More

    ಸಿರಿಧಾನ್ಯಗಳು ಪೋಷಕಾಂಶಗಳ ಸಿರಿಸಂಪತ್ತು

    ಶಿಕಾರಿಪುರ: ಸಾಂಪ್ರದಾಯಿಕ ಕೃಷಿಯ ಜತೆಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಪ್ರಕೃತಿ ಹಾಗೂ ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಅತಿ ಹೆಚ್ಚು ಸಿರಿಧಾನ್ಯಗಳ ಬೆಳೆ ಬೆಳೆಯುವ ನಿಟ್ಟಿನಲ್ಲಿ ರೈತರು ಪ್ರಯತ್ನಿಸಬೇಕು. ಸಿರಿಧಾನ್ಯಗಳು ನಮ್ಮ ಆರೋಗ್ಯ ಸಂಪತ್ತು. ಅವುಗಳ ಉತ್ಪಾದನೆಯ ಕಡೆ ಹೆಚ್ಚು ಗಮನ ಹರಿಸಿ ಎಂದು ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.

    ಸಮೀಪದ ಚುರ್ಚಿಗುಂಡಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಹೈದರಾಬಾದ್ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ , ಸಂಗಮೇಶ್ವರ ರೈತ ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಸಿರಿಧಾನ್ಯಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
    ಸಿರಿಧಾನ್ಯಗಳು, ಪೌಷ್ಟಿಕ ಧಾನ್ಯಗಳು, ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ನ್ಯೂಟ್ರಿ-ಸಿರಿಧಾನ್ಯಗಳು ಅಗತ್ಯವಾದ ಮ್ಯಾಕ್ರೋ ಮತ್ತು ಸೂಕ್ಷ್ಮ ಪೋಷಕಾಂಶಗಳು, ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಆಹಾರದ ಫೈಬರ್, ಲಿಪಿಡ್‌ಗಳು ಮತ್ತು ಫೈಟೊಕೆಮಿಕಲ್‌ಗಳ ಹೇರಳವಾದ ಮೂಲವಾಗಿದೆ ಎಂದರು.
    ನವಣೆ, ಸಾಮೆ, ಸಜ್ಜೆ, ಹಾರಕ(ಅರ್ಕ), ಕೊರಲೆ, ಬರಗು, ರಾಗಿ, ಜೋಳದಂತಹ ಬೆಳೆಗಳು ಕಿರು ಧಾನ್ಯಗಳು ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಹೆಚ್ಚು ಪೌಷ್ಟಿಕಾಂಶಗಳನ್ನು, ನಾರಿನಂಶವನ್ನು ಹೊಂದಿರುವ ನಿಸರ್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಈ ಧಾನ್ಯಗಳನ್ನು ಸಿರಿಧಾನ್ಯಗಳೆಂದು ಕೂಡ ಕರೆಯುತ್ತಾರೆ. ನಾವು ಇವುಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ನಮಗೆ ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಇನ್ನೊಂದಿಲ್ಲ . ಸಿರಿಧಾನ್ಯಗಳು ಪೋಷಕಾಂಶಗಳ ಸಿರಿಸಂಪತ್ತು ಎಂದು ಬಣ್ಣಿಸಿದರು.
    ವಾಣಿಜ್ಯ ಬೆಳೆಗಳಿಂದಾಗಿ ಶತಮಾನದಿಂದ ಬೆಳೆಯುತ್ತಿದ್ದ ಸಿರಿಧಾನ್ಯಗಳನ್ನು ಬೆಳೆಯುವುದನ್ನು ಬಿಟ್ಟಿದ್ದಾರೆ. ಒಣ ಪ್ರದೇಶದಲ್ಲಿ ಬೆಳೆಯ ಬಹುದಾದ ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಕಾಳುಗಳನ್ನು ಕೊಡುವುದರ ಜತೆಗೆ ಮೇವನ್ನು ನೀಡುವುದರಿಂದ ರೈತರಿಗೆ ಸಿರಿಧಾನ್ಯಗಳು ಆಹಾರ, ಆದಾಯ ಹಾಗೂ ಆರೋಗ್ಯದ ಅವಶ್ಯಕತೆನ್ನು ನೀಗಿಸಿದೆ ಎಂದರು.
    ಗುಡ್ಡ ಪ್ರದೇಶದಲ್ಲಿ, ಕಡಿಮೆ ಫಲವತ್ತತೆಯಿರುವ ಪ್ರದೇಶದಲ್ಲೂ, ಕಡಿಮೆ ನೀರು ಇದ್ದರು ಕೂಡ ಬೆಳೆಯಬಲ್ಲ ಸಿರಿಧಾನ್ಯಗಳು ಯಾವುದೇ ರಾಸಾಯನಿಕವನ್ನು ಸಿಂಪಡಿಸದೆ ಹೆಚ್ಚಿನ ಇಳುವರಿಯನ್ನು ನೀಡುತ್ತವೆ. ಹೆಚ್ಚಿನ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು ನಾರಿನಾಂಶ ಹೆಚ್ಚಾಗಿರುತ್ತದೆ. ಜೀರ್ಣಕ್ರಿಯೆಯು ಉತ್ತಮಗೊಳ್ಳುತ್ತದೆ. ರೈತರು ಕೇವಲ ಸಿರಿಧಾನ್ಯಗಳನ್ನು ಬೆಳೆಯದೆ, ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸಬೇಕು ಎಂದು ಸಲಹೆ ನೀಡಿದರು.
    ಕೃಷಿ ವಿವಿಯಿಂದ ಸಿರಿಧಾನ್ಯಗಳನ್ನು ಸಿಪ್ಪೆ ತೆಗೆಯುವ, ಜರಡಿ ಹಿಡಿಯುವ ಹಾಗೂ ಹಿಟ್ಟು ಮಾಡುವ ಯಂತ್ರವು ದೊರೆಯುತ್ತಿದ್ದು ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು. ಉತ್ಪಾದಕರ ಸಂಘಗಳಿಗೆ ಗೊಬ್ಬರ ಬೀಜ ಹಾಗೂ ತಾಂತ್ರಿಕ ಮಾಹಿತಿಯನ್ನು ಕೊಟ್ಟು ಸಿರಿಧಾನ್ಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ತರಬೇತಿಗಳನ್ನು ನೀಡಬೇಕು. ಮಕ್ಕಳಿಗೆ ಕಾಫಿ ಬದಲು ರಾಗಿ ಮಾಲ್ಟ್, ಬಿಸ್ಕೆಟ್ ಬದಲು ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯಗಳನ್ನು ನೀಡಬೇಕಿದೆ ಎಂದು ಹೇಳಿದರು.
    ಕೃಷಿ ವಿವಿಯ ಶಿಕ್ಷಣ ನಿರ್ದೇಶಕ ಹೇಮ್ಲಾ ನಾಯಕ್ ಮಾತನಾಡಿ, ಪ್ರಪಂಚದಲ್ಲಿ ಬೆಳೆಯಲು ಆಗದೇ ಇರುವಂತಹ ಬೆಳೆಗಳನ್ನು ಭಾರತದಲ್ಲಿ ಬೆಳೆಯುತ್ತಿದ್ದು, ವೈವಿದ್ಯಮಯ ವಾತಾವರಣ ಹೊಂದಿದೆ. ಕೃಷಿ ಪದ್ಧತಿಗಳು ಬದಲಾದಂತೆ ನಮ್ಮ ಆಹಾರ ಪದ್ಧತಿಯೂ ಬದಲಾಗಿ ಸಿರಿಧಾನ್ಯಗಳ ಸೇವನೆ ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಏಕಬೆಳೆಗೆ ಸೀಮಿತವಾಗದೆ ಅನೇಕ ಬೆಳೆಗಳನ್ನು ಬೆಳೆದು ಆದಾಯವನ್ನು ದ್ವಿಗುಣಗೊಳಿಸಬೇಕಾಗಿದೆ ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಿದೆ. ಸಿರಿಧಾನ್ಯಗಳನ್ನು ಸೇವಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
    ವಿವಿ ವಿಸ್ತರಣಾ ನಿರ್ದೇಶಕರಾದ ಕೆ.ಟಿ.ಗುರುಮೂರ್ತಿ, ಹನುಮಂತಸ್ವಾಮಿ, ಡಿ.ಎಂ.ಬಸವರಾಜ್, ಉಪನಿದೇರ್ಶಕ ಎಸ್.ಎಂ.ಸೂರ್ಯಕಾಂತ್, ಕೃಷಿ ಅಧಿಕಾರಿ ಸಂಜನಾ ಗೊಂದಿ ಚನ್ನೇಶ್, ಬಸವರಾಜಪ್ಪ , ರುದ್ರೇಗೌಡ, ಲತಾ ಅಶೋಕ್,ಪ್ರೇಮಕುಮಾರ್, ದೇವರಾಜ್, ಕೃಷ್ಣಪ್ಪ, ಸಂಗಮೇಶ್ವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts