More

    ಟೀಮ್ ಇಂಡಿಯಾಗೆ ವರವಾದ ಕನ್‌ಕಷನ್ ಬದಲಿಗ! ಇಲ್ಲಿದೆ ಈ ನಿಯಮದ ವಿವರ…

    ಕ್ಯಾನ್‌ಬೆರಾ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜಾ ಬಿರುಸಿನ ಆಟವಾಡಿ ಭಾರತ ತಂಡದ ಮೊತ್ತವನ್ನು ಏರಿಸಿದರು. ಆದರೆ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಅವರ ತಲೆಗೆ ಚೆಂಡೇಟು ಬಿದ್ದಿತು. ಇದರಿಂದ ತಲೆಸುತ್ತುವಿಕೆಯಿಂದ ಬಳಲಿದ ಜಡೇಜಾ ಪಂದ್ಯದಲ್ಲಿ ಮುಂದುವರಿಯುವುದು ಅಸಾಧ್ಯವಾಯಿತು. ಇದು ಭಾರತ ತಂಡಕ್ಕೆ ಓರ್ವ ಬೌಲರ್ ಕೊರತೆ ಎದುರಿಸುವ ಅಪಾಯವನ್ನು ಸೃಷ್ಟಿಸಿತ್ತು. ಆದರೆ ಈ ವೇಳೆ ಐಸಿಸಿಯ ಕನ್‌ಕಷನ್ ನಿಯಮ ಭಾರತ ತಂಡಕ್ಕೆ ನೆರವಾಯಿತು. ಇದರಿಂದಾಗಿ ಯಜುವೇಂದ್ರ ಚಾಹಲ್ ರೂಪದಲ್ಲಿ ಮತ್ತೋರ್ವ ಬೌಲರ್‌ನ ಸೇವೆಯನ್ನು ಭಾರತ ತಂಡ ಪಡೆಯಿತು. ಚಾಹಲ್ ಅಮೋಘ ಬೌಲಿಂಗ್ ಮೂಲಕ ಭಾರತ ತಂಡಕ್ಕೆ ಪಂದ್ಯವನ್ನೂ ಗೆಲ್ಲಿಸಿಕೊಟ್ಟರು. ಭಾರತಕ್ಕೆ ವರವಾದ ಕನ್‌ಕಷನ್ ನಿಯಮದ ವಿವರಣೆಗಾಗಿ ಈ ಸ್ಟೋರಿ ಓದಿ…

    ಸಾಮಾನ್ಯವಾಗಿ ಬದಲಿ ಆಟಗಾರನಾಗಿ ಆಡುವ ಆಟಗಾರ ಕೇವಲ ಫೀಲ್ಡಿಂಗ್​ಗೆ ಸೀಮಿತವಾಗಿರುತ್ತಾನೆ. ಆದರೆ ಐಸಿಸಿಯ ಕನ್‌ಕಷನ್ (ಮಿದುಳು ಇಂಜುರಿ) ನಿಯಮದನ್ವಯ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬದಲಿ ಆಟಗಾರರಾಗಿ ಕಣಕ್ಕಿಳಿದು ಬೌಲಿಂಗ್ ಅವಕಾಶವನ್ನೂ ಪಡೆದರು. 4 ಓವರ್​ಗಳ ದಾಳಿಯಲ್ಲಿ 25 ರನ್​ ನೀಡಿ 3 ವಿಕೆಟ್ ಕೂಡ ಕಬಳಿಸಿದ ಚಾಹಲ್, ಈ ಬದಲಾವಣೆಯಿಂದ ಭಾರತಕ್ಕೆ ಇನ್ನಷ್ಟು ಲಾಭ ತಂದರು. ಭಾರತೀಯ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಜಡೇಜಾ ಹೆಲ್ಮೆಟ್‌ಗೆ ಚೆಂಡೇಟು ತಿಂದಿದ್ದರು. ಇದರಿಂದ ಐಸಿಸಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಅವರಿಂದ ಒಪ್ಪಿಗೆ ಪಡೆದು ಭಾರತ ತಂಡ ಜಡೇಜಾ ಬದಲಿಗೆ ಚಾಹಲ್‌ರನ್ನು ಕಣಕ್ಕಿಳಿಸಿತು.

    ವೈದ್ಯಕೀಯ ಭಾಷೆಯಲ್ಲಿ ಮಿದುಳು ಗಾಯಕ್ಕೆ ಕನ್‌ಕಷನ್ ಎನ್ನುತ್ತಾರೆ. 2014ರಲ್ಲಿ ಆಸೀಸ್ ಬ್ಯಾಟ್ಸ್‌ಮನ್ ಫಿಲ್ ಹ್ಯೂಸ್ ಬೌನ್ಸರ್‌ನಿಂದ ತಲೆಗೆ ಏಟು ತಿಂದು ಮೃತಪಟ್ಟ ಬಳಿಕ ಮಿದುಳು ಗಾಯವನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಇದರಿಂದಾಗಿ 2019ರ ಜುಲೈನಲ್ಲಿ ಐಸಿಸಿ ಕನ್‌ಕಷನ್ ನಿಯಮ ಜಾರಿಗೊಳಿಸಿದ್ದು, ಇದರನ್ವಯ ಆಟಗಾರನ ತಲೆಗೆ ಏಟು ಬಿದ್ದಾಗ ಬದಲಿ ಆಟಗಾರನನ್ನು ಕಣಕ್ಕಿಳಿಸಲು ಅವಕಾಶ ನೀಡಲಾಗಿದೆ. ಕನ್‌ಕಷನ್ ನಿಯಮದನ್ವಯ, ಬದಲಿಗನಾಗಿ ಆಡುವ ಆಟಗಾರ, ಗಾಯಗೊಂಡ ಆಟಗಾರನ ರೀತಿಯವನೇ (ಬ್ಯಾಟ್ಸ್‌ಮನ್‌ಗೆ ಬ್ಯಾಟ್ಸ್‌ಮನ್, ಬೌಲರ್‌ಗೆ ಬೌಲರ್) ಆಗಿರಬೇಕು. ತಂಡದಲ್ಲಿ ಬೇರೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಇಲ್ಲದ ಕಾರಣ ಸ್ಪಿನ್ನರ್ ಚಾಹಲ್ ಅವಕಾಶ ಪಡೆದರು.

    ಈ ನಡುವೆ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್, ಚಾಹಲ್ ಸೇರ್ಪಡೆಯ ಬಗ್ಗೆ ಮ್ಯಾಚ್ ರೆಫ್ರಿ ಜತೆ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂದಿತು. ಆದರೆ ಆಸೀಸ್ ನಾಯಕ ಆರನ್ ಫಿಂಚ್, ವೈದ್ಯರು ಜಡೇಜಾರನ್ನು ಪಂದ್ಯದಿಂದ ಹೊರಗಿಟ್ಟಾಗ ಈ ವಿಚಾರದಲ್ಲಿ ವಾದ ಮಾಡಲು ನಾವು ಅಸಹಾಯಕರು ಎಂದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕನ್‌ಕಷನ್ ನಿಯಮ ಲಾಭ ತಂದಿರುವುದನ್ನು ಒಪ್ಪಿಕೊಂಡರು.

    ಸದ್ಯ ಜಡೇಜಾ ಗಾಯದ ಬಗ್ಗೆ ಬಿಸಿಸಿಐ ವೈದ್ಯಕೀಯ ಸಮಿತಿ ನಿಗಾ ವಹಿಸಿದೆ. ಆದರೂ ಜಡೇಜಾ ಇನ್ನು ಸರಣಿಯ ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನ. ಯಾಕೆಂದರೆ ಮಿದುಳು ಗಾಯದಿಂದ ಎರಡೇ ದಿನಗಳಲ್ಲಿ ಚೇತರಿಕೆ ಕಾಣುವುದು ಕಷ್ಟಕರ.

    ಮಿಂಚಿದ ನಟರಾಜನ್, ಚಾಹಲ್; ಆಸೀಸ್ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಶುಭಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts