More

    ನೀರಿನ ಸಮಸ್ಯೆ ಬಾರದಂತೆ ಕಾಮಗಾರಿ ಕೈಗೊಳ್ಳಿ

    ಕಾರವಾರ: ಜಲಜೀವನ ಮಿಷನ್ ಯೋಜನೆಯಡಿ ಜಿಲ್ಲೆಯ ಪ್ರತಿ ಮನೆಗೂ ನೀರು ತಲುಪಿಸುವಂತಾಗಬೇಕು. ಯೋಜನೆ ಕಾಮಗಾರಿ ಮುಗಿದ ಬಳಿಕ ಜಿಲ್ಲೆಯ ಯಾವ ಗ್ರಾಮದಲ್ಲೂ ನೀರಿನ ಸಮಸ್ಯೆಯಿದೆ ಎಂಬ ದೂರು ಬಾರದಷ್ಟು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

    ಕಾರವಾರದ ಕೆರವಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೀರೆತ್ತುವ ಪ್ರದೇಶವನ್ನು ಶನಿವಾರ ಪರಿಶೀಲಿಸಿ ನಂತರ ಜಿಪಂ ಕಚೇರಿಯಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ 9 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇನ್ನೂ ಕೆಲವು ಕಾಮಗಾರಿಗಳು ನಡೆದಿವೆ. ಜಲಜೀವನ ಮಿಷನ್​ನಡಿ ಕೈಗೆತ್ತಿಕೊಂಡ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಫೆಬ್ರವರಿ ಮಾಸಾಂತ್ಯದೊಳಗೆ ಮುಗಿಸಿ ಮಾರ್ಚ್ ಹೊತ್ತಿಗೆ ಕಾಮಗಾರಿ ಪ್ರಾರಂಭಿಸಿ. ನೀರಿನ ಮೂಲಗಳ ಬಗ್ಗೆ ಸಮಸ್ಯೆಗಳಿದ್ದರೆ ಶಾಸಕರ ಜತೆ ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ಸೂಚಿಸಿದರು.

    ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಆದ್ಯತೆ ನೀಡಿ. ಉದ್ಯೋಗ ಕೇಳಿ ಬಂದ ಪ್ರತಿಯೊಬ್ಬರಿಗೂ ಜಾಬ್ ಕಾರ್ಡ್ ನೀಡಿ. ಕೆಲಸ ಮಾಡಿದ 15 ದಿನದೊಳಗೆ ವೇತನ ಪಾವತಿಗೆ ವ್ಯವಸ್ಥೆ ಮಾಡಿ. ಸಾಮಗ್ರಿ ವೆಚ್ಚದ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಇನ್ನಷ್ಟು ಬೇಗನೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

    ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ, ಪ್ರಮೋದ ಹೆಗಡೆ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಪಂ ಸಿಇಒ ಪ್ರಿಯಾಂಗಾ ಎಂ. ವೇದಿಕೆಯಲ್ಲಿದ್ದರು.

    ಕೋಟಿ ತೀರ್ಥ ಸ್ವಚ್ಛತೆಗೆ ಕ್ರಮ ವಹಿಸಿ

    ‘ಗೋಕರ್ಣದ ಕೋಟಿತೀರ್ಥ ಸ್ವಚ್ಛತೆಗೆ ಇರುವ ಅನುದಾನದಲ್ಲಿ ಅವಕಾಶವಿದೆಯೇ ಎಂದು ಎರಡು ದಿನಗಳಲ್ಲಿ ಪರಿಶೀಲಿಸಿ ತಿಳಿಸಿ. ಇಲ್ಲವೇ ನನಗೆ ಕರೆ ಮಾಡಿ, ಹೂಳೆತ್ತಲು ಬೇಕಾದ 1.5 ಕೋಟಿ ರೂ. ಅನುದಾನ ಒದಗಿಸಿಕೊಡುತ್ತೇನೆ. ಶೀಘ್ರ ಕಾಮಗಾರಿ ಕೈಗೊಳ್ಳಿ’ ಎಂದು ಈಶ್ವರಪ್ಪ ಅವರು ಜಿಪಂ ಸಿಇಒ ಪ್ರಿಯಾಂಗಾ ಎಂ. ಅವರಿಗೆ ಸೂಚಿಸಿದರು.

    ನರೇಗಾದಲ್ಲಿ ಬಾವಿ ತೋಡಲು ಅವಕಾಶ ನೀಡಿ

    ಜಿಲ್ಲೆಯ ಮಲೆನಾಡು, ಕರಾವಳಿಯ ಕೆಲ ಗ್ರಾಮಗಳಲ್ಲಿ ಅಲ್ಲೊಂದು, ಇಲ್ಲೊಂದು ಮನೆಗಳಿದ್ದು, ಜಲಜೀವನ ಮಿಷನ್​ನಡಿ ಅಂಥ ಮನೆಗಳಿಗೆ ನಲ್ಲಿ ನೀರು ಕೊಡಲು ಸಾಧ್ಯವಿಲ್ಲ. ಆ ಯೋಜನೆಯಡಿ ವೈಯಕ್ತಿಕ ಬಾವಿಗೆ ಅವಕಾಶ ನೀಡಬೇಕು. ಇಲ್ಲವೇ ಉದ್ಯೋಗ ಖಾತ್ರಿ ಯೋಜನೆಯಡಿ 27 ಅಡಿವರೆಗೆ ಮಾತ್ರ ವೈಯಕ್ತಿಕ ಬಾವಿಗಳನ್ನು ತೋಡಲು ಅವಕಾಶವಿದೆ. ಆ ಮಿತಿಯನ್ನು ಹೆಚ್ಚಿಸಬೇಕು ಎಂದು ಸಚಿವ ಶಿವರಾಮ ಹೆಬ್ಬಾರ ಮನವಿ ಮಾಡಿದರು. ಈ ಸಂಬಂಧ ಪ್ರಸ್ತಾವನೆ ಕಳಿಸುವಂತೆ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

    ಸಚಿವರು ಹೇಳಿದ್ದು

    *ನೆರೆ ಪರಿಹಾರ ಯೋಜನೆಯ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಕಾಮಗಾರಿ ಮುಗಿಸಿದರೆ ಅದರ ಅನುದಾನ ಇಂದಲ್ಲ, ನಾಳೆ ಬಂದೇ ಬರುತ್ತದೆ. ಹಳೇ ಕಾಮಗಾರಿಗಳ ಹಣ ಬಿಡುಗಡೆಯಾಗಿಲ್ಲ ಎಂದು ಹೊಸದನ್ನೂ ಮಾಡದೆ ಕುಳಿತರೆ, ಜಿಲ್ಲೆಗೆ ಮುಂದಿನ ವರ್ಷಗಳ ಅನುದಾನ ಕಡಿತವಾಗಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ.

    *ಜಾಗ ಇಲ್ಲ ಎಂದು ಗ್ರಾಪಂ ತ್ಯಾಜ್ಯ ಸಂಸ್ಕರಣೆ ಘಟಕ ಯೋಜನೆ ಕೈಬಿಡಬೇಡಿ. 2-3 ಗ್ರಾಪಂ ಸೇರಿಸಿ ಕ್ಲಸ್ಟರ್​ಗಳಾಗಿ ಮಾಡಿ ಕಸ ವಿಲೇವಾರಿ ಕೇಂದ್ರ ನಿರ್ವಿುಸಿ.

    *ಜಿಲ್ಲಾ ರಸ್ತೆಗಳ ಸರ್ವೆ ಕಾರ್ಯ ನಡೆದು, ಜಿಪಿಎಸ್ ಪ್ರಕ್ರಿಯೆ ನಡೆದರೂ ಇಲಾಖೆಯ ಡಿಆರ್​ಆರ್​ಪಿ ರಸ್ತೆಗಳ ಪಟ್ಟಿಯಲ್ಲಿ ಸೇರದ ಕಾರಣ ಅನುದಾನ ಮಂಜೂರಿಗೆ ಸಮಸ್ಯೆ ಯಾಗಿದೆ ಎಂಬ ಜಗದೀಶ ನಾಯಕ ಮೊಗಟ ಪ್ರಶ್ನೆಗೆ ಪರಿಶೀಲಿಸುವುದಾಗಿ ಭರವಸೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts