

ನವದೆಹಲಿ: ದೇಶದಲ್ಲಿ ಕರೊನಾ ನಿಗ್ರಹ ಲಸಿಕೆ ಸಂಶೋಧನೆ ಕಾರ್ಯ ಭರದಿಂದ ಸಾಗಿದೆ. ಮೊದಲ ದೇಶೀಯ ಲಸಿಕೆ ಕೊವಾಕ್ಸಿನ್ ಕ್ಲಿನಿಕಲ್ ಟ್ರಯಲ್ ದೇಶದ 12 ಸ್ಥಳಗಳಲ್ಲಿ ನಡೆಯುತ್ತಿದೆ. ಇದರ ನಡುವೆಯೇ ಲಸಿಕೆಗಳ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಹಾಗೂ ಲಸಿಕೆಯ ವಿತರಣಾ ಕಾರ್ಯದ ಉಸ್ತುವಾರಿಗೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.
ಕೇಂದ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಟಾಸ್ಕ್ಪೋರ್ಸ್ ರಚನೆಯಾಗಿದೆ. ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ, ಐಟಿ-ಬಿಟಿ, ವಿದೇಶಾಂಗ ಇಲಾಖೆ ಹಿರಿಯ ಅಧಿಕಾರಿಗಳು, ಆರೋಗ್ಯ ಸೇವೆಗಳ ಮಹಾನಿರ್ದೇಶಕರು, ಐಸಿಎಂಆರ್ ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಇದ್ದಾರೆ.
ನೀತಿ ಆಯೋಗದ ಡಾ. ವಿ.ಕೆ. ಪಾಲ್, ಕೇಂದ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಶ್ ಭೂಷಣ್ ಇದರ ಉಸ್ತುವಾರಿ ನೊಡಿಕೊಳ್ಳಲಿದ್ದಾರೆ.
ಹೈದರಾಬಾದ್ನ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಯನ್ನು ಮೊದಲ ಹಂತದಲ್ಲಿ ಮಾವರ ಮೇಲೆ ಪ್ರಯೋಗಿಸಲಾಗುತ್ತಿದೆ. ಇದಕ್ಕಾಗಿ 375 ಜನರಿಗೆ ಲಸಿಕೆ ನೀಡಲಾಗಿದೆ. ಇದಲ್ಲದೇ, ಝೈಡಸ್ ಕ್ಯಾಡಿಲ್ಲಾ ಕಂಪನಿಯ ಲಸಿಕೆ ಕೂಡ ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ಗೆ ಅನುಮತಿ ಪಡೆದಿದೆ. ಇದಲ್ಲದೇ, ಇನ್ನೂ 6-7 ಲಸಿಕೆಗಳು ಈ ಹಂತಕ್ಕೆ ಬಂದಿವೆ.
ಈ ಲಸಿಕೆಗಳ ಕ್ಷಮತೆ, ಸಾರ್ವಜನಿಕರಿಗೆ ಶೀಘ್ರ ಲಭ್ಯತೆ, ಅವುಗಳ ಖರೀದಿ, ವಿತರಣೆ ಮೊದಲಾದ ವಿಷಯಗಳ ಬಗ್ಗೆ ಈ ಟಾಸ್ಕ್ಫೋರ್ಸ್ ಕಾರ್ಯನಿರ್ವಹಿಸಲಿದೆ. ಜತೆಗೆ, ಭರವಸೆ ಮೂಡಿಸಿರುವ ಲಸಿಕೆಗಳ ಅಭಿವೃದ್ಧಿ ಹಾಗೂ ಕ್ಲಿನಿಕಲ್ ಟ್ರಯಲ್ ಹಂತದಲ್ಲೂ ಅಗತ್ಯ ನೆರವನ್ನೂ ಇದು ಕಂಪನಿಗೆ ನೀಡಲಿದೆ.