More

    ಕ್ವಾರಂಟೈನ್‌ನಲ್ಲಿರುವವರಿಗೆ ಶೀಘ್ರ ಸ್ವಾಬ್ ಟೆಸ್ಟ್

    ಕುಂದಾಪುರ: ಬೇರೆ ರಾಜ್ಯಗಳಿಂದ ಬಂದು ಕ್ವಾರಂಟೈನ್‌ನಲ್ಲಿರುವವರಿಗೆ ಆಹಾರ ಸರಬರಾಜು ಮಾಡುವಲ್ಲಿ ಲೋಪವಾಗದಂತೆ ನೋಡಿಕೊಳ್ಳಬೇಕು. ಕ್ವಾರಂಟೈನ್‌ನಲ್ಲಿರುವವರ ಗಂಟಲ ದ್ರವ (ಸ್ವಾಬ್) ಪರೀಕ್ಷೆ ಶೀಘ್ರ ಮಾಡಬೇಕು. ಅದಕ್ಕೆ ಬೇಕಾದ ಸಿಬ್ಬಂದಿ ಹಾಗೂ ಪರಿಕರಗಳ ಕೊರತೆಯಿದ್ದರೆ ಗಮನಕ್ಕೆ ತಂದರೆ ಪರಿಹಾರ ಮಾಡಲಾಗುತ್ತದೆ ಎಂದು ಧಾರ್ಮಿಕ ದತ್ತಿ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಕುಂದಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಜತೆ ಆಯೋಜಿಸಿದ ಕೋವಿಡ್ 19 ಪರಿಹಾರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕ್ವಾರಂಟೈನ್ ಕೇಂದ್ರಗಳಿಗಾಗಿ ಖಾಸಗಿ ಕಟ್ಟಡ ಹಾಗೂ ವಾಹನ ಪಡೆದುಕೊಳ್ಳಲು ಅವಕಾಶವಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಗಳು ಅಸಮರ್ಪಕವಾಗುತ್ತಿದೆ ಎನ್ನುವ ದೂರುಗಳಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷೃ ತೋರಿದರೆ ಯಾರಿಗೂ ರಿಯಾಯಿತಿ ಇಲ್ಲ ಎಂದು ಎಚ್ಚರಿಸಿದರು.

    ಕ್ವಾರಂಟೈನ್ ಕೇಂದ್ರಗಳಿಗೆ ತುರ್ತು ಅವಶ್ಯಕ ಆಹಾರ ವಸ್ತುಗಳನ್ನು ಖರೀದಿ ಮಾಡಿದಲ್ಲಿ ಅದರ ವೆಚ್ಚವನ್ನು ಜಿಲ್ಲಾಡಳಿತದಿಂದ ಭರಿಸಲಾಗುವುದು. ಮಕ್ಕಳ ಹಾಗೂ ಗರ್ಭಿಣಿಯರ ಪರೀಕ್ಷಾ ವರದಿ ನೆಗೆಟಿವ್ ಬಂದಲ್ಲಿ ಅವರನ್ನು ಹೋಂ ಕ್ವಾರಂಟೈನ್‌ಗಾಗಿ ಬಿಡುಗಡೆ ಮಾಡಲಾಗುವುದು ಎಂದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹಾಗೂ ಡಾ.ಕೆ.ಪ್ರೇಮಾನಂದ ಮಾಹಿತಿ ನೀಡಿ, ಕುಂದಾಪುರ ಹಾಗೂ ಬೈಂದೂರು ತಾಲೂಕಿನ 62 ಕೇಂದ್ರಗಳಲ್ಲಿ 3,982 ಮಂದಿ ಕ್ವಾರಂಟೈನ್‌ಗೊಳಗಾಗಿದ್ದಾರೆ. 487 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಕರಾವಳಿಯ 3 ಜಿಲ್ಲೆಗಳಿಗೆ ಹೊಂದಿಕೊಂಡಂತೆ ಒಂದೇ ಪರೀಕ್ಷಾ ಕೇಂದ್ರ ಇರುವುದರಿಂದಾಗಿ ಶೀಘ್ರ ಪರೀಕ್ಷೆ ಹಾಗೂ ವರದಿ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 1918 ವರದಿಗಳು ಬಂದಿದ್ದು, 542 ಮಂದಿಯ ವರದಿ ಬರಲು ಬಾಕಿಯಿದೆ. ಆರೋಗ್ಯ ಇಲಾಖೆಯಲ್ಲಿ ತಜ್ಞ ಹಾಗೂ ತರಬೇತಿ ಹೊಂದಿದ ಸಿಬ್ಬಂದಿ ಕೊರತೆಯಿರುವುದರಿಂದ ಪರೀಕ್ಷಾ ಕಾರ್ಯ ವಿಳಂಬವಾಗುತ್ತಿದೆ ಎಂದರು.

    ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಎಎಸ್‌ಪಿ ಹರಿರಾಂಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಹೆಗ್ಡೆ ತಗ್ಗರ್ಸೆ, ಗೌರಿ ದೇವಾಡಿಗ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸದಸ್ಯರಾದ ಪ್ರವೀಣ್‌ಕುಮಾರ ಶೆಟ್ಟಿ ಕಡ್ಕೆ, ಕರಣ್ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್, ಭಾರತಿ, ತಹಸೀಲ್ದಾರ್‌ಗಳಾದ ತಿಪ್ಪೇಸ್ವಾಮಿ, ಬಿ.ಪಿ.ಪೂಜಾರ್, ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಸುರೇಶ್ ನಾಯಕ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

    ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ದೇವಸ್ಥಾನಗಳಲ್ಲಿನ ಸಿಬ್ಬಂದಿಯನ್ನು ಕರೊನಾ ನಿಯಂತ್ರಣ ಕಾರ್ಯಗಳಲ್ಲಿ ನಿಯೋಜನೆ ಮಾಡಲಾಗುತ್ತಿದೆ. 50 ವರ್ಷ ದಾಟಿದವರು, ಆರೋಗ್ಯ ಅಶಕ್ತರನ್ನು ನಿಯೋಜನೆ ಮಾಡದಂತೆ ಸ್ಪಷ್ಟ ಸೂಚನೆ ನೀಡಲಾಗುತ್ತದೆ. ಲಾಕ್‌ಡೌನ್ ಇರುವುದರಿಂದ ಭಾನುವಾರ ಮದುವೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ಸರ್ಕಾರಿ ನಿಯಮಗಳಿಗೆ ತೊಡಕುಂಟಾಗದಂತೆ ಸ್ವಯಂ ನಿಯಂತ್ರಣ ಹಾಕಿ ಕಾರ್ಯಕ್ರಮ ಮಾಡುವುದು ಒಳ್ಳೆಯದು. ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿನ ವ್ಯವಸ್ಥೆಗಳು ಸರಿಯಾಗಿ ನಡೆಯಲು ಪ್ರತಿ ಕೇಂದ್ರಗಳಿಗೂ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು.
    ಕೋಟ ಶ್ರೀನಿವಾಸ ಪೂಜಾರಿ ಧಾರ್ಮಿಕ ದತ್ತಿ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts