More

    ಪಕ್ಷಾತೀತವಾಗಿ ಒಗ್ಗೂಡಿ ಅಂಬೇಡ್ಕರ್ ಜಯಂತಿ ಆಚರಣೆ

    ಪಾಂಡವಪುರ: ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಘೋಷಣೆಯೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ 113ನೇ ಜಯಂತಿಯನ್ನು ವಿವಿಧ ದಲಿತ ಸಂಘಟನೆಯ ಕಾರ್ಯಕರ್ತರು ಪಕ್ಷಾತೀತವಾಗಿ ಒಗ್ಗೂಡಿ ವಿಭಿನ್ನವಾಗಿ ಆಚರಿಸಿದರು.

    ಪಟ್ಟಣದ ಮಹಾಂಕಾಳೇಶ್ವರಿ ದೇವಸ್ಥಾನ ಮುಂಭಾಗ ಮುಖಂಡ ಕೆ.ಬಿ.ರಾಮು ನೇತೃತ್ವದಲ್ಲಿ ಭಾನುವಾರ ಜಮಾವಣೆಗೊಂಡ ಸಾವಿರಾರು ಕಾರ್ಯಕರ್ತರು ಡೊಳ್ಳು, ತಮಟೆ, ನಗಾರಿಗಳೊಂದಿಗೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪಟ್ಟಣದ ಐದು ದೀಪ ವೃತ್ತದಲ್ಲಿ ಸಮಾವೇಶಗೊಂಡರು. ಈ ವೇಳೆ ಮೇಣದ ಬತ್ತಿ ಬೆಳಗಿ, ಅಂಬೇಡ್ಕರ್ ಅವರಿಗೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅಂಬೇಡ್ಕರ್ ಅವರಿಗೆ ಜೈಕಾರ ಕೂಗಿದರು.

    ದಲಿತ ಮುಖಂಡ ಕೆ.ಬಿ.ರಾಮು ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಅವರು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮಾತ್ರ ಮೀಸಲಾತಿ ನೀಡಿಲ್ಲ.ದೇಶದ ಎಲ್ಲ ಸಮುದಾಯಗಳಿಗೂ ಮೀಸಲಾತಿ ಕಲ್ಪಿಸಿದ್ದಾರೆ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಭಾರತ ಮಾತ್ರವಲ್ಲ ಇಡೀ ವಿಶ್ವವೇ ಒಪ್ಪಿದೆ. ಅಂತಹ ಮಹಾನ್ ನಾಯಕನ ಜಯಂತಿ ಆಚರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ನಾವೆಲ್ಲರೂ ಹೋರಾಟ ಮಾಡಬೇಕಿದೆ ಎಂದರು.

    ಧರ್ಮ, ದೇವರು, ಜಾತಿ ಹಾಗೂ ಕೋಮುವಾದದ ಹೆಸರಿನಲ್ಲಿ ದೇಶವನ್ನು ಒಡೆಯಲಾಗುತ್ತಿದೆ. ನಮ್ಮದು ಜಾತ್ಯತೀತ ರಾಷ್ಟ್ರ. ಸಂವಿಧಾನ ಸಾಂತಂತ್ರ್ಯ, ಸಮಾನತೆ, ಸಹೋದರತೆ ನೀಡಿದ್ದು, ಎಲ್ಲರಿಗೂ ಸಮಪಾಲು, ಸಮಬಾಳು ಹಾಗೂ ಸಹಬಾಳ್ವೆಯ ಸಂದೇಶ ನೀಡಿದೆ. ಇತ್ತೀಚೆಗೆ ಕೆಲವರು ಸಂವಿಧಾನ ಬದಲಾಯಿಸುವ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಸಂವಿಧಾನ ಉಳಿದರಷ್ಟೇ ದೇಶ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ಜನತಂತ್ರ ಉಳಿಯುತ್ತದೆ. ಜನತಂತ್ರಕ್ಕೆ ಅಪಾಯ ಬಾರದಂತೆ ಎಚ್ಚರ ವಹಿಸಬೇಕಿದೆ ಎಂದರು.

    ಮುಖಂಡ ಅಂತನಹಳ್ಳಿ ಬಸವರಾಜು ಮಾತನಾಡಿ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಯಾವ ರಾಜಕಾರಣಿಗಳನ್ನು ಅಹ್ವಾನಿಸಿಲ್ಲ. ರಾಜಕಾರಣಿಗಳನ್ನು ಹೊರತುಪಡಿಸಿ ಅಂಬೇಡ್ಕರ್ ವಿಚಾರವಾದಿಗಳು, ಪ್ರಗತಿಪರರು, ದಲಿತ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರಷ್ಟೇ ಭಾಗವಹಿಸಿದ್ದಾರೆ. ಪ್ರಸ್ತುತ ಅಂಬೇಡ್ಕರ್ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ. ಸಂವಿಧಾನ ಉಳಿದರೆ ಮಾತ್ರ ನಾವೆಲ್ಲ ಬದುಕಲು ಸಾಧ್ಯ ಎಂದು ತಿಳಿಸಿದರು. ಇದೇ ವೇಳೆ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ನಿಧಿ ಬೋಧಿಸಲಾಯಿತು.

    ರೈತ ಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಸ್ಮಿತಾ ಪುಟ್ಟಣ್ಣಯ್ಯ, ಸಿ.ಆರ್.ರಮೇಶ್, ಕೆ.ಬಿ.ರಾಮು, ಅಂತನಹಳ್ಳಿ ಬಸವರಾಜು, ಬೇವಿನಕುಪ್ಪೆ ದೇವರಾಜು, ಟಿ.ಎಸ್.ಹಾಳಯ್ಯ, ಹರಳಹಳ್ಳಿ ಲೋಕೇಶ್, ಸಿದ್ದಲಿಂಗಯ್ಯ, ದೊಡ್ಡವೆಂಕಟಯ್ಯ, ಗಿರಿಯಾರಹಳ್ಳಿ ರಾಜೇಶ್, ಬ್ಯಾಡರಹಳ್ಳಿ ಪ್ರಕಾಶ್, ಇಳ್ಳೇನಹಳ್ಳಿ ದೇವರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts