More

    ರೋಣ ಗೌಡರ ಮುಂದೆ ‘ಸವಾಲುಗಳ ಸಂತೆ’

    ನರೇಗಲ್ಲ: ಜಿಲ್ಲೆಯ ಅತಿದೊಡ್ಡ ಹೋಬಳಿ ಎಂಬ ಖ್ಯಾತಿ ಪಡೆದ ನರೇಗಲ್ಲ ನೀರು, ಸೂರು ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ನೂತನ ಶಾಸಕರ ಬಗ್ಗೆ ಸ್ಥಳೀಯರಲ್ಲಿ ಹಲವು ನಿರೀಕ್ಷೆಗಳು ಗರಿಗೆದರಿವೆ.

    ನರೇಗಲ್ಲ ಪಟ್ಟಣವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಜಿ.ಎಸ್. ಪಾಟೀಲರು ಶಾಸಕರಾದಾಗ ರೋಣ ಹಾಗೂ ಕಳಕಪ್ಪ ಬಂಡಿ ಶಾಸಕರಾದಾಗ ಗಜೇಂದ್ರಗಡ ಪಟ್ಟಣವನ್ನು ಅಭಿವೃದ್ಧಿಪಡಿಸಿ, ನರೇಗಲ್ಲ ಪಟ್ಟಣವನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋಪ ಸ್ಥಳೀಯರಲ್ಲಿದೆ.
    ಮನೆ ಹಂಚಿಕೆ: ಪಟ್ಟಣದ ವಸತಿ ರಹಿತರಿಗಾಗಿ ದ್ಯಾಂಪುರ ಹತ್ತಿರ 40 ಎಕರೆಯಲ್ಲಿ 1,450 ಆಶ್ರಯ ಮನೆಗಳ ನಿರ್ಮಾಣಕ್ಕೆ 2015ರಲ್ಲಿ ಚಾಲನೆ ನೀಡಲಾಗಿತ್ತು. ಕೇವಲ 150 ಮನೆಗಳು ಪೂರ್ಣಗೊಂಡಿದ್ದು, ಉಳಿದ ಮನೆಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ.

    6 ತಿಂಗಳ ಹಿಂದೆ 900ಕ್ಕೂ ಅಧಿಕ ಫಲಾನುಭವಿಗಳಿಗೆ ಮನೆ ನೋಂದಣಿ ಮಾಡಿಕೊಡಲಾಗಿದೆ. ಆದರೆ, ಮನೆಯ ಹಸ್ತಾಂತರವಾಗಿಲ್ಲ. ಅಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಚರಂಡಿ ವ್ಯವಸ್ಥೆ ಆಗಬೇಕಿದೆ.

    ಹೆದ್ದಾರಿ ಕಾಮಗಾರಿ: 2016ರಲ್ಲಿ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆದ 318 ಕಿ.ಮೀ (ಕೈಗಾ- ಗದಗ- ನರೇಗಲ್ಲ- ಗಜೇಂದ್ರಗಡ- ಕುಷ್ಟಗಿ-ಇಲಕಲ್ಲ) ಹೆದ್ದಾರಿ ಕಾಮಗಾರಿ ಆರಂಭವಾಗುವ ಲಕ್ಷಣಗಳಿಲ್ಲ.

    ಪಟ್ಟಣದ ಅತಿ ದೊಡ್ಡ ಕರೆಯಾಗಿರುವ ಹಿರೇಕೆರೆಯಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳುವಂತೆ ದಶಕಗಳಿಂದ ಕೇಳಿಕೊಳ್ಳಲಾಗುತ್ತಿದೆ. ಮಾರನಬಸರಿಯಲ್ಲಿ ಪ್ರೌಢಶಾಲೆ ಕಟ್ಟಡಗಳ ಕಾಮಗಾರಿಗಳು ಕುಂಟುತ್ತ ಸಾಗಿದೆ.

    ಉಪ ತಹಸೀಲ್ದಾರ್ ಕಚೇರಿ: ನರೇಗಲ್ಲ ಪಟ್ಟಣದ ಉಪ ತಹಸೀಲ್ದಾರ್ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ಗ್ರಾಮ ಲೆಕ್ಕಾಧಿಕಾರಿಗಳ ವಸತಿ ಗೃಹದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಳೆಯ ಕಟ್ಟಡದಲ್ಲಿ ಹೊಸದಾಗಿ ಕಚೇರಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ.

    ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಸೇರಿ ಉಪ ತಹಸೀಲ್ದಾರ್ ಕಚೇರಿ ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕಿದೆ. ಒಂದು ವರ್ಷದಿಂದ ಉಪ ತಹಸೀಲ್ದಾರ್ ಕಚೇರಿಯನ್ನು ಗುತ್ತಿಗೆ ಆಧಾರದ ನೌಕರರು ನಿಭಾಯಿಸುತ್ತಿದ್ದು, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಎಸ್‌ಡಿಎ ಮತ್ತು ಎಫ್‌ಡಿಎ ಸೇರಿ ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.

    ಕಾಯಂ ಇಂಜಿನಿಯರ್ ಅಗತ್ಯ: ನರೇಗಲ್ಲ ಪಟ್ಟಣ ಪಂಚಾಯಿತಿಗೆ ಕಾಯಂ ಇಂಜಿನಿಯರ್ ಇಲ್ಲದ ಕಾರಣ ಕಾಮಗಾರಿಗಳು ಬೇಕಾಬಿಟ್ಟಿಯಾಗಿ ನಡೆಯುತ್ತಿವೆ. ವರ್ಷಕ್ಕೆ ಇಬ್ಬರು- ಮೂವರು ಇಂಜಿನಿಯರ್‌ಗಳು ಬದಲಾಗುತ್ತಿದ್ದಾರೆ.

    ಪ್ರಭಾರಿಯಾಗಿ ನೇಮಕವಾಗುವ ಇಂಜಿನಿಯರ್ ವಾರದಲ್ಲಿ ಎರಡು- ಮೂರು ದಿನ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗುತ್ತದೆ. ಆದರೂ, ಅವರ ಮೂಲ ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿಲ್ಲ.

    ಪ.ಪಂ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಸಾಕಷ್ಟು ದೂರುಗಳಿದ್ದು, ಈಗಾಗಲೇ ಲಕ್ಷಾಂತರ ರೂಪಾಯಿ ಅವ್ಯವಹಾರದ ಮೇಲೆ ಮುಖ್ಯಾಧಿಕಾರಿ ಅಮಾನತಾಗಿದ್ದಾರೆ. ಪ.ಪಂ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಬೇಕಿದೆ.

    ಪ್ರವಾಸಿ ಮಂದಿರ ದೂರ: ಗದಗ ರಸ್ತೆಯಲ್ಲಿ 10 ವರ್ಷಗಳ ಹಿಂದೆ ಪ್ರಾರಂಭವಾದ ಪ್ರವಾಸಿ ಮಂದಿರ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈಗಾಗಲೇ ಪ್ರವಾಸಿ ಮಂದಿರಕ್ಕೆ 20 ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗಿದ್ದು, ಜಮೀನಿನ ತಕರಾರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ವ್ಯಾಜ್ಯ ಬಗೆಹರಿಸಬೇಕಾಗಿದೆ.
    ಹೀಗೆ ಹತ್ತು ಹಲವು ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದ್ದು, ನೂತನ ಶಾಸಕ ಜಿ.ಎಸ್. ಪಾಟೀಲ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಹೋಬಳಿಯ ಜನರಿದ್ದಾರೆ.

    ರೋಣ ಮತಕ್ಷೇತ್ರದ ಜನರು ನಿರೀಕ್ಷೆಗೂ ಮೀರಿ ಮತ ಹಾಕಿ ಸೇವೆಗೆ ಅವಕಾಶ ನೀಡಿದ್ದಾರೆ. ಅವರ ಆಶೋತ್ತರಗಳಿಗೆ ಸಕರಾತ್ಮಕವಾಗಿ ಸ್ಪಂದಿಸುವ ಕೆಲಸ ಮಾಡುತ್ತೇನೆ. ನರೇಗಲ್ಲ ಹೋಬಳಿಯ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಯೋಜನೆ ಹಮ್ಮಿಕೊಳ್ಳುವೆ.ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
    ಜಿ.ಎಸ್. ಪಾಟೀಲ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts