More

    ಶ್ರೀದಿವ್ಯಲಿಂಗೇಶ್ವರ ರಥೋತ್ಸವಕ್ಕೆ ಸಕಲ ಸಿದ್ಧತೆ

    ಚಾಮರಾಜನಗರ: ಇತಿಹಾಸ ಪ್ರಸಿದ್ಧ ಹರದನಹಳ್ಳಿ ಕಾಮಾಕ್ಷಾಂಬ ಸಮೇತ ಶ್ರೀದಿವ್ಯಲಿಂಗೇಶ್ವರ ರಥೋತ್ಸವ ಮಾ.31 ರಂದು ಜರುಗಲಿದ್ದು, ದೇವಾಲಯದ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ತಾಲೂಕಿನ ಹರದನಹಳ್ಳಿ-ಬಂಡಿಗೆರೆ ಗ್ರಾಮದಲ್ಲಿ ಮಾ.30 ರಂದು ರಾತ್ರಿಯಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಬಹಳ ಶ್ರದ್ಧಾಭಕ್ತಿಯಿಂದ ಜರುಗಿದೆ. ಮಾ.31 ರಂದು ಭಾನುವಾರ ಹಗಲು ಜೇಷ್ಠ ನಕ್ಷತ್ರದ ಸಮಯದಲ್ಲಿ ಸಲ್ಲುವ ಶುಭ ಮಿಥುನ ಲಗ್ನದ ಶುಭ ನವಾಂಶ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವಕ್ಕೆ ಮಧ್ಯಾಹ್ನ 12.13 ರಂದು ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥವು ಮಧ್ಯಾಹ್ನ 12.28 ಕ್ಕೆ ಸ್ವಸ್ಥಾನ ಸೇರಲಿದೆ. ರಥೋತ್ಸವಕ್ಕೂ ಮೊದಲು ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಇರುವ ಅರವಟಿಕೆಗಳಲ್ಲಿ ಪೂಜೆ ಸಲ್ಲಿಸಿ ರಥಾರೋಹಣ ಮಾಡಲಾಗುತ್ತದೆ. ಹುಲಿ ವೇಷಧಾರಿಗಳು, ನಂದಿ ಕಂಬ, ಕಂಸಾಳೆ ನಗಾರಿ, ದೊಣ್ಣೆ ವರಸೆ ಸೇರಿದಂತೆ ವಿವಿಧ ಕಲಾ ತಂಡಗಳು ರಥೋತ್ಸವದಲ್ಲಿ ಭಾಗವಹಿಸಲಿವೆ. ರಥ ಸಂಚರಿಸುವ ಮಾರ್ಗದುದ್ದಕ್ಕೂ ರಥೋತ್ಸವದಲ್ಲಿ ಪಾಲ್ಗೋಳ್ಳುವ ಭಕ್ತರಿಗೆ ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತದೆ. ಈ ಬಾರಿಯ ಜಾತ್ರಾ ರಥೋತ್ಸವದಲ್ಲಿ ಭಕ್ತರು ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ದೇವಸ್ಥಾನದ ಮುಂಭಾಗ ರಥ ಕಟ್ಟು ಕಾರ್ಯ ಭರದಿಂದ ಸಾಗಿದ್ದು, ಉರಿಬಿಸಿಲಿನಲ್ಲೂ ಇತಿಹಾಸ ಪ್ರಸಿದ್ಧ ದಿವ್ಯಲಿಂಗೇಶ್ವರ ರಥೋತ್ಸವಕ್ಕೆ ಗ್ರಾಮದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

    ತಮಿಳುನಾಡಿನಿಂದ ಬರುವ ಭಕ್ತರು:
    ಐತಿಹಾಸಿಕ ಹಿನ್ನೆಲೆ ಹೊಂದಿರುವ ದಿವ್ಯಲಿಂಗೇಶ್ವರ ದೇವಸ್ಥಾನಕ್ಕೆ ನೆರೆಯ ತಮಿಳುನಾಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹರದನಹಳ್ಳಿ ಗ್ರಾಮದಲ್ಲಿ ಹಿಂದೆ ಕೋಟೆಯಿತ್ತು, ಈಗ ಹಾಳಾದ ಸ್ಥಿತಿಯಲ್ಲಿದೆ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ತನ್ನ ವಿಜಯದ ಸ್ಮರಣಾರ್ಥ ಕ್ರಿ.ಶ 1511 ಈ ದೇವಾಲಯವನ್ನು ನಿರ್ಮಿಸಿದ ಎಂದು ಶಾಸನವೊಂದರಲ್ಲಿ ಹೇಳಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಒಡೆಯರು ಇದನ್ನು ಪೋಷಿಸಿಕೊಂಡು ಬಂದರು. ಈ ದೇಗುಲ ಗೋಪುರ ಮತ್ತು ಗರುಡಗಂಭವನ್ನು ಒಳಗೊಂಡಿದೆ. ಆದರೆ ಈಗ ರಾಜಗೋಪರವು ಶಿಥಿಲಗೊಂಡು ನೆಲಸಮವಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಕಲಾತ್ಮಕ ಶಿವಲಿಂಗವಿದೆ. ಇದರಿಂದ 105 ಅಡಿ ದೂರದಲ್ಲಿ ನಂದೀಶ್ವರನ ವಿಗ್ರಹವಿದೆ. ಇದೊಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದು ಆಕರ್ಷಣೀಯ ಕ್ಷೇತ್ರವಾಗಿದೆ. ಈ ಗ್ರಾಮವನ್ನು ಎಡೆಯೂರು ಸಿದ್ಧಲಿಂಗೇಶ್ವರರ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ತಮಿಳುನಾಡಿನೊಂದಿಗೆ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಅನೇಕ ವರ್ತಕರು ಈ ಊರಿನಲ್ಲಿದ್ದರೆಂದು ಇತಿಹಾಸ ಹೇಳುತ್ತದೆ. ಕ್ರಿ.ಶ.1316ರಲ್ಲಿ ಹೊಯ್ಸಳ ಚಕ್ರವರ್ತಿ ಮೂರನೇ ಬಲ್ಲಾಳ ಈ ದೇವಸ್ಥಾನವನ್ನು ನಿರ್ಮಿಸಿದ್ದನು ಎಂದು ಕೂಡ ನಂಬಲಾಗಿದೆ. ಆದರೆ ಐತಿಹಾಸಿಕ ರಥೋತ್ಸವ ಅಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಶರಣ ಕೇಂದ್ರವಾಗಿದ್ದ ಸ್ಥಳ:
    ಒಂದು ಕಾಳದಲ್ಲಿ ಹಲವು ವೈಭವಗಳಿಂದ ಕೂಡಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ದಿವ್ಯಲಿಂಗೇಶ್ವರ ದೇವಸ್ಥಾನ ಶರಣ ಧರ್ಮ ಕೇಂದ್ರವೂ ಆಗಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಈ ಕಾರಣಕ್ಕೆ ಇದನ್ನು ಶ್ರೀ ಯಡಿಯೂರು ಸಿದ್ದಲಿಂಗೇಶ್ವರರ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ದೇವಾಲಯದಲ್ಲಿ ಮುಖ ಮಂಟಪ, ನಂದಿ ಮಂಟಪ, ಕಲ್ಯಾಣ ಮಂಟಪ ಹಾಗೂ ದೇವ ದೇವತೆಗಳ ಶಿಲ್ಪಗಳಿವೆ. ಈ ಹಿಂದೆ ದ್ವಾರದ ಮೇಲ್ಭಾಗದಲ್ಲಿ 5 ಮಹಡಿಯ ರಾಜಗೋಪುರವಿತ್ತು. 2005ರಲ್ಲಿ ಸಿಡಿಲಿಗೆ ದೇವಸ್ಥಾನದ ರಾಜಗೋಪುರ ಕುಸಿದು ನಾಶವಾಯಿತು. ಅಂದಿನಿಂದ ಇಲ್ಲಿಯ ವರೆವಿಗೂ ಜೀರ್ಣೋದ್ದಾರವಾಗಿಲ್ಲ. ಸುಮಾರು 15 ಕನ್ನಡ ಶಾಸನಗಳು ದೇವಾಲಯದ ಆವರಣದಲ್ಲಿ ಇರುವುದು ಮತ್ತೊಂದು ವಿಶೇಷವಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಬೇಕು ಎನ್ನುವ ಕೂಗು ಪ್ರತಿವರ್ಷದ ರಥೋತ್ಸವ ಸಂದರ್ಭದಲ್ಲಿ ಭಕ್ತರಿಂದ ಕೇಳಿಬರುತ್ತದೆ.

    ವಿದ್ಯುತ್ ದೀಪಗಳ ಅಲಂಕಾರ:
    ಹರದನಹಳ್ಳಿ-ಬಂಡಿಗೆರೆ ಗ್ರಾಮದಲ್ಲಿ ದಿವ್ಯಲಿಂಗೇಶ್ವರ ರಥೋತ್ಸವದ ಅಂಗವಾಗಿ ಮಾ.30 ರಿಂದ ವಿವಿಧ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಗ್ರಾಮದ ಪ್ರತಿ ಮನೆಗಳಲ್ಲೂ ರಥೋತ್ಸವದ ಸಂಭ್ರಮ ಮನೆಮಾಡಿದೆ. ಮಾ.31 ರಂದು ಬ್ರಹ್ಮ ರಥೋತ್ಸವ ಜರುಗಲಿದ್ದು, ಏ.1 ರಂದು ದಿವ್ಯಲಿಂಗೇಶ್ವರ ಸ್ವಾಮಿಗೆ ಸಾಯನೋತ್ಸವ, ಮಾ.2 ರಂದು ರಾತ್ರಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಹಾಗೂ ಮಾ.3 ರಂದು ನಡೆಯಲಿರುವ ಮಂಟಪೋತ್ಸವದ ಮೂಲಕ ರಥೋತ್ಸವಕ್ಕೆ ತೆರೆಬೀಳಲಿದೆ. ದೇವಾಲಯವು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಟ್ರಾಫಿಕ್ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts