿ ಯುವ ಜನಾಂಗದಲ್ಲಿ ಹಾಸುಹೊಕ್ಕಾಗಲಿ ಎಂದು ಕಿವಿಮಾತಿ ಹೇಳಿದರು.

    ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಯೋಗಪಟು ಹಾಗೂ ತರಬೇತುದಾರ ಬಿ.ಎಂ.ರಮೇಶ್, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಉಪನ್ಯಾಸಕಿ ಡಾ.ಸುಷ್ಮಾ, ಉಮೇಶ್, ಸಹಾಯಕ ಪ್ರಾಧ್ಯಾಪಕರಾದ ಉಮೇಶ್, ಎಲ್.ಎಲ್.ಶುಭ, ಎಚ್.ವಿ.ಪೂಜಾ, ಬಿ.ಶ್ವೇತನಂದಿನಿ, ಸಿ.ರೂಪಶ್ರೀ, ವಿದ್ಯಾರ್ಥಿ ನಿತ್ಯಶ್ರೀ, ಅರಣಶ್ರೀ, ನಿಹಾರಿಕ, ವರ್ಷ, ಎಸ್.ಪೂರ್ಣಶ್ರೀ ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts