More

    ಮತದಾನ ಬಹಿಷ್ಕಾರ ನಿರ್ಧಾರ ಹಿಂಪಡೆದ ಪುರಾಣಿ ಪೋಡಿನ ಜನರು

    ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಪುರಾಣಿ ಪೋಡಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಕೊಳ್ಳೇಗಾಲದ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪೋಡಿನ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದ್ದರಿಂದ ಸತ್ಯಾಗ್ರಹ ಕೈ ಬಿಟ್ಟರು.

    ಕಳೆದ 3 ದಿನಗಳಿಂದ ಪುರಾಣಿ ಪೋಡಿನ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಬಿಆರ್‌ಟಿ ಹುಲಿ ಯೋಜನೆ ಪ್ರದೇಶದ ಕಾನನದ ಮಧ್ಯದಲ್ಲಿರುವ ಪೋಡಿಗೆ ಮೂಲ ಸೌಲಭ್ಯಗಳಾದ ರಸ್ತೆ, ವಿದ್ಯುತ್, ಕುಡಿಯುವ ನೀರು ಒದಗಿಸುವಂತೆ ಹತ್ತಾರು ದಶಕಗಳಿಂದಲೂ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಇಲ್ಲಿಗೆ ಇನ್ನೂ ಸೌಲಭ್ಯ ನೀಡಿಲ್ಲ. ಇಲ್ಲಿರುವ ನಾವೂ ಮನುಷ್ಯರೇ. ಆದರೆ ನಮ್ಮನ್ನು ಮೃಗಗಳೆಂದು ಜನಪ್ರತಿನಿಧಿಗಳು, ಸರ್ಕಾರ ಭಾವಿಸಿದಂತಿದೆ. ರಾತ್ರಿಯಾದರೆ ಪಂಜಿನ ಬೆಳಕಿನಲ್ಲೇ ಕಾಲ ದೂಡುವ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಸತ್ಯಾಗ್ರಹ ನಡೆಸುತ್ತಿದ್ದ ಗ್ರಾಮಸ್ಥರ ಸ್ಥಳಕ್ಕೆ ಬಂದ ಎಸಿ ಶಿವಮೂರ್ತಿ ಮಾತನಾಡಿ, ಪುರಾಣಿ ಪೋಡಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಈಗಾಗಲೇ ಸೆಸ್ಕ್‌ನೊಂದಿಗೆ ಮಾತನಾಡಲಾಗಿದೆ. ಈಗಾಗಲೇ 1.70 ಕೋಟಿ ರೂ. ವೆಚ್ಚದಲ್ಲಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಜತೆಗೆ ರಸ್ತೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಬಗ್ಗೆ ಇಲಾಖೆಯಿಂದ ಅನುಮತಿ ಪಡೆದು ರಸ್ತೆ ನಿರ್ಮಿಸಲಾಗುವುದು. ಜತೆಗೆ ಜಲಜೀವನ ಮಿಷನ್ ಯೋಜನೆಯಡಿ ಈಗಾಗಲೇ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಸಂಪರ್ಕ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯೂ ದೂರವಾಗುತ್ತದೆ. ಈ ಕೆಲಸಗಳಿಗೆ ಸುಮಾರು 45 ದಿನಗಳ ಕಾಲಾವಕಾಶ ನೀಡಬೇಕೆಂದು ಗ್ರಾಮಸ್ಥರಿಗೆ ಮಾಹಿತಿ ನೀಡಿ ಮನವೊಲಿಸಿದರು.

    ಎಸಿ ಅವರು ನೀಡಿದ ಭರವಸೆ ಮೇರೆಗೆ ಮತದಾನ ಬಹಿಷ್ಕಾರ ನಿರ್ಧಾರ ವಾಪಸ್ ಪಡೆದ ಗ್ರಾಮಸ್ಥರು ಸತ್ಯಾಗ್ರಹವನ್ನು ಕೈಬಿಟ್ಟರು.
    ಪುರಾಣಿ ಪೋಡಿನ ರಸ್ತೆ, ವಿದ್ಯುತ್, ಕುಡಿಯುವ ನೀರಿನ ಬಗ್ಗೆ ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ನಿಸರ್ಗ ಪ್ರಿಯ, ಮಂಜುಳಾ, ತಾಲುಕು ಮಟ್ಟದ ಅಧಿಕಾರಿ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೋಡಿಗೆ ಕೆಲವು ದಿನಗಳಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆ ಮಾಡಿಸಿಕೊಂಡುವ ಬಗ್ಗೆ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಈಡೇರದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಪೋಡಿನ ಮುಖಂಡರಾದ ದಾಸ, ನಾಗರಾಜು ತಿಳಿಸಿದರು.

    ತಹಸೀಲ್ದಾರ್ ನಿಸರ್ಗ ಪ್ರಿಯಾ, ಕೊಳ್ಳೇಗಾಲ ತಹಸೀಲ್ದಾರ್ ಮಂಜುಳಾ, ಗಿರಿಜನ ಕಲ್ಯಾಣಾಧಿಕಾರಿ ಮಂಜುಳಾ, ತಾಪಂ ಇಒ ಉಮೇಶ್, ಅರಣ್ಯ ಇಲಾಖೆ ಎಸಿಎಫ್ ನಂದಗೋಪಾಲ್, ಆರ್‌ಎಫ್‌ಒ ನಾಗೇಂದ್ರನಾಯಕ್, ಲೋಕೋಪಯೋಗಿ ಎಇಇ ಪುರುಷೋತ್ತಮ್, ಜೆಇ ಸುರೇಂದ್ರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಜೇಶ್, ಸಿಡಿಪಿಒ ಸಕಲೇಶ್ವರ್, ಜಿಪಂ ಎಇಇ ಶ್ರೀನಿವಾಸ್, ಕೆಇಬಿ ಎಇಇ ನಿಂಗರಾಜು, ಸಬ್‌ಇನ್‌ಸ್ಪೆಕ್ಟರ್ ನಂದೀಶ್, ಪಿಡಿಒ ಕಾವ್ಯಾ, ಮುಖಂಡರಾದ ಕೇತಮ್ಮ, ವೆಂಕಟೇಶ್, ದಾಸ್, ನಾಗರಾಜು, ಬಸವೇಗೌಡ್, ಮಹದೇವಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts