More

    ಕರೊನಾ ಲಾಕ್‌ಡೌನ್ ಪರಿಣಾಮ ಅದ್ದೂರಿ ವಿವಾಹಗಳಿಗೆ ಬ್ರೇಕ್

    ಚನ್ನಪಟ್ಟಣ: ಕರೊನಾ ಮಹಾಮಾರಿ ವಿಶ್ವವನ್ನೇ ಕಂಗೆಡಿಸಿದೆ. ಆದರೆ, ಮಕ್ಕಳನ್ನು ಅದ್ದೂರಿಯಾಗಿ ಮದುವೆ ಮಾಡಿಕೊಡುವ ಸಲುವಾಗಿ ಬಹುತೇಕ ಸಾಲವೆಂಬ ಶೂಲಕ್ಕೆ ಸಿಲುಕುತ್ತಿದ್ದ ಹಲವಾರು ಪಾಲಕರನ್ನು ಬಚಾವ್ ಮಾಡಿದೆ.

    ಹೌದು… ಕರೊನಾ ಲಾಕ್‌ಡೌನ್ ಘೋಷಣೆಯಾದ ಮೇಲೆ ನಡೆಯುತ್ತಿರುವ ಸರಳ ವಿವಾಹಗಳನ್ನು ಗಮನಿಸಿದರೆ ಇದು ಸತ್ಯ ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠೆಗಾಗಿ ಹಾಗೂ ಒಬ್ಬರೇ ಮಕ್ಕಳು ಎಂಬ ಕಾರಣಕ್ಕೆ ಅರ್ಥಿಕವಾಗಿ ಸ್ಥಿತಿವಂತರಲ್ಲದವರು ಕೂಡ, ಮದುವೆಯನ್ನು ಕಲ್ಯಾಣ ಮಂಟಪಗಳಲ್ಲಿ ನೇರವೇರಿಸಿ ನೂರಾರು ಮಂದಿಗೆ ಊಟ ಹಾಕಿಸುವುದು ಅನಿವಾರ್ಯ ವಾಗಿತ್ತು. ಆದರೆ, ಇದೀಗ ಲಾಕ್‌ಡೌನ್ ಅವಕ್ಕೆಲ್ಲ ಬ್ರೇಕ್ ಹಾಕಿದೆ.

    ಪ್ರಸ್ತುತ ಮದುವೆ ಸೀಸನ್ ಆಗಿರುವ ಕಾರಣ ಈಗಾಗಲೇ ಸಾಕಷ್ಟು ಮದುವೆಗಳು ನಿಗದಿಯಾಗಿ ಕಲ್ಯಾಣ ಮಂಟಪಗಳು ಬುಕ್ ಆಗಿದ್ದವು. ಲಾಕ್‌ಡೌನ್ ಇದ್ದರೂ ನಿಶ್ಚಯವಾಗಿರುವ ಮುಹೂರ್ತದಲ್ಲೇ ಮದುವೆಯಾಗಲಿ ಎಂಬ ಉದ್ದೇಶದಿಂದ ಪಾಲಕರು ಮನೆಯ ಮುಂದೆ ಚಪ್ಪರಹಾಕಿ ಗ್ರಾಮ ದೇವತೆಗಳ ಸನ್ನಿಧಿಯಲ್ಲಿ ಧಾರೆ ಎರೆದುಕೊಡುತ್ತಿದ್ದಾರೆ.

    ಪಾಲಕರು ಬಚಾವ್, ಮದುಮಕ್ಕಳಿಗೆ ನಿರಾಸೆ: ಪ್ರತಿವರ್ಷ ಈ ದಿನಮಾನಗಳಲ್ಲಿ ಎಲ್ಲೆಡೆ ಮದುವೆ, ಆರಕ್ಷತತೆ, ಬೀಗರೂಟ ಕಾರ್ಯಕ್ರಮಗಳನ್ನು ಜಿದ್ದಿಗೆ ಬಿದ್ದವರಂತೆ ಆಯೋಜಿಸುತ್ತಿದುದ್ದು ಸಾಮಾನ್ಯವಾಗಿತ್ತು. ಕೆಲ ಪಾಲಕರು ಸಾಲ ಮಾಡಿ ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಆದರೆ ಉಳ್ಳವರು ಕೂಡ ಸರಳ ಮದುವೆ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಅದ್ದೂರಿ ಫೋಟೋಶೂಟ್‌ನೊಂದಿಗೆ ಬಂಧು-ಬಾಂಧವರ ಎದುರು ಸಪ್ತಪದಿ ತುಳಿಯುವ ಆಸೆ ಹೊಂದಿದ್ದ ಕೆಲವು ಮದುಮಕ್ಕಳಿಗೆ ಕರೊನಾ ನಿರಾಸೆ ಮೂಡಿಸಿದೆ ಅನ್ನಬಹುದು.

     

    ಈ ಹಿಂದಿನಿಂದಲೂ ಅದ್ದೂರಿ ವಿವಾಹಗಳಿಗೆ ರೈತಸಂಘ ವಿರೋಧ ವ್ಯಕ್ತಪಡಿಸುತ್ತಿದೆ. ಕುವೆಂಪು ಅವರ ಮಂತ್ರ ಮಾಂಗಲ್ಯ ಕಾರ್ಯಕ್ರಮದ ಬಗ್ಗೆ ಕಳೆದ 40 ವರ್ಷಗಳಿಂದ ಪ್ರಚಾರ ನಡೆಸುತ್ತಿದ್ದೇವೆ. ಅದರಂತೆ ಲೆಕ್ಕವಿಲ್ಲದಷ್ಟೂ ವಿವಾಹಗಳಿಗೆ ರೈತಸಂಘ ಸಾಕ್ಷಿಯಾಗಿದೆ. ಅದರೆ, ಇತ್ತೀಚೆಗೆ ಅದ್ದೂರಿ ವಿವಾಹಗಳು ಮತ್ತೆ ಹೆಚ್ಚಾಗಿ ಅರಂಭವಾಗಿದ್ದವು. ಮದುವೆಗಾಗಿ ಸಾಲ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು. ಇದೀಗ ಎಲ್ಲವನ್ನು ಈ ಕರೊನಾ ಬದಲಾಯಿಸಿದೆ.
    ಎಂ. ರಾಮು ರೈತಸಂಘ ರಾಜ್ಯ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts