More

    ಇನ್ನೇನಿದ್ದರೂ ಜಾತಿ-ಹಣಬಲದ ಲೆಕ್ಕಾಚಾರ

    ರೋಣ: ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಚುರುಕುಗೊಂಡಿದೆ. ಗ್ರಾಮದಲ್ಲಿ ಸದಸ್ಯತ್ವ ಸ್ಥಾನಕ್ಕೆ ಇತರರು ಸ್ಪರ್ಧಿಸದಂತೆ ಒಳ ಒಪ್ಪಂದ ಮಾಡಿಕೊಳ್ಳುವ ಕುಳಗಳು ಸಕ್ರಿಯರಾಗಿದ್ದಾರೆ.

    ಪ್ರಬಲ ಜಾತಿಯ ಮುಖಂಡರ ಒಪ್ಪಿಗೆ ಸಿಕ್ಕರೆ ಮಾತ್ರ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವ ಇರಾದೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ನಿಜವಾಗಿ ಅಭ್ಯಥಿಗಳು ಅವಿರೋಧವಾಗಿ ಆಯ್ಕೆಯಾದರೂ, ಅವರನ್ನು ಸಂಶಯದಿಂದ ನೋಡುವಂತಾಗಿದೆ. ಒಳ ಒಪ್ಪಂದಗಳ ನಂತರವೇ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ನಡೆಸಬೇಕು ಎನ್ನ್ನುವ ಪರಿಸ್ಥಿತಿ ತಾಲೂಕಿನ ಅಲ್ಲಲ್ಲಿ ಕಂಡು ಬರುತ್ತಿದೆ.

    ಸ್ಥಳೀಯ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿಗೆ ಈಗ ಹೆಚ್ಚಿನ ಆರ್ಥಿಕ ಬಲ ಬಂದಿದೆ. ಸಂಪನ್ಮೂಲಗಳ ಸಂಗ್ರಹ, ಕರ ವಸೂಲಾತಿ, ಉದ್ಯೋಗ ಖಾತ್ರಿ, ವಸತಿ ಯೋಜನೆ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರವಿದೆ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಗ್ರಾಪಂನಿಂದ ನಡೆಯುವ ಕೋಟ್ಯಂತರ ರೂಪಾಯಿ ವ್ಯವಹಾರವು ಗ್ರಾಮ ಪಂಚಾಯಿತಿ ಸ್ಪರ್ಧೆಗೆ ಹೆಚ್ಚಿನ ಒಲವು ತೋರುವಂತೆ ಮಾಡಿದೆ ಎನ್ನುತ್ತಾರೆ ಮತದಾರರು.

    ಚುನಾವಣೆ ನಡೆದರೆ ಹಣ ಖರ್ಚು ಮಾಡಬೇಕು. ಮತದಾರರ ಮನೆಗೆ ಅಲೆಯಬೇಕು. ಮತದಾರರ ಊಟೋಪಚಾರ ನೋಡಿಕೊಳ್ಳಬೇಕು. ಇಷ್ಟೆಲ್ಲಾ ಖರ್ಚು ಮಾಡುವುದರ ಬದಲು ಹೇಗಾದರೂ ಮಾಡಿ ಅವಿರೋಧ ಆಯ್ಕೆಯಾಗಲು ಬಹುತೇಕರು ಸಿಕ್ಕ ಸಿಕ್ಕವರ ಮನೆಯ ಕದ ತಟ್ಟುತ್ತಿದ್ದಾರೆ.

    ನಾವು ಸಾಕಷ್ಟು ಜನಪರ ಕೆಲಸ ಮಾಡಿದರೂ ಈಗಾಗಲೇ ಹಲವು ಬಾರಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದೇವೆ. ಈ ಚುನಾವಣೆಯಲ್ಲಿ ಏನಿದ್ದರೂ ಜಾತಿ, ಹಣದ ಲೆಕ್ಕಾಚಾರ. ಹೀಗಾಗಿ ಈ ಬಾರಿ ನಾಮಪತ್ರ ಪಡೆಯುವ ಗೋಜಿಗೆ ಹೋಗಿಲ್ಲ ಎಂಬ ಮಾತುಗಳು ಕೆಲ ಪ್ರಗತಿಪರ ಸಂಘಟನೆಗಳ ಮುಖಂಡರಿಂದ ಕೇಳಿ ಬರುತ್ತಿದೆ.

    ಗ್ರಾಪಂ ಪಂಚಾಯಿತಿ ಚುನಾವಣೆ ಮೊದಲಿನಂತಿಲ್ಲ. ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಸ್ಪರ್ಧೆ ಮೀರಿಸುವಂತೆ ಸಭೆ, ಊಟೋಪಚಾರಗಳು ನಡೆಯುತ್ತಿವೆ. ಆಯ್ಕೆಗೆ ಗ್ರಾಮದ ಸರ್ವ ಸದಸ್ಯರ ಸಹಭಾಗಿತ್ವವೂ ಬೇಕಿದೆ.

    ಲೋಕನಗೌಡ ಗೌಡರ, ಹಿರೇಹಾಳ ರೈತ

    ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ರೋಣ, ಗಜೇಂದ್ರಗಡ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ, ಮದ್ಯ, ಸೇಂದಿ ಹಾಗೂ ಇನ್ನಿತರ ಅಬಕಾರಿ ವಸ್ತುಗಳ ಸಂಗ್ರಹಣೆ, ಸಾಗಾಟ, ಮಾರಾಟ ಚಟುವಟಿಕೆಗಳನ್ನು ತಡೆಯಲು ಒಂದು ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಸಾರ್ವಜನಿಕರು ರೋಣ ಹಾಗೂ ಗಜೇಂದ್ರಗಡ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ, ಮದ್ಯ, ಸೇಂದಿ ಹಾಗೂ ಇನ್ನಿತರ ಚಟುವಟಿಕೆಗಳ ಮಾರಾಟ ಮಾಡುವುದು ಕಂಡು ಬಂದರೆ ನೇರವಾಗಿ 9110452279 ಕರೆ ಮಾಡಿ ಮಾಹಿತಿ ನೀಡಬಹುದು.

    | ಗಂಗಾಧರ ಬಡಿಗೇರ ಅಬಕಾರಿ ನಿರೀಕ್ಷಕ ರೋಣ

    ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಇನ್ನೆರಡು ದಿನಗಳನ್ನು ವಿಶೇಷ ತಂಡಗಳನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.

    | ಜೆ.ಬಿ. ಜಕ್ಕನಗೌಡ್ರ ತಹಸೀಲ್ದಾರ್, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts