More

    ಸಾರ್ವಜನಿಕ ಸ್ಥಳಗಳಲ್ಲಿ ಕರೊನಾ ಪರೀಕ್ಷೆ ; ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಹಕಾರದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ಲ್ಯಾಬ್ ಸಂಗ್ರಹ

    ತಿಪಟೂರು : ಕರೊನಾ ಮೂರನೇ ಅಲೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಹಿಸಿರುವ ತಾಲೂಕು ಆಡಳಿತ ಸಾರ್ವಜನಿಕ ಸ್ಥಳಗಳಲ್ಲಿ ಕರೊನಾ ಪರೀಕ್ಷೆಯನ್ನು ಹೆಚ್ಚಿಸಲು ಮುಂದಾಗಿದೆ.

    ಕರೊನಾ ಲಸಿಕೆ ಪಡೆದಿದ್ದೇವೆ ಎಂಬ ಧೈರ್ಯದಿಂದ ನಗರದ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡುಬರುತ್ತಿರುವುದು, ಮತ್ತು ಕರೊನಾ ನಿಯಮ ಮರೆತು ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜತೆಗೆ ಅಕ್ಕಪಕ್ಕದ ತಾಲೂಕುಗಳಾದ ಅರಸೀಕೆರೆ, ಚನ್ನರಾಯಪಟ್ಟಣ, ಮತ್ತು ತುರುವೇಕೆರೆಯಿಂದ ಹೆಚ್ಚಿನ ಕೊಬ್ಬರಿ ಸ್ಥಳೀಯ ಎಪಿಎಂಸಿ ಮಾರುಕಟ್ಟೆಗೆ ಬರುವ ಕಾರಣ ಅಲ್ಲಿನ ರೈತರು ಇಲ್ಲಿಗೆ ಬಂದು ಹೋಗುವುದು ಸಾಮಾನ್ಯವಾಗಿದೆ.

    ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳು ಮತ್ತು ಅಲ್ಲಿನ ರೈತರು ಇಲ್ಲಿಗೆ ಬಂದು ಹೋಗುವುದನ್ನು ಗಮನದಲ್ಲಿಟ್ಟುಕೊಂಡು ಅರಸೀಕೆರೆ ಮತ್ತು ಚನ್ನರಾಯಪಟ್ಟಣ, ತುರುವೇಕೆರೆ ಸೇರಿ ಕೊಬ್ಬರಿ ಮಾರುಕಟ್ಟೆಗೆ ಬರುವ ರೈತರನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತೀ ಶನಿವಾರ ಮತ್ತು ಬುಧವಾರ ಕರೊನಾ ಪರೀಕ್ಷೆಗೆ ಒಳಪಡಿಸುವ ಕಾರ್ಯ ನಡೆದಿದ್ದು, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಹಕಾರದಿಂದ ಎಪಿಎಂಸಿ ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ಪ್ರತಿಯೊಬ್ಬರ ಸ್ಲ್ಯಾಬ್ ಸಂಗ್ರಹಣೆ ಕಾರ‌್ಯ ನಡೆಯುತ್ತಿದೆ.

    ನೆರೆ ರಾಜ್ಯಗಳಿಂದ ಕೊಬ್ಬರಿ ಲೋಡ್‌ಗೆ ಬರುವ ಲಾರಿ ಚಾಲಕರು, ಮತ್ತು ಸಿಬ್ಬಂದಿಯ ಸ್ಲ್ಯಾಬ್ ಸಂಗ್ರಹಣೆಯೂ ಆಗಿದೆ. ಒಟ್ಟಾರೆ ಕಳೆದ ಬಾರಿಯ ಅನುಭವದಿಂದ ಪಾಠ ಕಲಿತಿರುವ ತಾಲೂಕು ಆಡಳಿತ 3ನೆ ಅಲೆ ತಡೆಗಟ್ಟಲು ಹೆಚ್ಚಿನ ಮುತುವರ್ಜಿವಹಿಸಿದೆ.

    ಮಾರುಕಟ್ಟೆಗೆ ಬರುವವರ ಮೇಲೆ ನಿಗಾ : ಪಕ್ಕದ ತಾಲೂಕುಗಳಲ್ಲಿ ಕರೊನಾ ಪಾಸಿಟಿವಿಟಿ ದರ ಹೆಚ್ಚಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಗೆ ಬಂದು ಹೋಗುವವರ ಮೇಲೆ ನಿಗಾ ವಹಿಸಲಾಗಿದೆ. ತಿಂಗಳಲ್ಲಿ 2,500 ರಿಂದ 3 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜತೆಗೆ ಪ್ರತೀ ಭಾನುವಾರ, ನಗರ ಸಮೀಪದ ಎರಡು ಗಾರ್ಮೆಂಟ್ಸ್ ಘಟಕದ ಉದ್ಯೋಗಿಗಳನ್ನು ಕರೆಸಿ ಕರೊನಾ ಪರೀಕ್ಷೆ ಮಾಡುವ ಕಾರ‌್ಯ ಮುಂದುವರಿದಿದೆ. ಜನತೆ, ಲಾಕ್‌ಡೌನ್ ತೆರವಾಗಿದೆ ಎಂದು ಬೇಜವಾಬ್ದಾರಿಯಿಂದ ವರ್ತಿಸಿ, ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳದೆ ಕರೊನಾ ನಿಯಮ ಪಾಲಿಸುವುದು ಒಳ್ಳೆಯದು ಎಂದು ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts