More

    ಗುಂಡ್ಲು ನದಿ ಪುನಶ್ಚೇತನಕ್ಕೆ ದಿನಗಣನೆ

    ಗುಂಡ್ಲುಪೇಟೆ: ಕಳೆದ ಕೆಲ ದಿನಗಳಿಂದ ಮಳೆಬೀಳುತ್ತಿರುವ ಪರಿಣಾಮ ತಾಲೂಕಿನ ಕೆರೆಕಟ್ಟೆಗಳು ತುಂಬಿಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಅಸ್ಮಿತೆಯಾದ ಗುಂಡ್ಲು ನದಿ ಪುನಶ್ಚೇತನಗೊಳ್ಳುವ ದಿನಗಣನೆ ಆರಂಭವಾಗಿದೆ.

    ಅರಣ್ಯಪ್ರದೇಶಕ್ಕೆ ಉತ್ತಮ ಮಳೆಬಿದ್ದ ಪರಿಣಾಮ ಭೋರ್ಗರೆದು ಹರಿವ ಹಳ್ಳ-ಕೊಳ್ಳಗಳ ನೀರು ಬತ್ತಿಹೋಗಿರುವ ಕೆರೆಗಳಿಗೆ ಜೀವ ತುಂಬುತ್ತಿದೆ. ಮದ್ದೂರು ಹಾಗೂ ಗೋಪಾಲಸ್ವಾಮಿಬೆಟ್ಟ ವಲಯದ ಕಾಡಂಚಿನ ಕೆರೆಗಳು ತುಂಬಿ ಕೋಡಿಬೀಳುತ್ತಿರುವುದು ಈ ಬಾರಿ ಗುಂಡ್ಲು ನದಿ ಪಾತ್ರದಲ್ಲಿ ನೀರುಹರಿಸುವ ಭರವಸೆ ಮೂಡಿಸಿದೆ.

    ಗುಂಡ್ಲು ನದಿಗೆ ನೀರು ಹರಿಸುವ ಪ್ರಮುಖ ಮೂಲಗಳಾದ ತಾಲೂಕಿನ ಹಿಮವದ್ ಗೋಪಾಲಸ್ವಾಮಿಬೆಟ್ಟ, ಪಾರ್ವತಿ ಬೆಟ್ಟಗಳಿಗೆ ಉತ್ತಮ ಮಳೆ ಬಿದ್ದಿದೆ. ಕಳೆದ 15 ದಿನಗಳಿಂದ ಬೀಳುತ್ತಿರುವ ಪೂರ್ವ ಮುಂಗಾರು ಮಳೆಗೆ ಈಗಾಗಲೇ ಹಂಗಳ ಹೋಬಳಿಯ ಹತ್ತಾರು ಕೆರೆಗಳು ಕೋಡಿ ಬಿದ್ದು ಮುಂದಿನ ಕೆರೆಗಳತ್ತ ಹರಿಯುತ್ತಿವೆ.

    ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಕಟ್ಟೆಹಳ್ಳ ಹಾಗೂ ಸೋನಾಪುರ ಕೆರೆಗಳಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಕಳೆದ 17 ವರ್ಷಗಳಿಂದ ನೀರು ಕಾಣದೆ ಬರಡಾಗಿದ್ದ ದೇವರಹಳ್ಳಿ ಕೆರೆ ಈಗಾಗಲೇ ಅರ್ಧ ಭಾಗ ತುಂಬಿಕೊಂಡಿದೆ. ಹಂಗಳದ ದೊಡ್ಡಕೆರೆಯೂ ಅರ್ಧದಷ್ಟು ತುಂಬಿದ್ದು, ಹೀಗೆ ಮಳೆ ಮುಂದುವರಿದರೆ ಕೋಡಿಬೀಳಲಿದೆ. ಇತ್ತ ಪಾರ್ವತಿ ಬೆಟ್ಟಕ್ಕೂ ಹಲವಾರು ಬಾರಿ ದೊಡ್ಡ ಮಳೆ ಬಿದ್ದ ಪರಿಣಾಮ ಚೆಕ್ ಡ್ಯಾಂ ತುಂಬಿ ಬಿಲಸರ್ಗೆಯ ಮೂಲಕ ನೀರು ಹರಿಯುತ್ತಿದೆ. ಬೇಗೂರು ಸಮೀಪದ ಹಾಲಹಳ್ಳಿ ಡ್ಯಾಂ ತುಂಬಿ ಗುಂಡ್ಲು ಮಾರ್ಗದಲ್ಲಿ ಸೇರುತ್ತಿದೆ.

    ಕಳೆದ ಮೂರು ವರ್ಷದ ಹಿಂದೆ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ‘ಗುಂಡ್ಲು ನದಿ ಉಳಿಸಿ’ ಅಭಿಯಾನ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತ್ತು. ಜತೆಗೆ ಸಂಘ ಸಂಸ್ಥೆಗಳ ಜತೆಗೂಡಿ ಮುಚ್ಚಿಹೋಗಿದ್ದ ಕಲ್ಯಾಣಿಗಳ ಹೂಳೆತ್ತಿಸುವುದು, ಬೆಟ್ಟಗುಡ್ಡಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಸಾವಿರಾರು ಸಸಿಗಳನ್ನು ನೆಡಿಸುವ ಮೂಲಕ ವಿದ್ಯಾರ್ಥಿಗಳನ್ನು ನದಿ ಪುನಶ್ಚೇತನ ಅಭಿಯಾನದಲ್ಲಿ ತೊಡಗಿಸಿತ್ತು. ಮರು ವರ್ಷ ಭಾರಿ ಮಳೆ ಬಿದ್ದು ಹಳ್ಳಕೊಳ್ಳಗಳು ತುಂಬಿಹರಿಯುವ ಜತೆಗೆ ತಾಲೂಕಿನ ಕೆರೆಗಳಿಗೆ ನದಿಮೂಲದಿಂದ ನೀರು ಹರಿಸಿದ್ದರಿಂದ 2022ರ ಅಕ್ಟೋಬರ್ 22ರಂದು ಗುಂಡ್ಲು ನದಿ ಪಾತ್ರದಲ್ಲಿ ನೀರು ಹರಿಯುವ ಮೂಲಕ ದೊಡ್ಡ ಮಳೆ ಬಿದ್ದರೆ ನದಿ ಪುನಶ್ಚೇತನವಾಗುವ ಭರವಸೆ ಮೂಡಿಸಿತ್ತು.

    ಮೇ ತಿಂಗಳಿನಲ್ಲಿ ವಾಡಿಕೆ ಮಳೆ 55 ಮಿ.ಮೀ. ಇದ್ದರೆ ಈ ಬಾರಿ ಗುರುವಾರದವರೆಗೆ 138.3 ಮಿಮಿ ಬಿದ್ದಿದೆ. ತಾಲೂಕಿನ ಹಂಗಳ ಹಾಗೂ ಕಸಬಾ ಹೋಬಳಿಗಳಿಗೆ ಅತಿ ಹೆಚ್ಚಿನ ಮಳೆಬಿದ್ದಿದೆ.
    ಕಿರಣ್ ಕುಮಾರ್, ಕೃಷಿ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts