More

    ಉಡುಪಿ ಐವರಲ್ಲಿ ಕರೊನಾ ಪಾಸಿಟಿವ್

    ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 8 ವರ್ಷದ ಬಾಲಕ, ಗರ್ಭಿಣಿ ಸಹಿತ ಐವರಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
    ಮಹಾರಾಷ್ಟ್ರದಿಂದ ಬಂದ ನಾಲ್ವರು ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿತ್ರದುರ್ಗದಿಂದ ಮೇ 16ರಂದು ಕ್ಯಾನ್ಸರ್ ಚಿಕಿತ್ಸೆಗೆ ಬಂದಿದ್ದ 17 ವರ್ಷದ ಯುವತಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಮುಂಬೈಯಿಂದ ಕೆಲದಿನಗಳ ಹಿಂದೆ ಆಗಮಿಸಿ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ 8 ವರ್ಷದ ಬಾಲಕ, 24 ವರ್ಷದ ಗರ್ಭಿಣಿ, 24 ವರ್ಷದ ಪುರುಷ, 38 ವರ್ಷದ ಪುರುಷನಿಗೆ ಪಾಸಿಟಿವ್ ವರದಿ ಬಂದಿದೆ.

    ಮುಂಬೈನಿಂದ ಬಂದ ನಾಲ್ವರ ಪೈಕಿ 24 ವರ್ಷದ ಯುವಕ ಮೇ 11ಕ್ಕೆ ಜಿಲ್ಲೆಗೆ ಆಗಮಿಸಿದ್ದು, ಈತ 22 ಮಂದಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದರು. 8 ವರ್ಷದ ಬಾಲಕ ಮತ್ತು 38 ವರ್ಷದ ವ್ಯಕ್ತಿ ಸಂಬಂಧಿಗಳಾಗಿದ್ದು, ಇವರು 33 ಮಂದಿಗೆ ಪ್ರಾಥಮಿಕ ಸಂಪರ್ಕವಾಗಿದ್ದಾರೆ. ಗರ್ಭಿಣಿ 11 ಮಂದಿಯ ಸಂಪರ್ಕದಲ್ಲಿದ್ದರು. ಈ ಮೂವರು ಮೇ 13ರಂದು ಜಿಲ್ಲೆಗೆ ಆಗಮಿಸಿದ್ದಾರೆ. ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಎಲ್ಲರ ಗಂಟಲ ದ್ರವವನ್ನು ಪರೀಕ್ಷೆ ನಡೆಸಲಾಗುವುದು. ಸೋಂಕಿತ ಐವರನ್ನು ಕೋವಿಡ್-19 ವಿಶೇಷ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

    ಕ್ಯಾನ್ಸರ್ ಜತೆ ಕರೊನಾ ಸವಾಲು: ಚಿತ್ರದುರ್ಗದಿಂದ ಕ್ಯಾನ್ಸರ್ ಚಿಕಿತ್ಸೆಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ಆಗಮಿಸಿದ 17 ವರ್ಷದ ಯುವತಿಯಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದ್ದು, ಕರೊನಾ ಜತೆಗೆ ಕ್ಯಾನ್ಸರ್ ಗುಣಪಡಿಸುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಜಿಲ್ಲಾ ಮಟ್ಟದ ತಜ್ಞರ ಸಮಿತಿಯಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ವೈದ್ಯರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಅವಶ್ಯಕತೆ ಇಲ್ಲ. ಈಕೆಯ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಗುರುತಿಸುವ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ ಎಂದರು.

    ಪಾಸಿಟಿವ್ 16ಕ್ಕೆ ಏರಿಕೆ: ಮಾರ್ಚ್ 29ರಿಂದ ಮೇ 15ರವರೆಗಿನ 47 ದಿನಗಳ ಅವಧಿಯಲ್ಲಿ ಒಂದೇ ಒಂದು ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿರಲಿಲ್ಲ. ಅದಕ್ಕೂ ಮೊದಲು ಮೂವರು ಗುಣಮುಖರಾಗಿದ್ದರು. ಮೇ 15ರ ಬಳಿಕ ಪ್ರತಿದಿನವೆಂಬಂತೆ ಕರೊನಾ ಪ್ರಕರಣ ಪತ್ತೆಯಾಗುತ್ತಿದ್ದು, ಮಂಗಳವಾರ ಈ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

    104 ವರದಿ ನೆಗೆಟಿವ್: ಜಿಲ್ಲೆಯಲ್ಲಿ 104 ಮಂದಿಯ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 1, ಇಲ್‌ನೆಸ್ 4, ಕೊವಿಡ್-19 ಸಂಪರ್ಕ 46, ಹಾಟ್‌ಸ್ಪಾಟ್‌ನಿಂದ ಬಂದವರು 171 ಮಂದಿ ಸೇರಿದಂತೆ ಒಟ್ಟು 222 ಮಂದಿಯ ಮಾದರಿಯನ್ನು ಮಂಗಳವಾರ ಸಂಗ್ರಹಿಸಲಾಗಿದೆ. 16 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 654 ಮಂದಿಯ ವರದಿ ಬರಲು ಬಾಕಿ ಇದೆ. ಮಂಗಳವಾರ 75 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts