More

    ತಾತ್ಕಾಲಿಕ ಆರು ಗೋಶಾಲೆಗಳಿಗೆ ಚಾಲನೆ

    ಹನೂರು: ಮಳೆ ಇಲ್ಲದೆ ಬರಗಾಲದಿಂದ ತತ್ತರಿಸುತ್ತಿರುವ ಹನೂರು ತಾಲೂಕಿನಲ್ಲಿ ಜಾನುವಾರುಗಳಿಗೆ ತೀವ್ರ ಮೇವಿನ ಸಮಸ್ಯೆ ತಲೆದೋರಿದ ಕಾರಣ ಜಿಲ್ಲಾಡಳಿತ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಶನಿವಾರದಿಂದ ತಾತ್ಕಾಲಿಕವಾಗಿ ಆರು ಗೋಶಾಲೆಗಳನ್ನು ತೆರೆದು ಮೇವು ಪೂರೈಸಿದೆ.

    ಶೆಟ್ಟಹಳ್ಳಿ, ಕೌದಹಳ್ಳಿ, ಕುರಹಟ್ಟಿ ಹೊಸೂರು, ಭದ್ರಯ್ಯನಹಳ್ಳಿ, ದಂಟಹಳ್ಳಿ ಹಾಗೂ ಎಲ್‌ಪಿಎಫ್ ಪ್ರಾಜೆಕ್ಟ್ ಗ್ರಾಮಗಳಲ್ಲಿ ಗೋ ಶಾಲೆಗಳಿಗೆ ಚಾಲನೆ ನೀಡಲಾಗಿದೆ. ಶೆಟ್ಟಳ್ಳಿಯಲ್ಲಿ 680 ಹಸು, ಕೌದಳ್ಳಿಯಲ್ಲಿ 720, ಕುರಟ್ಟಿಹೊಸೂರಿನಲ್ಲಿ 1175, ಎಲ್‌ಪಿಎಸ್ ಪ್ರಾಜೆಕ್ಟ್‌ನಲ್ಲಿ 606, ಭದ್ರಯ್ಯನಹಳ್ಳಿಯಲ್ಲಿ 926 ಹಾಗೂ ದಂಟಳ್ಳಿಯಲ್ಲಿ 692 ಹಸುಗಳಿಗೆ ಒಟ್ಟಾರೆಯಾಗಿ 13,740 ಕೆ.ಜಿ ಮೇವನ್ನು ವಿತರಣೆ ಮಾಡಲಾಯಿತು.

    ಈ ಬಗ್ಗೆ ಮಾ.29ರ ವಿಜಯವಾಣಿ ಪತ್ರಿಕೆ ಜಾನುವಾರುಗಳಿಗೆ ಮೇವು, ನೀರಿಗೆ ಬರ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ತಾಲೂಕು ಜಿಲ್ಲಾಡಳಿತ ಹಾಗೂ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶನಿವಾರ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಸಮ್ಮುಖದಲ್ಲಿ ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ತಾತ್ಕಾಲಿಕ ಗೋಶಾಲೆಗೆ ಚಾಲನೆ ನೀಡಲಾಯಿತು.

    ತಾಲೂಕಿನಲ್ಲಿ ಹೆಚ್ಚಿನ ರೈತರು ಕೃಷಿ ಜತೆಗೆ ಹೈನುಗಾರಿಕೆ ಅವಲಂಬಿಸಿದ್ದಾರೆ. ತಾಲೂಕಿನಲ್ಲಿ ಪ್ರಸ್ತುತ 66,107 ಹಸುಗಳು, 4,174 ಎಮ್ಮೆಗಳಿದ್ದು, ಕೃಷಿ ನೀರಾವರಿ ಹೊಂದಿರುವ ರೈತರು ಜಮೀನುಗಳಲ್ಲೇ ಜಾನುವಾರುಗಳಿಗೆ ಮೇವು ಬೆಳೆದುಕೊಳ್ಳುತ್ತಿದ್ದರು. ಆದರೆ ಬೇಸಿಗೆಯಿಂದಾಗಿ ಮೇವಿನ ಸಮಸ್ಯೆ ತಲೆದೋರಿತ್ತು. ಇತ್ತ ಖುಷ್ಕಿ ಭೂಮಿಯನ್ನು ಹೊಂದಿರುವ ರೈತರು ಅರಣ್ಯದಂಚು, ಜಮೀನು ಆಸುಪಾಸು, ಗ್ರಾಮಗಳ ಸಮೀಪ ಹಾಗೂ ಮೇವಿರುವೆಡೆ ಜಾನುವಾರುಗಳನ್ನು ಮೇಯಲು ಬಿಡುತ್ತಿದ್ದರು. ಕಳೆದ ಮೂರ‌್ನಾಲ್ಕು ವರ್ಷದಿಂದ ಕಾಲಕಾಲಕ್ಕೆ ತಕ್ಕಂತೆ ಮಳೆಯಾಗುತ್ತಿದ್ದರಿಂದ ಮೇವಿನ ಸಮಸ್ಯೆ ಇರಲಿಲ್ಲ. ಆದರೆ ಈ ವರ್ಷ ತಾಲೂಕಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಮೇವಿನ ಸಮಸ್ಯೆ ತೀವ್ರವಾಗಿತ್ತು. ರೈತರು ಹಣ ನೀಡಿ ಮೇವು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿತ್ತು. ಇದರಿಂದ ತುಂಬ ತೊಂದರೆ ಅನುಭವಿಸುತ್ತಿದ್ದ ಕೆಲ ರೈತರು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರು. ಇನ್ನು ಕೆಲವರು ಮಾರಾಟ ಮಾಡಲು ಮುಂದಾದರೂ ಮೇವಿನ ಸಮಸ್ಯೆಯಿಂದ ಕೊಂಡುಕೊಳ್ಳುವವರು ಇಲ್ಲದಂತಾಗಿತ್ತು. ಈ ಹಿನ್ನಲೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಗೋಶಾಲೆಗಳನ್ನು ತೆರೆದು ಮೇವು ಪೂರೈಸುವಂತೆ ಒತ್ತಾಯಿಸಿದ್ದರು.

    ಈ ಸಂಬಂಧ ಡಾ.ಸಿದ್ದರಾಜು ಅವರು ವಿಜಯವಾಣಿಯೊಂದಿಗೆ ಮಾತನಾಡಿ ತಾಲೂಕಿನಲ್ಲಿ ಜಾನುವಾರುಗಳ ಮೇವಿಗೆ ತೀವ್ರ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಗೋಶಾಲೆಯನ್ನು ತೆರೆದು ಬಳ್ಳಾರಿಯಿಂದ ಮೇವನ್ನು ಖರೀದಿಸಿ ಪೂರೈಸಲಾಗಿದೆ. ಇನ್ನು ಮುಂದಿನ ದಿನಗಳಲ್ಲೂ ತೀವ್ರ ಮೇವಿನ ಸಮಸ್ಯೆ ಇರುವ ಭಾಗದಲ್ಲೂ ಗೋಶಾಲೆ ತೆರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts