More

    ನಿಮ್ಮ ಮೊಬೈಲ್ ಫೋನ್ ಕಳೆದು/ಕದ್ದು ಹೋಗಿದೆಯೇ? ಮೇ 17ರಿಂದ ಶುರುವಾಗಲಿದೆ ಹೊಸ ಟ್ರ್ಯಾಕಿಂಗ್ ವ್ಯವಸ್ಥೆ!

    ನವದೆಹಲಿ: ಈ ವಾರ ಸರ್ಕಾರ ಹೊಸ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ಹೊರತಂದಿದ್ದು ಜನರು ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳನ್ನು ಭಾರತದಾದ್ಯಂತ ಬ್ಲಾಕ್​ ಮಾಡಿ ಟ್ರ್ಯಾಕ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಟೆಲಿಮ್ಯಾಟಿಕ್ಸ್ ಇಲಾಖೆಯ ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆ ಸೆಂಟರ್ (CDoT) ದೆಹಲಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಈಶಾನ್ಯ ಪ್ರದೇಶಗಳು ಸೇರಿದಂತೆ ಕೆಲವು ಟೆಲಿಕಾಂ ವಲಯಗಳಲ್ಲಿ CEIR ಸಿಸ್ಟಮ್‌ನ ಪೈಲಟ್ ಟೆಸ್ಟಿಂಗ್​ ಅನ್ನು ನಡೆಸುತ್ತಿದ್ದು ಈ ವ್ಯವಸ್ಥೆಯು ಈಗ ಭಾರತದಾದ್ಯಂತ ನಿಯೋಜನೆಗೆ ಸಿದ್ಧವಾಗಿದೆ ಎಂದು ಹೆಸರನ್ನು ಹೇಳಲು ಇಚ್ಛಿಸದ DoT ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. “ಸಿಇಐಆರ್ ಸಿಸ್ಟಮ್ಅನ್ನು ಮೇ 17 ರಂದು ಭಾರತದಾದ್ಯಂತ ಲಾಚ್​ ಮಾಡುವುದಾಗಿ ನಿಗದಿಪಡಿಸಲಾಗಿದೆ” ಎಂದು ಅಧಿಕಾರಿ ಹೇಳಿದರು.

    CDoT ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರಾಜ್‌ಕುಮಾರ್ ಉಪಾಧ್ಯಾಯ ಅವರನ್ನು ಸಂಪರ್ಕಿಸಿದಾಗ ಅವರು ದಿನಾಂಕವನ್ನು ದೃಢೀಕರಿಸಲಿಲ್ಲ. ಆದರೆ ಅವರು ಈ ತಂತ್ರಜ್ಞಾನ ದೇಶಾದ್ಯಂತ ಬಿಡುಗಡೆಗೊಳ್ಳಲು ಸಿದ್ಧವಾಗಿದೆ ಎಂದು ದೃಢಪಡಿಸಿದರು.

    “ಈ ತಂತ್ರಜ್ಞಾನ ಸಿದ್ಧವಾಗಿದ್ದು ಮೂರು ತಿಂಗಳಲ್ಲಿ ಭಾರತದಾದ್ಯಂತ ಜನರ ಬಳಕೆಗೆ ಬಿಡುಗಡೆಗೊಳಿಸಲಾಗುವುದು. ಇದು ಜನರು ತಮ್ಮ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ಮತ್ತು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ’ ಎಂದು ಉಪಾಧ್ಯಾಯ ಹೇಳಿದರು.

    ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಕ್ಲೋನ್ ಮಾಡಲಾದ ಮೊಬೈಲ್ ಫೋನ್‌ಗಳ ಬಳಕೆಯನ್ನು ಪರಿಶೀಲಿಸಲು CDoTಗೆ ಕೆಲ ಫೀಚರ್ಸ್​ಗಳನ್ನು ಸೇರಿಸಲು ಸಾಧ್ಯವಾಗಿದೆ. ಭಾರತದಲ್ಲಿ ಮಾರಾಟವಾಗುವ ಮೊದಲು ಮೊಬೈಲ್ ಸಾಧನಗಳ 15-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು (IMEI)ಬಹಿರಂಗಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

    ಮೊಬೈಲ್ ನೆಟ್‌ವರ್ಕ್‌ಗಳು ಅನುಮೋದಿತ IMEI ಸಂಖ್ಯೆಗಳ ಮಾಹಿತಿಯನ್ನು ಪಡೆಯಬಹುದಾಗಿದ್ದು ಅವು ತಮ್ಮ ನೆಟ್‌ವರ್ಕ್‌ನಲ್ಲಿ ಯಾವುದೇ ಅನಧಿಕೃತ ಮೊಬೈಲ್ ಫೋನ್‌ಗಳ ಇರುವಿಕೆಯನ್ನು ಪರಿಶೀಲಿಸುತ್ತವೆ.

    ಟೆಲಿಕಾಂ ಆಪರೇಟರ್‌ಗಳು ಮತ್ತು CEIR ವ್ಯವಸ್ಥೆಯು ಮೊಬೈಲ್​ನ IMEI ಸಂಖ್ಯೆ ಮತ್ತು ಅದಕ್ಕೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಗಮನಿಸುತ್ತಾ ಇರುತ್ತದೆ. ಈಗಾಗಲೇ CEIR ತಂತ್ರಜ್ಞಾನದ ಮೂಲಕ ನಿಮ್ಮ ಕಳೆದುಹೋದ ಅಥವಾ ಕದ್ದ ಮೊಬೈಲ್‌ಗಳನ್ನು ಟ್ರ್ಯಾಕ್ ಮಾಡಲು ಮಾಹಿತಿಯನ್ನು ಕೆಲವು ರಾಜ್ಯಗಳಲ್ಲಿ ಬಳಸಲಾಗುತ್ತಿದೆ.

    “ಸಾಮಾನ್ಯವಾಗಿ ದುಷ್ಕರ್ಮಿಗಳು ಕದ್ದ ಮೊಬೈಲ್ ಫೋನ್‌ಗಳ IMEI ಸಂಖ್ಯೆಯನ್ನು ಬದಲಾಯಿಸುತ್ತಾರೆ. ಇದು ಅಂತಹ ಹ್ಯಾಂಡ್‌ಸೆಟ್‌ಗಳನ್ನು ಟ್ರ್ಯಾಕ್​ ಮಾಡುವುದರಿಂದ ಹಾಗೂ ಬ್ಲಾಕ್​ ಮಾಡುವುದನ್ನು ತಡೆಯುತ್ತದೆ. ಇದು ರಾಷ್ಟ್ರೀಯ ಭದ್ರತೆಯ ಸಮಸ್ಯೆಯಾಗಿತ್ತು. CEIR ಸಹಾಯದಿಂದ ನೆಟ್ವರ್ಕ್‌ನಲ್ಲಿ ಯಾವುದೇ ಕ್ಲೋನ್ ಮಾಡಿದ ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ಸಾಧ್ಯವಾಗುತ್ತದೆ” ಉಪಾಧ್ಯಾಯ ಹೇಳಿದರು.

    ಕದ್ದ ಮತ್ತು ಕಳೆದುಹೋದ ಮೊಬೈಲ್‌ಗಳ ಟ್ರ್ಯಾಕಿಂಗ್​ ಸುಲಭಗೊಳಿಸುವುದು ಮತ್ತು ದೇಶದಾದ್ಯಂತ ಅನಧಿಕೃತ ಮೊಬೈಲ್‌ಗಳ ಬಳಕೆಯನ್ನು ನಿರ್ಬಂಧಿಸುವುದು CEIRನ ಮೂಲ ಉದ್ದೇಶವಾಗಿದೆ. ಇದು ಮೊಬೈಲ್ ಫೋನ್‌ಗಳ ಕಳ್ಳತನಕ್ಕೆ ಬ್ರೇಕ್​ ಹಾಕಲಿದ್ದು ಕದ್ದ ಮತ್ತು ಕಳೆದುಹೋದ ಮೊಬೈಲ್‌ಗಳನ್ನು ಪೊಲೀಸರಿಗೆ ಪತ್ತೆಹಚ್ಚಲು ಸಹಾಯ ಮಾಡಲಿದೆ. ಅದಷ್ಟೇ ಅಲ್ಲದೇ, ಕ್ಲೋನ್ ಮಾಡಿದ ಅಥವಾ ನಕಲಿ ಮೊಬೈಲ್‌ಗಳನ್ನು ಪತ್ತೆ ಮಾಡಲು, ಅಂತಹ ಕ್ಲೋನ್ ಮಾಡಿದ ಮೊಬೈಲ್‌ಗಳ ಬಳಕೆಯನ್ನು ಕೂಡ ಈ ತಂತ್ರಜ್ಞಾನ ನಿರ್ಬಂಧಿಸುತ್ತದೆ. ಇದರ ಜತೆಗೆ ಗ್ರಾಹಕರಿಗೆ ಅರಿವು ಮೂಡಿಸುವ ಮೂಲಕ ಅವರ ಹಿತಾಸಕ್ತಿಯನ್ನು ಕಾಪಾಡಲಿದೆ.

    ಇತ್ತೀಚೆಗೆ, ಕರ್ನಾಟಕ ಪೊಲೀಸರು CEIR ವ್ಯವಸ್ಥೆಯನ್ನು ಬಳಸಿಕೊಂಡು 2,500ಕ್ಕೂ ಹೆಚ್ಚು ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿದ್ದು ಅವುಗಳನ್ನು ಅವರ ಮಾಲೀಕರಿಗೆ ಹಸ್ತಾಂತರಿಸಿದರು.

    Apple ID ಯ ಸಹಾಯದಿಂದ ಕಳೆದುಹೋದ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯನ್ನು Apple ಈಗಾಗಲೇ ಹೊಂದಿದೆ. ಆದರೆ Android ಮೊಬೈಲ್ ಫೋನ್‌ಗಳ ಸುತ್ತಲೂ ಒಂದಷ್ಟು ಪ್ರಮುಖ ಸಮಸ್ಯೆಗಳಿವೆ. ಈ ಹೊಸ ವ್ಯವಸ್ಥೆಯನ್ನು ಜಾರಿ ಮಾಡುವುದರಿಂದ ಕದ್ದ ಮೊಬೈಲ್​ಗಳನ್ನು ಬಳಸುವುದು ನಿಷ್ಪ್ರೋಜಕವಾಗಲಿದೆ.

    “ಈ ವ್ಯವಸ್ಥೆಯು ಅಂತರ್ನಿಮಿತ ಕಾರ್ಯವಿಧಾನವನ್ನು ಹೊಂದಿದ್ದು ಇದು ಫೋನ್‌ಗಳ ಕಳ್ಳಸಾಗಣೆಯನ್ನು ಪರಿಶೀಲಿಸುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ” ಎಂದು ಉಪಾಧ್ಯಾಯ ಅವರು ತಿಳಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts