More

    ಏಳು ವರ್ಷಗಳ ನಂತರ ದಾಖಲೆ ದರ ಕಂಡ ಚಾಲಿ

    ಶಿರಸಿ: ಲಾಕ್​ಡೌನ್ ಘೊಷಣೆ ಬೆನ್ನಿಗೇ ಅಡಕೆ ದರ ಹಿಮ್ಮುಖವಾಗಿ ಬೆಳಗಾರರು ಕಂಗಾಲಾಗಿದ್ದರು. ಆದರೀಗ ಲಾಕ್​ಡೌನ್ ತೆರವಿನ ಜತೆ ಅಡಕೆಗೆ ದಾಖಲೆಯ ದರ ಲಭಿಸುತ್ತಿದೆ. ವರ್ಷದ ಆರಂಭದಿಂದ ಲಾಕ್​ಡೌನ್ ಘೊಷಣೆವರೆಗೂ 35 ಸಾವಿರ ರೂ. ಆಸುಪಾಸಿನಲ್ಲಿದ್ದ ಚಾಲಿ ಅಡಕೆ ಬುಧವಾರದ ಮಾರುಕಟ್ಟೆಯಲ್ಲಿ 40098 ರೂ. ಪ್ರತಿ ಕ್ವಿಂ.ಗೆ ಮಾರಾಟವಾಗಿದೆ. ಇದು 7 ವರ್ಷಗಳ ಬಳಿಕ ಚಾಲಿ ಅಡಕೆಗೆ ಸಿಕ್ಕ ಉತ್ತಮ ದರವಾಗಿದೆ.
    ವರವಾದ ಲಾಕ್​ಡೌನ್:
    ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರೈತರು ಬೆಳೆಸಾಲ ಹಾಗೂ ಇತರ ಸಾಲಗಳ ಮರುಪಾವತಿ ಮಾಡುವುದು ನಿಯಮ. ಬೆಳೆ ಮಾರಾಟ ಮಾಡಿದ ಹಣದಲ್ಲಿ ಸಾಲ ತೀರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಆದರೆ ಈ ವರ್ಷ ಇದೇ ವೇಳೆಯಲ್ಲಿ ಸರ್ಕಾರ ಲಾಕ್​ಡೌನ್ ಘೊಷಿಸಿದ್ದರಿಂದ ಹೆಚ್ಚಿನ ಬೆಳೆಗಾರರು ಅಡಕೆ ಮಾರಾಟ ಮಾಡಲಾಗದೆ ದಾಸ್ತಾನಿಟ್ಟಿದ್ದರು. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗದ ಕಾರಣ ಲಾಕ್​ಡೌನ್ ಬಳಿಕ ಏಕಾಏಕಿ ದರ ಏರುಮುಖವಾಗಿದೆ. ಇದು ಅಡಕೆ ಮಾರಲಾಗದೇ ಇದ್ದ ಬೆಳೆಗಾರರಿಗೆ ಲಾಭವಾಗುವಂತಾಗಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
    ಹೆಚ್ಚಿದ ಆವಕ: ಲಾಕ್​ಡೌನ್ ಸಡಿಲಿಕೆ ಆಗುತ್ತಿದ್ದಂತೆ ಬೆಳೆಗಾರರು ಏಕಾಏಕಿ ಮಾರುಕಟ್ಟೆಗೆ ಮಹಸೂಲನ್ನು ತಂದು ಮಾರುತ್ತಿದ್ದಾರೆ. ಸಹಕಾರಿ ಸಂಸ್ಥೆಗಳು, ಹೊರಗಿನ ವ್ಯಾಪಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಡಕೆ ವಹಿವಾಟಲ್ಲಿ ಹೆಸರಾದ ಟಿಎಸ್​ಎಸ್ ಸಂಸ್ಥೆಯೊಂದರಲ್ಲೇ ನಿತ್ಯ 1 ಸಾವಿರ ಕ್ವಿಂ.ಗೂ ಹೆಚ್ಚಿನ ಅಡಕೆ ಮಾರಾಟವಾಗುತ್ತಿದೆ. ಉತ್ತಮ ಧಾರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ದಿನದಿಂದ ದಿನಕ್ಕೆ ಹೆಚ್ಚಿನ ಮಹಸೂಲು ಆಗಮಿಸುತ್ತಿದೆ.

    ಅಡಕೆಗೆ ಸಂಬಂಧಿಸಿ ಅದರ ನಿರ್ವಹಣೆ, ಕೂಲಿ ದರದಲ್ಲಿಯೂ ಹೆಚ್ಚಳವಾಗಿದ್ದು, ಪೆಟ್ರೋಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬೆಳೆಗಾರರ ಜೀವನ ಕಷ್ಟದಲ್ಲಿದೆ. ಚಾಲಿ ಅಡಕೆಯ ಪ್ರತಿ ಕ್ವಿಂಟಾಲ್​ಗೆ 40 ಸಾವಿರ ರೂ. ಬಂದಿರುವುದು ಯೋಗ್ಯ ದರವೇ ಆಗಿದೆ. ಈ ದರ ಸ್ಥಿರವಾಗಿದ್ದರೆ ಇನ್ನಷ್ಟು ಅನುಕೂಲ ಆಗುತ್ತದೆ.
    | ಗಣೇಶ ಹೆಗಡೆ- ಅಡಕೆ ಬೆಳೆಗಾರ
    ವರ್ಷದ ಆರಂಭದಿಂದಲೂ ಮಾರುಕಟ್ಟೆಯಲ್ಲಿಯೂ ಅಡಕೆ ದಾಸ್ತಾನಿಲ್ಲ. ಅಲ್ಲದೇ, ದೇಶದಲ್ಲಿ ಆಮದು ಅಡಕೆ ಬರುತ್ತಿಲ್ಲ. ಸಧ್ಯ ಲಾಕ್​ಡೌನ್ ತೆರವಾದ ಕಾರಣ ಅಡಕೆ ಉತ್ಪನ್ನ ಹೆಚ್ಚಿನದಾಗಿ ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೇ, ವ್ಯಾಪಾರಸ್ಥರಿಂದ ಬೇಡಿಕೆಯೂ ಹೆಚ್ಚಿದೆ. ಈ ಕಾರಣ ರೈತರಿಗೆ ಅತ್ಯುತ್ಮ ದರ ಲಭಿಸುತ್ತಿದೆ.
    | ರವೀಶ ಹೆಗಡೆ- ಟಿಎಸ್​ಎಸ್ ಪ್ರಧಾನ ವ್ಯವಸ್ಥಾಪಕ

    2014ರಿಂದ ಈವರೆಗೆ ಜೂನ್ ತಿಂಗಳಲ್ಲಿನ ಚಾಲಿ ದರ
    ವರ್ಷ ದರ ಸರಸರಿ ಪ್ರತಿ ಕ್ವಿಂಟಾಲ್​ಗೆ
    2014 41000- 42000
    2015 24000- 25000
    2016 25000- 26000
    2017 32000- 33000
    2018 31000- 32000
    2019 28000- 29000
    2020 30000- 31000
    2021 40098-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts