More

    ಅಧಿಕಾರಿಗಳ ನಿರ್ಲಕ್ಷೃಕ್ಕೆ ಜನತೆ ಹೈರಾಣ

    ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ಚಳ್ಳಕೆರೆ ಪುರಸಭೆಯನ್ನು ಇತ್ತೀಚಿಗೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, 27 ವಾರ್ಡ್‌ಗಳನ್ನು 31 ಆಗಿ ವಿಂಗಡಣೆ ಮಾಡಲಾಗಿದೆ. ಆದರೆ, ಇದರಿಂದ ಸಾರ್ವಜನಿಕರಿಗೆ ಕಿಂಚಿತ್ತು ಲಾಭವಾಗಿಲ್ಲ.

    ಕೆಲಸ ಕಾರ್ಯಗಳು ಮತ್ತಷ್ಟು ವಿಳಂಬವಾಗುತ್ತಿವೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜನರ ಸಮಸ್ಯೆಗಳು ಜಟಿಲವಾಗಿವೆ.

    ಸಾರ್ವಜನಿಕರ ಸಮಸ್ಯೆಗಳಾದ ಸ್ವಚ್ಛತೆ, ಮನೆಯ ದಾಖಲೆ, ಇ-ಸ್ವತ್ತು, ಖಾತೆ, ಕಂದಾಯ ಕೆಲಸ ಸಕಾಲದ ಯೋಜನೆಯಡಿ ಇ-ಸ್ವತ್ತು 7 ದಿನಕ್ಕೆ ಆಗಬೇಕಿದೆ.

    40 ದಿನಕ್ಕೆ ಆಗಬೇಕಾದ ಖಾತೆ ಕೆಲಸಕ್ಕೆ ಆರೇಳು ತಿಂಗಳುಗಳ ಕಾಲ ಅಲೆದಾಡುವ ಫಲಾನುಭವಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಷ್ಟಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

    ಕೈಯಿಂದ ಕಂದಾಯ ಕಟ್ಟ ಬೇಕಾದ ದಾಖಲಾತಿಗಳನ್ನು ಒದಗಿಸಿದರೂ, ಸಕಾಲಕ್ಕೆ ಖಾತೆ ಮತ್ತು ಇ-ಸ್ವತ್ತು ದಾಖಲೆ ಜನರಿಗೆ ದೊರೆಯುತ್ತಿಲ್ಲ.

    ಹೊಸದಾಗಿ ಮನೆ ಕಟ್ಟಿಕೊಳ್ಳುವವರಿಗೆ ನಿಗದಿತ ಬ್ಯಾಂಕ್ ವ್ಯವಹಾರಗಳಿಗೂ ಯಾವುದೇ ಪ್ರಯೋಜನವಾಗದೆ, ತಿಂಗಳುಗಟ್ಟಲೆ ಅಲೆದಾಡುವವರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂಬುದು ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್ ಆರೋಪ.

    ನಗರಸಭೆಯಲ್ಲಿ ಪದೇ ಪದೆ ಪೌರಾಯುಕ್ತರ ಬದಲಾವಣೆ ಆಗುತ್ತಿದೆ. ಇದರಿಂದ ಸಿಬ್ಬಂದಿ ಮೇಲೆ ಬಿಗಿ ಹಿಡಿತ ಇಲ್ಲದೆ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ.

    ಕೆಲ ಸಿಬ್ಬಂದಿ ಆರೇಳು ವರ್ಷದಿಂದ ವರ್ಗಾವಣೆ ಆಗದೆ ಇರುವುದು ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣವಾಗಿದೆ.

    2019ರಲ್ಲಿ ಪೌರಾಯುಕ್ತ ಸಿ.ಆರ್.ಪರಮೇಶ್ವರ್ ವರ್ಗಾವಣೆ ನಂತರ 2023ರ ವರೆಗೆ 15 ಹಂತದಲ್ಲಿ ಆಯುಕ್ತರ ಬದಲಾವಣೆ ಆಗಿರುವ ಪರಿಣಾಮ ನಗರಸಭೆಯ ಕೆಲಸ ಕಾರ್ಯಗಳ ನನೆಗುದಿಗೆ ಬಿದ್ದಿವೆ.

    ಬಹುತೇಕ ನಗರಸಭಾ ಸದಸ್ಯರು, ಒಂದೆರೆಡು ದಿನದ ಕೆಲಸಕ್ಕೆ ತಿಂಗಳುಗಟ್ಟಲೆ ಅಲೆದಾಡುವ ಒತ್ತಡಕ್ಕೆ ಸಿಲುಕಿದ್ದಾರೆ.

    ಘನ ತ್ಯಾಜ್ಯ ವಿಲೇವಾರಿ ಮಾಡುವ ಘಟಕ ಪರಿಶೀಲಿಸಿದ್ದು, ಮೂಲ ಸೌಕರ್ಯಕ್ಕೆ ಯೋಜನೆ ರೂಪಿಸಲಾಗುವುದು. ನಗರದ ಸ್ವಚ್ಛತಾ ಸಮತೋಲನಕ್ಕೆ 12 ಜನ ಪೌರಕಾರ್ಮಿಕರ ತುರ್ತು ನೇಮಕ ಅಗತ್ಯವಿದೆ. ಖಾತೆ, ಇ-ಸ್ವತ್ತು ಫಲಾನುಭವಿಗಳ ಅರ್ಜಿ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಟಿ.ಲೀಲಾವತಿ, ಪೌರಾಯುಕ್ತೆ, ಚಳ್ಳಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts