More

    ಶಾಂತಿಯುತವಾಗಿ ಹನುಮ ಜಯಂತಿ ಆಚರಿಸಿ

    ಹುಣಸೂರು : ಡಿ.26 ರಂದು ಆಯೋಜನೆಗೊಂಡಿರುವ ಹನುಮ ಜಯಂತಿ ಮೆರವಣಿಗೆಯಲ್ಲಿ ಶಾಂತಿ, ಸೌಹಾರ್ದತೆಗೆ ಭಂಗ ಬಾರದಂತೆ ಕ್ರಮವಹಿಸಲಾಗುವುದೆಂದು ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ತಿಳಿಸಿದರು.

    ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಾರದ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಸಭೆಯಲ್ಲಿ ಮೆರವಣಿಗೆ ಆಯೋಜನೆ ಕುರಿತಾಗಿ ಮಾರ್ಗದರ್ಶಿ ಸೂತ್ರಗಳನ್ನು ಈಗಾಗಲೇ ತಿಳಿಸಲಾಗಿದೆ. ಮೆರವಣಿಗೆಯು ಶಾಂತಿಯುತವಾಗಿ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿ ಆಯೋಜಿಸಬೇಕು. ಈ ಬಗ್ಗೆ ಹನುಮಂತ್ಯುತ್ಸವ ಸಮಿತಿ ಮತ್ತು ಅದು ನೇಮಕಗೊಳಿಸುವ ಸ್ವಯಂಸೇವಕರು ಹೆಚ್ಚಿನ ಗಮನಹರಿಸಬೇಕು ಎಂದರು.
    ಅಲ್ಪಸಂಖ್ಯಾತ ಸಮುದಾಯ ಹೆಚ್ಚಾಗಿರುವ ಕಡೆಯಲ್ಲಿ ಒಂದು ನಿಮಿಷಕ್ಕೆ ಹೆಚ್ಚು ಮೀರದಂತೆ ಮೆರವಣಿಗೆ ಸಾಗಬೇಕು. ಶನಿವಾರದಿಂದ ರಸ್ತೆಗಳ ಸಿಂಗಾರ, ಬಂಟಿಂಗ್ಸ್, ಬಾವುಟಗಳನ್ನು ಕಟ್ಟಬಹುದಾಗಿದ್ದು, ನಗರಸಭೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅನುಮತಿ ಪಡೆದ ಜಾಗದಲ್ಲಿ ಮಾತ್ರ ಕಟ್ಟಬೇಕು. ಶಾಂತಿಗೆ ಭಂಗ ಬರದಂತೆ ಎಲ್ಲರೂ ನಡೆದುಕೊಂಡು ಮೆರವಣಿಗೆಯನ್ನು ಯಶಸ್ವಿಯಾಗಿಸೋಣ ಎಂದರು.
    ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಹನುಮ ಜಯಂತಿ ಮೆರವಣಿಗೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಎಲ್ಲರೂ ಒಂದೇ ವಾಹನದಲ್ಲಿದ್ದು ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ಈ ಹಿಂದಿನ ವರ್ಷದಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯೋಣ. ಹನುಮ ಜಯಂತಿಯಲ್ಲಿ ಹನುಮನೇ ಮುಖ್ಯವಾಗುತ್ತಾನೆಯೇ ಹೊರತು ನಾವಲ್ಲ. ಈ ವಿಚಾರದಲ್ಲಿ ನನ್ನ ಸಹಮತವಿದೆ. ಹನುಮ ಜಯಂತಿ ಮೂಲಕ ಶಾಂತಿ ಸೌಹಾರ್ದತೆ ಮೆರೆಯೋಣ ಎಂದರು.
    ಸಭೆಯಲ್ಲಿ ಡಿವೈಎಸ್‌ಪಿ ಗೋಪಾಲಕೃಷ್ಣ, ತಹಸೀಲ್ದಾರ್ ಮಂಜುನಾಥ್, ತಾ.ಪಂ.ಇಒ ಬಿ.ಕೆ.ಮನು, ನಗರಸಭೆ ಪ್ರಭಾರ ಪೌರಾಯುಕ್ತೆ ಶರ್ಮಿಳಾ, ಹನುಮಂತ್ಯುತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಸದಸ್ಯರಾದ ಎಚ್.ವೈ.ಮಹದೇವ್, ಚಂದ್ರಶೇಖರ್, ಅನಿಲ್‌ಕುಮಾರ್, ಗಿರೀಶ್, ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts