More

    ಒಳ್ಳೆಯ ಹುಡುಗಿ ಇದ್ದಾಳೆ, ಈ ಬಾರಿ ನಾನೇ ಮದ್ವೆ ಆಗ್ತೀನಿ ಅಂದಗಾಯ್ತು: ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಕುರಿತು ಸಚಿವ ಚಲುವರಾಯಸ್ವಾಮಿ ವ್ಯಂಗ್ಯ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ಅಭ್ಯರ್ಥಿ ಎಂದೇಳಿ ಇದೀಗ ಅವರೇ ಸ್ಪರ್ಧೆ ಮಾಡುತ್ತಿದಾರೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
    ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಯಾಚನೆ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದಿಂದ ಎಚ್‌ಡಿಕೆ ಸ್ಪರ್ಧೆ ಮಾಡುತ್ತಿರುವುದು ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಆದಂತೆ ಆಗುತ್ತಿದೆ. ಒಳ್ಳೆಯ ಹುಡುಗಿ ಇದ್ದಾಳೆ, ಈ ಬಾರಿ ನಾನೇ ಮದ್ವೆ ಆಗುತ್ತೇನೆ. ಪುಟ್ಟರಾಜು, ನಿನಗೆ ಮುಂದೆ ಒಳ್ಳೆಯ ಹುಡುಗಿ ಹುಡುಕೋಣ ಎಂದಿದ್ದಾರೆ. ಒಟ್ಟಾರೆ ಒಂದು ತಿಂಗಳಿನಿಂದ ಅಳೆದು ತೂಗಿ ಹೆಸರು ಘೋಷಣೆ ಮಾಡಿದ್ದಾರೆಂದು ಛೇಡಿಸಿದರು.
    ಎಚ್‌ಡಿಕೆ ಹೋದ ಕಡೆಯೆಲ್ಲ ನನ್ನ ಕರ್ಮ ಭೂಮಿ ಎನ್ನುತ್ತಾರೆ. ಮಂಡ್ಯ, ಹಾಸನ, ಕೋಲಾರ ಮೂರು ಆದರೆ ಪರವಾಗಿಲ್ಲ. ಚಿಕ್ಕಬಳ್ಳಾಪುರ, ತುಮಕೂರಿಗೂ ಹೋಗಿ ಬಂದಿದ್ದಾರೆ. ಪಾಪ ಆ ಪುಟ್ಟರಾಜುನಿಂದ ಸಭೆ ಮಾಡಿಸಿದ್ದರು. ಆತ ಎಲ್ಲ ದೇವಸ್ಥಾನಗಳನ್ನು ಸುತ್ತಿ ಬಂದ. ಆದರೆ ಈಗ ಹುಡುಗಿ ಚೆನ್ನಾಗಿದ್ದಾಳೆ, ನಾನೆ ಮದ್ವೆ ಆಗುತ್ತೇನೆ ಎಂದಿದ್ದಾರೆ. ನಾನು ಕಾಂಗ್ರೆಸ್ ಸೇರಿ ಹೇಗೋ ಬಚಾವ್ ಆದೆ. ಆದರೆ ಪುಟ್ಟರಾಜ, ಪಾಪ ಅವನ ಕಥೆ ಈಗ ಏನಾಗಬೇಕು ಎಂದು ಹೇಳಿದರು.
    ಕಳೆದ ಚುನಾವಣೆಯಲ್ಲಿ ಸುಮಲತಾ ಅವರನ್ನು ನಿಂದಿಸಿದ್ದರು. ಈಗ ಸಹೋದರಿ ಎನ್ನುತ್ತಿದ್ದಾರೆ. ಆಗಲೇ ಈ ಮಾತು ಆಡಿದ್ದರೆ ಅಂಬರೀಷ್ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ನನ್ನ ಮಗ ಗೆದ್ದರೂ ಒಂದೆ, ಅಕ್ಕ ಗೆದ್ದರೂ ಒಂದೆ ಎನ್ನಬಹುದಿತ್ತು ಎಂದು ಸಚಿವ ಚಲುವರಾಯಸ್ವಾಮಿ, ನಮ್ಮ ಮಂಡ್ಯ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ. ನಾವು, ನಮ್ಮ ಜನ ಏನೋ ಮಾಡಿಕೊಳ್ಳುತ್ತೇವೆ. ನೀವು ಇನ್ನೊಮ್ಮೆ ಸಿಎಂ ಹಾಗೂ ಪ್ರಧಾನಿ ಆಗಿ. ನಿಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಲ್ಲ. ಆದರೆ ನಮ್ಮ ನೀವು ಜಿಲ್ಲೆಗೆ ಬರಬೇಡಿ. ಮಂಡ್ಯವನ್ನು ನಾವು ಹೇಗೋ ಅಭಿವೃದ್ಧಿ ಮಾಡಿಕೊಳ್ಳುತ್ತೇವೆ ಎಂದರು.
    ಶಾಸಕ ರವಿಕುಮಾರ್ ಗಣಿಗ, ಅಭ್ಯರ್ಥಿ ಸ್ಟಾರ್ ಚಂದ್ರು, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಸದಸ್ಯ ಮರಿತಿಬ್ಬೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಶಾಸಕ ಎಚ್.ಬಿ.ರಾಮು, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಪ್ಪ ಇತರರಿದ್ದರು. ಇದೇ ಸಂದರ್ಭದಲ್ಲಿ ನೂರಾರೂ ಕಾರ್ಯಕರ್ತರು ವಿವಿಧ ಪಕ್ಷದ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts