More

    ಯಾವ ಪ್ರಕರಣವನ್ನೂ ಸಿಎಂ ಸಿಬಿಐಗೆ ವಹಿಸುತ್ತಿಲ್ಲ: ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಪರಮೇಶ್ವರ ನಾಯ್ಕ ಆರೋಪ

    ಹೂವಿನಹಡಗಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್ ಸರ್ಕಾರ ರಾಜ್ಯದ 11 ಪ್ರಕರಣಗಳನ್ನು ಸಿಬಿಐಗೆ ವಹಿಸಲು ಒಪ್ಪಿಗೆ ನೀಡಿತ್ತು. ಆದರೆ, ಈಗಿನ ಸಿಎಂ ಯಡಿಯೂರಪ್ಪ ಯಾವ ಪ್ರಕರಣವನ್ನೂ ಸಿಬಿಐಗೆ ವಹಿಸುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಆರೋಪಿಸಿದ್ದಾರೆ.

    ವ್ಯವಸ್ಥೆ ಹಾಗೂ ಜನರ ಮೇಲೆ ನಂಬಿಕೆ ಇಲ್ಲದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬುಧವಾರ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು. ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಕೃಷಿ ಸಂಬಂಧಿತ ತಿದ್ದುಪಡಿ ಕಾಯ್ದೆಗಳು ರೈತರನ್ನು ಬೀದಿಗೆ ತಳ್ಳಲಿವೆ. ರೈತರು ತಮ್ಮ ಭೂಮಿ ಮಾರಿ ಅಲ್ಲೇ ಜೀತದಾಳಾಗಿ ದುಡಿಯುವಂತಹ ವ್ಯವಸ್ಥೆ ತರಲಾಗುತ್ತಿದೆ. ಉಳ್ಳವರು ಹಾಗೂ ಖಾಸಗಿ ಕಂಪನಿಗಳ ಪರ ಸರ್ಕಾರ ಕೆಲಸ ಮಾಡುತ್ತಿದ್ದು, ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

    ಕೋವಿಡ್-19 ಸಂಬಂಧಪಟ್ಟಂತೆ ವಿವಿಧ ವಸ್ತುಗಳ ಖರೀದಿಯಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಕುರಿತು ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡಿತ್ತು. ಆದರೆ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಕೋವಿಡ್-19ಗೆ ವಾಹನಗಳ ಬಳಕೆಯಲ್ಲೂ 6 ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆಂದು ಖಾಸಗಿ ಟಿವಿ ಚಾನಲ್ ವರದಿ ಮಾಡಿದೆ. ಈ ಕುರಿತು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಹಳೆಯ ವೆಂಟಿಲೇಟರ್‌ಗಳನ್ನು ಸರ್ಕಾರ ಖರೀದಿ ಮಾಡಿದೆ. ಇದರಲ್ಲೂ ಸಾಕಷ್ಟು ಅವ್ಯವಹಾರ ನಡೆದಿದೆ. ಅವರದೇ ಪಕ್ಷದ ಮಾಜಿ ಶಾಸಕ ಸಾರ್ವಭೌಮ ಬಗಲಿ ಈ ಹಿಂದೆ ಆರೋಪಿಸಿದ್ದರು. ಕೋವಿಡ್ ಸೋಂಕಿನಿಂದ ಮೃತಪಟ್ಟವರ ಹೆಸರಿನಲ್ಲಿ ಸರ್ಕಾರ ದುಡ್ಡು ಮಾಡಲು ಹೊರಟಿದೆ ಎಂದು ಗಂಭೀರವಾಗಿ ಆರೋಪಿಸಿದರು.

    ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ತಾಪಂ ಅಧ್ಯಕ್ಷೆ ಎಚ್.ರೇಣುಕಮ್ಮ, ಎಪಿಎಂಸಿ ಅಧ್ಯಕ್ಷೆ ಪಾರ್ವತೆಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಪುರಸಭೆ ಸದಸ್ಯ ವಾರದ ಗೌಸ್ ಮೋಹಿದ್ದೀನ್, ಅಟವಾಳಗಿ ಕೊಟ್ರೇಶ, ಪಾಟೀಲ ಬಸವನಗೌಡ, ಬಿ.ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts