More

    18 ಮಂದಿ ಕರೊನಾ ಮಹಾಮಾರಿಗೆ ಬಲಿ ! ; ಮುಂದುವರಿದ ಸಾವಿನ ಸರಣಿ ; ಸೋಂಕಿತರ ಕೈಗೆ ಸೀಲ್ ಹಾಕಿ

    ತುಮಕೂರು: ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಬಾರದಂತೆ ಕಾಣುತ್ತಿದೆ. ಐದು ವರ್ಷಕ್ಕಿಂತ ಕೆಳಗಿನ 25 ಮಕ್ಕಳು ಸೇರಿ 1682 ಜನರಲ್ಲಿ ಸೊಂಕು ಕಾಣಿಸಿಕೊಂಡಿದೆ. ಸಾವಿನ ಸರಣಿ ಮುಂದುವರೆದಿದ್ದು ಭಾನುವಾರ 18 ಮಂದಿ ಕರೊನಾಕ್ಕೆ ಬಲಿಯಾಗಿರುವುದು ಜಿಲ್ಲಾಡಳಿತವನ್ನು ಆತಂಕಕ್ಕೆ ಸಿಲುಕಿಸಿದೆ. ಈ ಮಧ್ಯೆ ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರು ಎಗ್ಗಿಲ್ಲದೆ ಓಡಾಡುತ್ತಿದ್ದು ಈ ಹಿಂದೆ ಪಾಸಿಟಿವ್ ಬಂದವರ ಕೈಮೇಲೆ ಹಾಕಲಾಗುತ್ತಿದ್ದ ಸೀಲ್ ಅನ್ನು ಮತ್ತೆ ಹಾಕುವಂತೆ ಸಾರ್ವಜನಿಕರಿಂದ ಒತ್ತಾಯಕೇಳಿಬಂದಿದೆ.

    ಈ ಭೀತಿಯ ನಡುವೆ ಒಂದೇ ದಿನ 2005 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 18057 ಸಕ್ರಿಯ ಪ್ರಕರಣಗಳಿದ್ದು 142 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿರಾ ತಾಲೂಕಿನಲ್ಲಿ ಅತೀ ಹೆಚ್ಚು 414 ಜನರಿಗೆ ಸೋಂಕು ತಗುಲಿದೆ. ಪಾವಗಡ 222, ಕೊರಟಗೆರೆ 215 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇನ್ನೂ ತುಮಕೂರು ತಾಲೂಕಿನಲ್ಲಿ 315 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಗುಬ್ಬಿ 182, ಚಿಕ್ಕನಾಯಕನಹಳ್ಳಿ 135, ತಿಪಟೂರು 65, ತುರುವೇಕೆರೆ 64, ಮಧುಗಿರಿ 46 ಹಾಗೂ ಕುಣಿಗಲ್‌ನಲ್ಲಿ 28 ಜನರಿಗೆ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ.

    ಸೀಲ್ ಹಾಕುವುದು ಸೂಕ್ತ: ಜನತಾಕರ್ಫ್ಯೂ ಜಾರಿ ಹಿನ್ನೆಲೆಯಲ್ಲೂ ಕರೊನಾ ನಿಯಂತ್ರಣಕ್ಕೆ ಬಾರದೆ ಇರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ತಂದಿದೆ. ಯಾವುದೇ ರೋಗಲಕ್ಷಣಗಳಿಲ್ಲದ ಕರೊನಾ ಸೋಂಕು ಕಾಣಿಸಿಕೊಂಡು ಹೋಂ ಐಸೋಲೇಷನ್‌ನಲ್ಲಿರುವರು ಎಲ್ಲೆಂದರಲ್ಲಿ ಓಡಾಡುತ್ತಿರುವುದು ಸೋಂಕು ಹರಡಲು ಪ್ರಮುಖ ಕಾರಣ ಎನ್ನುವ ಅಭಿಪ್ರಾಯ ಇದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಕೈಗೆ ಕಡ್ಡಾಯವಾಗಿ ಸೀಲ್ ಹಾಕುವುದನ್ನು ಮತ್ತೆ ಜಾರಿಗೆ ತರಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

    ಸಾವಿನ ಸರಣಿ ಮುಂದುವರಿಕೆ : ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರೆದಿದೆ. 18 ಮಂದಿಯನ್ನು ಕರೊನಾ ಬಲಿ ಪಡೆದಿದೆ. ಕೊರಟಗೆರೆ ಪಟ್ಟಣದ 28 ವರ್ಷದ ಮಹಿಳೆ, ಶಿರಾ ತಾಲೂಕು ಹಾಲೇನಹಳ್ಳಿಯ 29 ವರ್ಷದ ವ್ಯಕ್ತಿ, ಮಧುಗಿರಿ ತಾಲೂಕಿನ ಮಲ್ಲೇನಹಳ್ಳಿಯ 31 ವರ್ಷದ ವ್ಯಕ್ತಿ, ಮಧುಗಿರಿ ಪಟ್ಟಣದ 36 ವರ್ಷದ ಮಹಿಳೆ ಸೇರಿದಂತೆ 9 ಮಹಿಳೆಯರು ಹಾಗೂ 9 ಪುರುಷರು ಕರೊನಾದಿಂದ ಮೃತಪಟ್ಟಿದ್ದಾರೆ.

    ಕೋವಿಶೀಲ್ಡ್ ಲಸಿಕೆ 2ನೇ ಡೋಸ್ ಅಂತರ ಪರಿಷ್ಕರಣೆ : ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಯ ಮೊದಲನೆ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 18 ರಿಂದ 44 ಹಾಗೂ 45 ವರ್ಷ ಮೇಲ್ಪಟ್ಟವರು ಎರಡನೇ ಡೋಸ್ ಪಡೆಯಲು ನಿಗದಿಪಡಿಸಲಾಗಿದ್ದ 6 ರಿಂದ 8 ವಾರಗಳ ಅಂತರವನ್ನು 12 ರಿಂದ 16 ವಾರಗಳವರೆಗೆ ಪರಿಷ್ಕರಿಸಲಾಗಿದೆ. ಎರಡು ಡೋಸ್ ಗಳ ನಡುವಿನ ಪರಿಷ್ಕೃತ ಕಾಲಾವಧಿ ಅಂತರವು ಕೋವಿಶೀಲ್ಡ್ ಲಸಿಕೆಗೆ ಮಾತ್ರ ಅನ್ವಯಿಸುತ್ತದೆ. ಕೋವ್ಯಾಕ್ಸಿನ್ ಲಸಿಕೆಗೆ ಅನ್ವಯಿಸುವುದಿಲ್ಲ ಎಂದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

    ಕರೊನಾ ಪರೀಕ್ಷೆಗಳಿಗೆ ಹೊಸ ದರ ನಿಗದಿ : ಕೋವಿಡ್-19 ಪತ್ತೆ ಹಚ್ಚಲು ನಡೆಸುವ ಆರ್‌ಟಿಪಿಸಿಆರ್, ಟ್ರೂ-ನ್ಯಾಟ್, ಸಿಬಿ ನ್ಯಾಟ್, ರ‌್ಯಾಪಿಡ್ ಆಂಟಿಜನ್ ಹಾಗೂ ರ‌್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆಗಳ ದರವನ್ನು ಸರ್ಕಾರ ಮರು ನಿಗದಿಪಡಿಸಿದೆ. ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಶಾಲೆಗಳಿಗೆ ಮಾದರಿಗಳನ್ನು ಕಳುಹಿಸುವ ಆರ್‌ಟಿ-ಪಿಸಿಆರ್ ಪರೀಕ್ಷೆಗೆ 500ರೂ., ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸಿಸುವ ಆರ್ ಟಿ ಪಿಸಿಆರ್ ಪರೀಕ್ಷೆಗೆ 800ರೂ., ಟ್ರೂ ನ್ಯಾಟ್ ಪರೀಕ್ಷೆಗೆ 1250 ರೂ., ಸಿಬಿ ನ್ಯಾಟ್ ಪರೀಕ್ಷೆಗೆ 2400ರೂ., ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ರ‌್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ 400ರೂ., ಹಾಗೂ ರ‌್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆಗೆ 500ರೂ.,ಗಳ ದರವನ್ನು ನಿಗದಿಪಡಿಸಲಾಗಿದೆ. ಈ ಎಲ್ಲ ಪರೀಕ್ಷೆಗಳ ಮಾದರಿಯನ್ನು ಮನೆಯಿಂದ ಸಂಗ್ರಹಿಸಬೇಕಾದಲ್ಲಿ ಒಂದು ಮನೆಯ ಸಂಗ್ರಹ ದರ 400 ರೂ.ಗಳನ್ನು ಮೀರಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts