More

    ಮತದಾರನಿಗೆ ಹೊಸ ಸ್ಮಾರ್ಟ್ ಐಡಿ

    ಮತದಾರನಿಗೆ ಹೊಸ ಸ್ಮಾರ್ಟ್ ಐಡಿ

    ಕಡೂರು: ನಕಲಿ ಮತದಾನ ಗುರುತಿನ ಕಾರ್ಡ್ ಹಾವಳಿ ತಡೆಗಟ್ಟಲು ಚುನಾವಣಾ ಆಯೋಗ ಕಪ್ಪು-ಬಿಳುಪಿನ ಕಾರ್ಡ್​ಗೆ ಗುಡ್​ಬೈ ಹೇಳಿ ಸ್ಮಾರ್ಟ್ ಎಪಿಕ್ ಕಾರ್ಡ್ ನೀಡುವ ಮೂಲಕ ಪಾರದರ್ಶಕತೆಗೆ ಒತ್ತು ನೀಡಿದೆ.

    ಈ ಹಿಂದಿನ ಕಾರ್ಡ್​ಗಳು ಕಪ್ಪು-ಬಿಳುಪಿನ ಬಣ್ಣದಲ್ಲಿದ್ದವು. ಮತದಾರನ ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಅಲ್ಲದೆ ಹೆಸರು, ವಿಳಾಸ, ಮತದಾರನ ವಯಸ್ಸಿನಲ್ಲಿ ಸಾಕಷ್ಟು ಲೋಪಗಳು ಉಂಟಾಗುತ್ತಿದ್ದವು. ಈ ಗೊಂದಲ ನಿವಾರಣೆಗೆ ಆಯೋಗ ಐಡಿ ಕಾರ್ಡ್ ಡಿಜಿಟಲೀಕರಣಕ್ಕೆ ಮುಂದಾಗಿದೆ.

    ನಕಲಿ ಕಾರ್ಡ್​ಗಳ ಹಾವಳಿಗೆ ಕಡಿವಾಣ ಹಾಕಿದರೂ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆ ಆಗಿರಲಿಲ್ಲ. ನಕಲಿ ಕಾರ್ಡ್ ಗುರುತಿಸಲು ಸಾಧ್ಯವಾಗದ ಕಾರಣ ಕಲರ್​ಫುಲ್ ಕಾರ್ಡ್ ನೀಡುತ್ತಿದೆ.

    ಈವರೆಗೂ ಇದ್ದ ಗುರುತಿನ ಚೀಟಿಗಳು ಮೋನೊಕ್ರೋಮ್ ಆಗಿದ್ದವು. ಕಾಗದದ ಮೇಲೆ ಮುದ್ರಿಸಿ ಅವುಗಳನ್ನು ಲ್ಯಾಮಿನೆಟ್ ಮಾಡಲಾಗುತ್ತಿತ್ತು. ಆದರೆ ಈಗ ಬಂದಿರುವ ಮತದಾರನ ಕಾರ್ಡ್ 8.6 ಸೆಂ.ಮೀ ಉದ್ದ, 5.4 ಸೆಂ.ಮೀ ಅಗಲದ ಪಾನ್​ಕಾರ್ಡ್ ಮಾದರಿಯಲ್ಲಿ ಹೊಸ ವಿನ್ಯಾಸ ಪಡೆದುಕೊಂಡಿದೆ. ಇದನ್ನು ಪಿವಿಸಿ ಶೀಟ್ ಮೇಲೆ ಮುದ್ರಿಸಿ ಲ್ಯಾಮಿನೆಟ್ ಮಾಡಲಾಗುತ್ತದೆ. ಅಕ್ಷರಗಳು ಹೆಚ್ಚು ಸ್ಪಷ್ಟವಾಗಿದ್ದು ಮತದಾರನ ಗುರುತು ಪತ್ತೆ ಸುಲಭವಾಗಲಿದೆ. ಅಲ್ಲದೆ ಹಾಲೋಗ್ರಾಮ್ ಸ್ಟೀಕರ್ ಸಹ ಹೊಂದಿರುವ ಕಾರ್ಡ್ ಹಿಂದಿನ ಎಪಿಕ್ ಕಾರ್ಡ್ ರೀತಿಯಲ್ಲಿ ಮಾನ್ಯತೆ ಪಡೆದಿದೆ.

    ಹೊಸದಾಗಿ ಅರ್ಜಿ ಸಲ್ಲಿಸುವವರು, ತಿದ್ದುಪಡಿ ಅರ್ಜಿ ನೀಡುವವರು ಮತಗಟ್ಟೆಯ ಅಧಿಕಾರಿಗಳ ಬಳಿ ಅರ್ಜಿ ನೀಡಿ ಸರಿಪಡಿಸಿಕೊಳ್ಳಬಹುದು. ಚುನಾವಣಾ ಆಯೋಗದ ನಿರ್ದೇಶನದಂತೆ ಹೊಸ ಮತದಾರರ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಅರ್ಜಿ ನೀಡಿದ ಮತದಾರರಿಗೆ ಸ್ಮಾರ್ಟ್​ಕಾರ್ಡ್ ವಿನ್ಯಾಸದ ಕಾರ್ಡ್​ಗಳೇ ಸಿಗಲಿವೆ.

    ಹೊಸ ಅರ್ಜಿದಾರರಿಗೆ ಸ್ಮಾರ್ಟ್ ಐಡಿ: ಕಡೂರು ವಿಧಾನಸಭಾ ಕ್ಷೇತ್ರದಲ್ಲೇ ಅಂದಾಜು 1,98,728 ಮತದಾರರಿದ್ದಾರೆ. ಪ್ರಸ್ತುತ ಹೊಸ ವಿನ್ಯಾಸದ 4495 ಸ್ಮಾರ್ಟ್​ಕಾರ್ಡ್​ಗಳನ್ನು ಈಗಾಗಲೇ ವಿತರಿಸಲಾಗಿದೆ. 18ವರ್ಷ ತುಂಬಿದ 751 ಯುವ ಮತದಾರರು ಹೊಸ ವಿನ್ಯಾಸದ ಕಾರ್ಡ್​ಗಳನ್ನು ಪಡೆದುಕೊಂಡಿದ್ದಾರೆ. ಹಾಲಿ ಚಾಲ್ತಿಯಲ್ಲಿರುವ ಮತದಾರರ ಕಾರ್ಡ್​ಗಳೂ ಮಾನ್ಯತೆ ಹೊಂದಿವೆ. ಮುಂದಿನ ದಿನಗಳಲ್ಲಿ ಹೊಸದಾಗಿ ಅರ್ಜಿ ನೀಡುವವರಿಗೆ ಸ್ಮಾರ್ಟ್ ಐಡಿ ಕಾರ್ಡ್​ಗಳನ್ನು ವಿತರಿಸಲಾಗುವುದು.

    ಕಾರ್ಡ್​ನ ವಿಶೇಷ ಏನು?: ಚುನಾವಣಾ ಆಯೋಗ ನೀಡುವ ಸ್ಮಾಟ್ ಐಡಿ ಕಾರ್ಡ್​ನಲ್ಲಿ ಬಾರ್​ಕೋಡ್ ಇರುತ್ತದೆ. ಈ ಸ್ಮಾರ್ಟ್​ಕಾರ್ಡ್ ಉಪಯೋಗಿಸಿ ಮತದಾರ ಸ್ಕ್ಯಾನ್ ಮಾಡಿದರೆ ಸಾಕು ಎಲ್ಲ ರೀತಿಯ ಮಾಹಿತಿ ಸ್ಕ್ರೀನ್​ನಲ್ಲಿ ಲಭ್ಯವಾಗುತ್ತದೆ. ಭಾವಚಿತ್ರಗಳು ಕಲರ್​ನಲ್ಲಿದ್ದು ಪ್ರತಿಯೊಬ್ಬ ಮತದಾರನ ಮಾಹಿತಿ ಸ್ಪಷ್ಟವಾಗಿ ನಮೂದಾಗಿರುತ್ತದೆ.

    ಚುನಾವಣಾ ಆಯೋಗ ನೀಡಿದ ಹೊಸ ರೂಪ ಪಡೆದ ಸ್ಮಾಟ್ ಕಾರ್ಡ್​ನ ಬಾರ್​ಕೋಡ್​ನಲ್ಲಿ ಎಲ್ಲ ರೀತಿಯ ಮಾಹಿತಿ ಅಡಕವಾಗಿರುತ್ತದೆ. ಅಕ್ರಮ ಮತದಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮ ಸೂಕ್ತವಾದದ್ದು ಎನ್ನುತ್ತಾರೆ ಸ್ಮಾರ್ಟ್ ಐಡಿ ಪಡೆದ ಮತದಾರ ಕೆ.ಎನ್.ಚೇತನ್​ಕುಮಾರ್.

    ಚುನಾವಣಾ ಆಯೋಗದ ನಿರ್ದೇಶನದಂತೆ ಹೊಸ ಮತದಾರರ ಗುರುತಿನ ಚೀಟಿ ವಿತರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಚುನಾವಣಾ ಮತದಾರರ ಪರಿಷ್ಕರಣೆಯಾದ ನಂತರ ಅರ್ಜಿ ನೀಡಿದ ಮತದಾರರಿಗೆ ಸ್ಮಾರ್ಟ್ ಕಾರ್ಡ್ ಸಿಗಲಿವೆ ಎನ್ನುತ್ತಾರೆ ತಹಸೀಲ್ದಾರ್ ಜೆ.ಉಮೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts