More

    ಜಾನುವಾರುಗಳಿಗೆ ಲಂಪಿ ಸ್ಕಿನ್ ಬಾಧೆ

    ನರಗುಂದ: ಕರೊನಾ ವೈರಸ್​ನಿಂದ ಮನುಷ್ಯರು ನಲುಗುವಂತಾಗಿದ್ದರೆ, ಇತ್ತ ಮೂಕ ಪ್ರಾಣಿಗಳಿಗೂ ಲಂಪಿ ಸ್ಕಿನ್ ರೋಗ ಕಾಣಿಸಿಕೊಂಡಿದ್ದು, ತಾಲೂಕಿನ ರೈತರ ಆತಂಕಕ್ಕೆ ಕಾರಣವಾಗಿದೆ.

    ತಾಲೂಕಿನಲ್ಲಿ 22 ಸಾವಿರ ಜಾನುವಾರು, 42 ಸಾವಿರ ಕುರಿ-ಮೇಕೆಗಳಿದ್ದು, ಜಾನುವಾರುಗಳಲ್ಲಿ ಚರ್ಮಗಂಟು ವೈರಸ್ ರೋಗ ಪತ್ತೆಯಾಗಿದ್ದು, ರೋಗ ಬಾಧೆಗೆ ತುತ್ತಾಗಿರುವ ಜಾನುವಾರುಗಳು ನರಳಾಡುವಂತಾಗಿದೆ. ಒಂದು ತಿಂಗಳೊಳಗೆ ತಾಲೂಕಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಬಹುತೇಕ ರಾತ್ರಿ ವೇಳೆಯಲ್ಲಿ ಕುಡ್ಡು ನೊಣಗಳು ಕಚ್ಚುವುದರಿಂದ ಗಂಟು ರೋಗದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಕೆಲವು ಜಾನುವಾರುಗಳಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಈ ಮಾರಣಾಂತಿಕ ವೈರಸ್​ಗೆ ತಾಲೂಕಿನ ಸಂಕಧಾಳ ರೈತರೊಬ್ಬರ ಎತ್ತು ಇತ್ತೀಚೆಗೆ ಸಾವನ್ನಪ್ಪಿದೆ.

    ಚರ್ಮಗಂಟು ರೋಗಕ್ಕೆ ನಿಖರವಾದ ಲಸಿಕೆಗಳಿಲ್ಲ. ಹೀಗಾಗಿ ಪಶು ವೈದ್ಯಾಧಿಕಾರಿಗಳು ಮುಂಜಾಗ್ರತೆ ಕ್ರಮವಾಗಿ 22 ಸಾವಿರ ಜಾನುವಾರುಗಳಿಗೆ ಲಸಿಕೆ ತರಿಸಿಕೊಂಡಿದ್ದಾರೆ. ಈಗಾಗಲೇ 12 ಸಾವಿರ ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಲಸಿಕೆ ನೀಡಿ ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

    ವೈದ್ಯರ ಕೊರತೆ: ನರಗುಂದ, ಚಿಕ್ಕನರಗುಂದ, ಶಿರೋಳ, ಕೊಣ್ಣೂರ, ಹದಲಿ, ಸುರಕೋಡ ಸೇರಿದಂತೆ ವಿವಿಧ ಗ್ರಾಮಗಳಿಗೆ 12 ಜನ ಪಶು ವೈದ್ಯರ ಅವಶ್ಯಕತೆ ಇದೆ. ಆದರೆ, ಕೇವಲ ಒಬ್ಬರೇ ಒಬ್ಬ ನುರಿತ ವೈದ್ಯರು ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 40 ಜನ ಸಿಬ್ಬಂದಿ ಇರಬೇಕು. ಕೇವಲ 16 ಜನರಿದ್ದಾರೆ. ಇರೋ ಒಬ್ಬ ವೈದ್ಯರು ಸರ್ಕಾರದ ಸಭೆ, ಸಿಬ್ಬಂದಿ ವೇತನ ಪಾವತಿ, ಹಾಜರಾತಿ ನೋಡಿಕೊಳ್ಳುವುದರ ಜತೆಗೆ ಲಭ್ಯ ಸಿಬ್ಬಂದಿಯೊಂದಿಗೆ ಸಾಧ್ಯವಾದಷ್ಟು ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಕುಡ್ಡು ನೊಣಗಳು ಕಚ್ಚುವುದರಿಂದ ಚರ್ಮಗಂಟು ರೋಗ ಹರಡುತ್ತದೆ. ಈ ರೋಗಕ್ಕೆ ಯಾವುದೇ ಲಸಿಕೆ ಇಲ್ಲ. ಆದ್ದರಿಂದ ರೈತರು ಸಾಧ್ಯವಾದಷ್ಟು ತಮ್ಮ ದನದ ಕೊಟ್ಟಿಗೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ರಾತ್ರಿ ವೇಳೆ ಹೊಗೆ ಹಾಕಬೇಕು. ಯಾವುದಾದರೂ ಜಾನುವಾರುಗಳಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಂಡರೆ ಒಂದು ವಾರಗಳ ಕಾಲ ಕರ್ಪರ ಮತ್ತು ಅರಿಷಿಣ ಹಚ್ಚಿದರೆ ರೋಗ ವಾಸಿಯಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು.
    | ಡಾ. ವೆಂಕಟೇಶ ಸಣ್ಣಬಿದರಿ, ಪ್ರಭಾರಿ ಸಹಾಯಕ ನಿರ್ದೇಶಕರು ಪಶುಪಾಲನೆ ಇಲಾಖೆ ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts