More

    ಕರೊನಾ ಹಾಟ್​ಸ್ಪಾಟ್ ತಮಿಳುನಾಡು-ಕೇರಳ ಜತೆ ಗಡಿ ಹಂಚಿಕೊಂಡಿದ್ದರೂ ಚಾಮರಾಜನಗರ ಜಿಲ್ಲೆ ಕರೊನಾಮುಕ್ತವಾಗಿದ್ದು ಹೇಗೆ?

    ಕರೊನಾ ಹಾಟ್​ಸ್ಪಾಟ್ ರಾಜ್ಯಗಳಾದ ತಮಿಳುನಾಡು-ಕೇರಳ ರಾಜ್ಯಗಳ ಜತೆ ಗಡಿ ಹಂಚಿಕೊಂಡಿದ್ದರೂ ಚಾಮರಾಜನಗರ ಜಿಲ್ಲೆ ಕರೊನಾದಿಂದ ಮುಕ್ತವಾಗಿದೆ. ಇದಕ್ಕೆ ಕಾರಣ ಟೀಂ ಚಾಮರಾಜನಗರ ಶ್ರಮ ಹಾಗೂ ಜನರ ಸಹಕಾರ. ಜಿಲ್ಲೆಗೆ ವೈರಸ್ ಬಾರದಂತೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ರಾಜ್ಯಕ್ಕೆ ಮಾದರಿಯಾಗಿವೆ.

    | ಎಸ್.ಸುರೇಶ್​ಕುಮಾರ್

    ಕರೊನಾ ಹಾಟ್​ಸ್ಪಾಟ್ ತಮಿಳುನಾಡು-ಕೇರಳ ಜತೆ ಗಡಿ ಹಂಚಿಕೊಂಡಿದ್ದರೂ ಚಾಮರಾಜನಗರ ಜಿಲ್ಲೆ ಕರೊನಾಮುಕ್ತವಾಗಿದ್ದು ಹೇಗೆ?ಕರೊನಾ ಸೋಂಕು ರಾಜ್ಯದ ಹಲವು ಜಿಲ್ಲೆಗಳನ್ನು ಆವರಿಸಿ ಜನಜೀವನ ವನ್ನು ಬಾಧಿಸುತ್ತಿದೆ. ಇನ್ನೂ ಕೆಲ ಜಿಲ್ಲೆಗಳು ಕರೊನಾಮುಕ್ತ ಆಗಿರುವುದು ತುಸು ನೆಮ್ಮದಿಯ ಸಂಗತಿಯಾಗಿದೆ. ಸುತ್ತಲೂ ಕರೊನಾ ಪೀಡಿತ ಪ್ರದೇಶ ಗಳಿಂದ ಆವೃತ್ತವಾಗಿದ್ದರೂ ನಮ್ಮ ಉಸ್ತುವಾರಿ ಜಿಲ್ಲೆಯಾದ ಚಾಮರಾಜನಗರವು ಕರೊನಾಮುಕ್ತ ಆಗಿರುವುದು ‘ಟೀಂ ಚಾಮರಾಜನಗರ’ದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಜಿಲ್ಲೆಯ ಇದುವರೆಗಿನ ಯಶೋಗಾಥೆಯನ್ನು ನಾನಿಲ್ಲಿ ರ್ಚಚಿಸುತ್ತಿದ್ದೇನೆ. ಮೊದಲಿಗೆ ಜಿಲ್ಲೆ ಕರೊನಾಮುಕ್ತವಾಗಲು ಕಾರಣವಾದ ಅಂಶಗಳನ್ನು ನೋಡೋಣ. ಕರೊನಾ ಅವಧಿಯಲ್ಲಿ ಜಿಲ್ಲೆಯಲ್ಲಿ 43 ಜನ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದ್ದವರನ್ನು ಗುರುತಿಸಿ ಕ್ವಾರಂಟೈನ್​ನಲ್ಲಿರಿಸಿ ತೀವ್ರತರದ ಮೇಲ್ವಿಚಾರಣೆ ನಡೆಸಲಾಯಿತು. ದೆಹಲಿಯ ತಬ್ಲಿಕ್ ಜಮಾತ್ ಧಾರ್ವಿುಕ ಸಮಾವೇಶದಲ್ಲಿ ಜಿಲ್ಲೆಯಿಂದ 107 ಜನ ಭಾಗಿಯಾಗಿದ್ದರು. ಇವರೆಲ್ಲರನ್ನೂ ಶೀಘ್ರವಾಗಿ ಪತ್ತೆ ಮಾಡಿ ಕ್ವಾರಂಟೈನ್​ನಲ್ಲಿ ಇರಿಸುವಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಯಿತು. ಜಿಲ್ಲೆಯ ಮುಸ್ಲಿಂ ಸಮುದಾಯದ ನಾಯಕರು ಹಾಗೂ ತಬ್ಲಿಕ್ ಸಮಾವೇಶದಲ್ಲಿ ಭಾಗಿ ಆಗಿದ್ದವರು ಈ ಕಾರ್ಯಕ್ಕೆ ಸಹಕಾರ ನೀಡಿದರು.

    ಚಾಮರಾಜನಗರದ ನೆರೆಯ ನಂಜನಗೂಡು ಪಟ್ಟಣದಲ್ಲಿನ ಜುಬಿಲೆಂಟ್ ಕಾರ್ಖಾನೆಯಲ್ಲಿ ಕರೊನಾ ಪ್ರಕರಣ ಕಂಡು ಬಂದ ನಂತರ ಸದರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ 52 ಜನ ನೌಕರರನ್ನು ಪತ್ತೆ ಹಚ್ಚಿ, ಅವರನ್ನೆಲ್ಲ ಜಿಲ್ಲೆಯ ಕೇಂದ್ರಸ್ಥಾನಕ್ಕೆ ಸ್ಥಳಾಂತರ ಮಾಡಿ ಕ್ವಾರಂಟೈನ್​ನಲ್ಲಿ ಇಡಲಾಯಿತು. ಕ್ವಾರಂಟೈನ್​ನಲ್ಲಿ ಇದ್ದವರಿಗೆ ಟಿ.ವಿ. ಹಾಗೂ ಇನ್ನಿತರ ಮನರಂಜನಾ ಸೌಲಭ್ಯಗಳನ್ನು ಒದಗಿಸಿ, ಕಟ್ಟುನಿಟ್ಟಾದ ನಿರ್ಬಂಧ ವಿಧಿಸಲಾಗಿತ್ತು. ಕ್ವಾರಂಟೈನ್​ನಿಂದ ಹೊರಬಂದು ಮುಕ್ತವಾಗಿ ಸಂಚರಿಸುವಂಥ ಸಾಹಸಕ್ಕೆ ಅವಕಾಶ ನೀಡಲೇ ಇಲ್ಲ. ಇದು ಉತ್ತಮ ಫಲಿತಾಂಶ ನೀಡಿತು. ಕ್ವಾರಂಟೈನ್​ನಲ್ಲಿ ಇದ್ದವರೆಲ್ಲ ಅವಧಿ ಮುಗಿಸಿದ್ದು, ಇಡೀ ಜಿಲ್ಲೆ ‘ಕ್ವಾರಂಟೈನ್​ವುುಕ್ತ’ವೂ ಆಗಿದೆ.

    ಕ್ವಾರಂಟೈನ್ ವ್ಯಕ್ತಿಗಳ ಮೇಲ್ವಿಚಾರಣೆಯನ್ನು ಜಿಲ್ಲೆಯಲ್ಲಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿಗೆ ವಹಿಸಿದ್ದರಿಂದ, ಆರೋಗ್ಯ ಇಲಾಖೆ ಸಿಬ್ಬಂದಿ ಇತರ ಆರೋಗ್ಯ ಸಂಬಂಧಿತ ಕಾರ್ಯಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಕರೊನಾ ವಿರುದ್ಧದ ಹೋರಾಟದಲ್ಲಿ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಎಂತಹ ಒಳ್ಳೆಯ ಫಲಿತಾಂಶ ನೀಡಬಲ್ಲುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಜಿಲ್ಲೆಯು ಕರೊನಾಮುಕ್ತ ಎಂಬ ಗರಿಮೆ ಗಳಿಸಲು ಕಾರಣೀಭೂತವಾದ ಮತ್ತೊಂದು ಪ್ರಮುಖ ಅಂಶ ಲಾಕ್​ಡೌನ್​ನ ನಿರ್ದಾಕ್ಷಿಣ್ಯ ಜಾರಿ. (Ruthless Enforcement of Lockdown) ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ನೀಡಿದ ನಿರ್ದೇಶನ ಹಾಗೂ ಆದೇಶಗಳನ್ನು ಚಾಚೂತಪ್ಪದೆ ಪಾಲಿಸುವ ಮೂಲಕ ಪೊಲೀಸರು ಹಾಗೂ ಇತರ ಸಿಬ್ಬಂದಿ ಲಾಕ್​ಡೌನ್ ಯಶಸ್ವಿಗೊಳಿಸುವಲ್ಲಿ ನೆರವಾದರು. ವಿಶೇಷವಾಗಿ ಚೆಕ್​ಪೋಸ್ಟ್​ಗಳ ಯಶೋಗಾಥೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಚಾಮರಾಜನಗರವು ಒಂದು ಕಡೆ ಕೇರಳ ರಾಜ್ಯದ ಗಡಿ ಮತ್ತೊಂದು ಕಡೆ ತಮಿಳುನಾಡು ರಾಜ್ಯದ ಗಡಿ, ಮಗದೊಂದು ಕಡೆ ನಂಜನಗೂಡು ಹಾಗೂ ಮಳವಳ್ಳಿ ತಾಲ್ಲೂಕುಗಳ ಗಡಿ ಹೊಂದಿದೆ. ಈ ಎಲ್ಲ ಗಡಿಪ್ರದೇಶಗಳು ಕರೊನಾ ಹಾಟ್​ಸ್ಪಾಟ್​ಗಳಾಗಿದ್ದು, ಈ ಎಲ್ಲ ಹಾಟ್​ಸ್ಪಾಟ್​ಗಳ ನಡುವಿನ ದ್ವೀಪದಂತೆ ಜಿಲ್ಲೆ ಕಂಡುಬರುತ್ತಿದೆ.

    ಕೇರಳದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಭಾಗದಲ್ಲಿರುವ ಕರ್ನಾಟಕ-ಕೇರಳ ಗಡಿಯನ್ನು ಮುಚ್ಚಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಜಿಲ್ಲೆಯಲ್ಲಿ ಬೆಳೆಯುವ ಹಣ್ಣು-ತರಕಾರಿ ಮುಂತಾದ ಕೃಷಿಉತ್ಪನ್ನಗಳಿಗೆ ಕೇರಳದ ವೈನಾಡು ಪ್ರದೇಶ ಉತ್ತಮ ಮಾರುಕಟ್ಟೆಯಾಗಿದ್ದು, ಗಡಿಯನ್ನು ಸಂಪೂರ್ಣವಾಗಿ ಮುಚ್ಚಿದರೆ ಜಿಲ್ಲೆಯ ರೈತರಿಗೆ ತೊಂದರೆಯಾಗುವ ಸಾಧ್ಯತೆಯಿತ್ತು. ಜೀವ ಮತ್ತು ಜೀವನಗಳ ಸಂಘರ್ಷದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರೊಂದಿಗೆ ರ್ಚಚಿಸಿ ಅನ್ನದಾತರಾದ ರೈತರ ಹಿತರಕ್ಷಣೆಗೋಸ್ಕರ ಮುಂಜಾಗ್ರತೆ ಕ್ರಮಗಳ ಮೂಲಕ ಕರೊನಾ ಪ್ರವೇಶ ತಡೆಯುವ ಯೋಜನೆ ರೂಪಿಸಿದೆವು. ಜಿಲ್ಲೆಯ ಎಲ್ಲ ಅಂತರರಾಜ್ಯ ಗಡಿಗಳಲ್ಲಿ ವ್ಯಕ್ತಿಗಳ ಸಂಚಾರ ಸಂಪೂರ್ಣ ನಿರ್ಬಂಧಿಸಿ ಕೇವಲ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಹೊರರಾಜ್ಯಗಳಿಂದ ಆಗಮಿಸುವ ಪ್ರತಿಯೊಂದು ಸರಕುಸಾಗಣೆ ವಾಹನಗಳನ್ನು ಮೂಲೆಹೊಳೆ ಚೆಕ್​ಪೋಸ್ಟ್, ನಾಲ್​ರೋಡ್ ಚೆಕ್​ಪೋಸ್ಟ್, ಅರ್ಧನಾರೀಪುರ ಹಾಗೂ ಪುಣಜನೂರು ಮುಂತಾದ ಚೆಕ್​ಪೋಸ್ಟ್​ಗಳಲ್ಲಿ ತಡೆದು ಡಿಸ್ ಇನ್​ಫೆಕ್ಷನ್ ಮಾಡಿದ ನಂತರವೇ ಒಳಬಿಡಲಾಗುತ್ತಿತ್ತು. ವಾಹನಗಳನ್ನು ಡಿಸ್ ಇನ್​ಫೆಕ್ಷನ್ ಮಾಡುವಲ್ಲಿ ನಾವು ಆರಂಭಿಸಿದ ಈ ಕಾರ್ಯ ರಾಜ್ಯದಲ್ಲಿಯೇ ಪ್ರಥಮ ಪ್ರಯೋಗವಾಗಿತ್ತು ಎಂಬುದನ್ನು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ.

    ಚಾಮರಾಜನಗರದ ಮಾರುಕಟ್ಟೆ ಪ್ರದೇಶದಲ್ಲಿ ಡಿಸ್ ಇನ್​ಫೆಕ್ವೆಂಟ್ ಸುರಂಗ (Disinfectant Tunnel) ಸ್ಥಾಪಿಸುವ ಮೂಲಕ ಹಾಗೂ ಹಣ್ಣು ತರಕಾರಿ ಕೊಳ್ಳುವ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಜಾರಿಮಾಡುವಲ್ಲಿ ಯಶಸ್ವಿಯಾದೆವು. ಗ್ರಾಮೀಣ ಪ್ರದೇಶಗಳಲ್ಲಿಯೂ ಜನ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕಾರ ನೀಡಿದರು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತದೊಂದಿಗೆ ಸಂಪೂರ್ಣ ಸಹಕರಿಸಿದ ಜಿಲ್ಲೆಯ ಜನತೆಯ ನಡವಳಿಕೆ ಇಡೀ ರಾಜ್ಯಕ್ಕೆ ಮಾದರಿಯಾದುದು!

    ಲಾಕ್​ಡೌನ್ ಅವಧಿಯ ಜಿಲ್ಲೆಯ ಜನತೆಗೆ ಅವಶ್ಯಕ ಸಾಮಗ್ರಿಗಳ ಕೊರತೆ ಉಂಟಾಗದಂತೆ ಪೂರೈಕೆ ಸರಪಳಿ (Supply Chain) ಯನ್ನು ಜಿಲ್ಲಾಡಳಿತ ಸಮರ್ಪಕವಾಗಿ ನಿರ್ವಹಿಸಿತು. ಇದರಿಂದ ಜಿಲ್ಲೆಯ ಜನತೆಗೆ ‘ಲಾಕ್​ಡೌನ್’ ಅವಧಿ ‘ಲಾಕ್​ಅಪ್’ ಅವಧಿಯಂತೆ ಭಾಸವಾಗದೆ, ಜನತೆ ಹೆಚ್ಚು ಸಂಯಮದಿಂದ ವರ್ತಿಸಲು ಸಹಾಯವಾಯಿತು.

    ಜಿಲ್ಲೆಯ ಕರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಪ್ರಮುಖ ಅಂಶ ಜನಪ್ರತಿನಿಧಿಗಳ ಸಹಕಾರ. ಜಿಲ್ಲೆಯ ಸಂಸದರಾಗಲಿ, ಶಾಸಕರಾಗಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವನಾದ ನಾನಾಗಲೀ, ಜಿಲ್ಲಾಡಳಿತದ ಕಾರ್ಯಗಳಲ್ಲಿ ಎಂದೂ ಅನಗತ್ಯ ಹಸ್ತಕ್ಷೇಪ ಮಾಡಲಿಲ್ಲ. ಬದಲಿಗೆ ಜಿಲ್ಲಾಡಳಿತದ ಕಾರ್ಯಗಳಿಗೆ ಸಹಕಾರ ನೀಡಿ ಅಧಿಕಾರಿ-ಸಿಬ್ಬಂದಿಯನ್ನು ಹುರಿದುಂಬಿಸುವ ಹಾಗೂ ಜನಸಾಮಾನ್ಯರಿಗೆ ತಿಳಿವಳಿಕೆ ಮೂಡಿಸುವ ಕಾರ್ಯ ವನ್ನು ಜಿಲ್ಲೆಯ ಜನಪ್ರತಿನಿಧಿಗಳು ಸಮರ್ಥವಾಗಿ ನಿರ್ವಹಿಸಿದರು. ಕರೊನಾ ಬಿಕ್ಕಟ್ಟು ಆರಂಭವಾದ ಮೇಲೆ ನಾನು ಇದುವರೆಗೆ ಜಿಲ್ಲೆಗೆ ಏಳು ಬಾರಿ ಭೇಟಿ ನೀಡಿ ಇಡೀ ಜಿಲ್ಲೆಯಾದ್ಯಂತ ಸಂಚರಿಸಿ, ಲಾಕ್​ಡೌನ್ ಅವಧಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರತಿ ಭೇಟಿಯ ಸಂದರ್ಭದಲ್ಲಿಯೂ ಅಧಿಕಾರಿಗಳ ಸಭೆ ನಡೆಸಿ ನಮ್ಮ ಜಿಲ್ಲೆಯನ್ನು ಕರೊನಾಮುಕ್ತವಾಗಿಯೇ ಉಳಿಸಿಕೊಳ್ಳುವ ಬಗೆಗಿನ ಯೋಜನೆ ಕುರಿತು ವಿಸõತವಾಗಿ ರ್ಚಚಿಸಿ ಸಲಹೆ, ಸೂಚನೆ ನೀಡಿದ್ದೇನೆ. ಒಟ್ಟಾರೆ, ಜಿಲ್ಲೆಯನ್ನು ಕರೊನಾಮುಕ್ತವಾಗಿಯೇ ಉಳಿಸಿಕೊಳ್ಳುವಲ್ಲಿ ನಮ್ಮ ‘ಟೀಂ ಚಾಮರಾಜನಗರ’ ಯಶಸ್ವಿಯಾಗಿದೆ! ಸರ್ಕಾರದ ನಿರ್ದೇಶನದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2,44,144 ಮನೆಗಳಿಗೆ ಆರೋಗ್ಯ ಸಿಬ್ಬಂದಿ ತಂಡ ಭೇಟಿ ನೀಡಿ 10,54,144 ಜನರನ್ನು ಭೇಟಿಯಾಗಿ ತೀವ್ರ ಉಸಿರಾಟದ ಸೋಂಕು (Severe Acute Respiratory Infection SARI) ಹಾಗೂ ILI (Influenza Like Illness) ಪ್ರಕರಣಗಳ ಸಮೀಕ್ಷೆ ನಡೆಸಿದೆ. ಇದರಲ್ಲಿ ಯಾವುದೇ SARI ಪ್ರಕರಣ ವರದಿಯಾಗಿಲ್ಲ. ಆದರೆ 63 ILI ಪ್ರಕರಣಗಳು ಕಂಡು ಬಂದಿದ್ದು, ಅವರುಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. 661 ಕ್ಷಯರೋಗಿಗಳು, 2314

    ಎಚ್​ಐವಿ ಸೋಂಕಿತರು, 1,32,394ರಷ್ಟಿರುವ 10 ವರ್ಷದೊಳಗಿನ ಮಕ್ಕಳು ಹಾಗೂ 1,28,522 ರಷ್ಟಿರುವ 60 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಜನರನ್ನು ಗುರುತಿಸಲಾಗಿದ್ದು, ಅವರುಗಳ ಆರೋಗ್ಯ ರಕ್ಷಣೆಗೆ ಗಮನ ನೀಡಲಾಗಿದೆ.

    ಅನಾರೋಗ್ಯ ಪೀಡಿತ ಜನರಿಗೆ ಲಾಕ್​ಡೌನ್ ಸಂದರ್ಭದಲ್ಲಿ ತೊಂದರೆಯಾಗುವುದನ್ನು ತಪ್ಪಿಸಲು ‘ಔಷಧಮಿತ್ರ’ ಎಂಬ ವಿಶೇಷ ಸೇವೆಯ ಮೂಲಕ ಜನರ ಮನೆಬಾಗಿಲಿಗೇ ಔಷಧಗಳನ್ನು ತಲುಪಿಸುವ ಕಾರ್ಯ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡಿದರೂ, ಅದನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಪ್ರತ್ಯೇಕ ಕೋವಿಡ್-19 ಆಸ್ಪತ್ರೆಯನ್ನು ನಿರ್ವಿುಸಲಾಗಿದ್ದು, ಐಸಿಯು ವೆಂಟಿಲೇಟರ್ ಯಾಂತ್ರೀಕೃತ ಲಾಂಡ್ರಿ ಮುಂತಾದ ಸೌಲಭ್ಯಗಳ ಮೂಲಕ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ನಿರ್ವಿುಸಲಾಗಿದೆ.

    ಜಿಲ್ಲೆಗೆ ಭೇಟಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ನಾವು ಕರೊನಾ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮ್ಮೆಲ್ಲರ ಉತ್ಸಾಹವನ್ನು ನೂರ್ಮಡಿಗೊಳಿಸಿದೆ. ಚಾಮರಾಜನಗರ ಜಿಲ್ಲೆಯನ್ನು ಕರೊನಾ ಮುಕ್ತ ಜಿಲ್ಲೆಯನ್ನಾಗಿ ಕಾಯ್ದುಕೊಳ್ಳುವಲ್ಲಿ ಜಿಲ್ಲೆಯ ಜನರು, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ವಿುಕರು, ಅಂಗನವಾಡಿ ಕಾರ್ಯಕರ್ತೆಯರು, ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ, ಸ್ವಯಂಸೇವಾ ಸಂಸ್ಥೆಗಳು, ವಿವಿಧ ಸಂಘಟನೆಗಳು, ಸಂಘಸಂಸ್ಥೆಗಳು ನಿರ್ವಹಿಸುತ್ತಿರುವ ಕಾರ್ಯ, ಸಲ್ಲಿಸುತ್ತಿರುವ ಸೇವೆ ಅಭಿನಂದನಾರ್ಹ. ‘ಕರೊನಾ ಸೋಂಕು ತಡೆಗಟ್ಟುವಲ್ಲಿ ಎಲ್ಲರನ್ನೂ ಒಳಗೊಂಡ ಸಾಂಘಿಕ ಹೋರಾಟ ಉತ್ತಮ ಫಲಿತಾಂಶ ನೀಡಬಲ್ಲುದು’ ಎಂಬುದಕ್ಕೆ ಕರೊನಾ ಮುಕ್ತ ಚಾಮರಾಜನಗರ ಜಿಲ್ಲೆಯ ಯಶೋಗಾಥೆ ರಾಜ್ಯಕ್ಕೆ ಒಂದು ಉತ್ತಮ ನಿದರ್ಶನವಾಗಿದೆ.

    (ಲೇಖಕರು- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವರು)

    ಅರೆಸ್ಟ್ ಆಗಿದ್ದ ಬೆಳಗಾವಿ ಯೋಧ ಬಿಡುಗಡೆ: ಜೈಲಿನಿಂದ ಕರೆದುಕೊಂಡು ಹೋಗಲು ಬಂದಿದ್ದವರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts