More

    ದುಡಿಯುವ ಕಾರ್ಮಿಕರ ಕಾರ್ಡ್ ರದ್ದು ಆರೋಪ; ಕಾರ್ಮಿಕರ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಮಿಕರು

    ರಾಣೆಬೆನ್ನೂರ: ಕಾರ್ಮಿಕ ಇಲಾಖೆಯವರು ನಿಜವಾದ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಪಡಿಸಿ ಆಟೋರಿಕ್ಷಾ ಚಾಲಕರು, ಇತರ ವ್ಯಾಪಾರಸ್ಥರ ಕಾರ್ಡ್‌ಗಳನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಿ ವಿವಿಧ ಕಾರ್ಮಿಕರು ಇಲ್ಲಿಯ ಮಾರುತಿ ನಗರದ ಕಾರ್ಮಿಕ ಇಲಾಖೆಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ಜರುಗಿತು.
    ಜಿಲ್ಲೆಯಲ್ಲಿ ನಕಲಿ ಕಾರ್ಮಿಕರ ಕಾರ್ಡ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಫೆ. 8ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ನೂರಾರು ಜನ ಕಾರ್ಮಿಕರು ಮಾರುತಿ ನಗರದಲ್ಲಿರುವ ಕಾರ್ಮಿಕ ಇಲಾಖೆಯ ಎದುರು ಸರದಿ ಸಾಲಿನಲ್ಲಿ ನಿಂತು ಆಕ್ಷೇಪಣೆ ಸಲ್ಲಿಸುತ್ತಿದ್ದರು.
    ಈ ಸಮಯದಲ್ಲಿ ಕಾರ್ಮಿಕ ನಿರೀಕ್ಷಕ ಎನ್. ದೇವೇಂದ್ರ ಸ್ಥಳಕ್ಕೆ ಬರುತ್ತಿದ್ದಂತೆ ಎಲ್ಲ ಕಾರ್ಮಿಕರು ಒಟ್ಟಿಗೆ ಸೇರಿ ನಮಗೆ ನ್ಯಾಯ ಒದಗಿಸಿಕೊಡುವಂತೆ ಮುತ್ತಿಗೆ ಹಾಕಿದರು.
    ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಳೆದ ವಾರದಲ್ಲಿ ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಪಡಿಸಿದ್ದಾರೆ. ಆದರೆ, ಅವರು ರದ್ದುಪಡಿಸಿದ ಲಿಸ್ಟ್‌ನಲ್ಲಿ ನಿಜವಾದ ಕಾರ್ಮಿಕರ ಹೆಸರುಗಳೇ ಹೆಚ್ಚಾಗಿ ಸೇರ್ಪಡೆಯಾಗಿವೆ ಹೊರತು ನಕಲಿ ಕಾರ್ಮಿಕರ ಕಾರ್ಡ್ ಹೊಂದಿದವರ ಹೆಸರುಗಳು ಇಲ್ಲ.
    ಬೆಂಗಳೂರಿನಿಂದ ಬಂದ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕ ಕೆಲಸ ಮಾಡುವುದನ್ನು ಪರಿಶೀಲನೆ ಮಾಡಿಲ್ಲ. ಬದಲಾಗಿ ಎಲ್ಲೋ ಒಂದು ಕಡೆ ಕುಳಿತು ಫೋನ್ ಮೂಲಕ ಕಾರ್ಮಿಕರ ಏನು ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ಪರಿಶೀಲಿಸಿದ್ದಾರೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ನಿಜವಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕಾರ್ಡ್‌ಗಳು ರದ್ದಾಗಿವೆ. ಕೂಡಲೇ ಅಧಿಕಾರಿಗಳು ನಿಜವಾದ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
    ಕಾರ್ಮಿಕರಿಗೆ ಪ್ರತಿಕ್ರಿಯಿಸಿದ ಕಾರ್ಮಿಕ ನಿರೀಕ್ಷಕ ಎನ್. ದೇವೇಂದ್ರ, ನಿಜವಾದ ಕಾರ್ಮಿಕರ ಕಾರ್ಡ್‌ಗಳು ರದ್ದು ಆಗಲ್ಲ. ಆದ್ದರಿಂದಲೇ ಕಾರ್ಮಿಕರು ಆಕ್ಷೇಪಣೆ ಸಲ್ಲಿಸಲು ಫೆ. 8ರವರೆಗೆ ಕಾಲಾವಕಾಶ ನೀಡಲಾಗಿದೆ. ನೀವು ಆಕ್ಷೇಪಣೆ ಸಲ್ಲಿಸಿದ ಬಳಿಕ ಅವುಗಳನ್ನು ಸರಿಯಾಗಿ ಮತ್ತೊಂದು ಬಾರಿ ಪರಿಶೀಲನೆ ಮಾಡಲಾಗುವುದು.
    ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ನಂತರ ನಿಜವಾದ ಎಲ್ಲ ಕಾರ್ಮಿಕರ ಕಾರ್ಡ್‌ಗಳಿಗೂ ಅನುಮೋದನೆ ನೀಡಲಾಗುವುದು. ಆದ್ದರಿಂದ ಯಾರೂ ಗೊಂದಲ ಮಾಡಿಕೊಳ್ಳದೆ ಆಕ್ಷೇಪಣೆ ಅರ್ಜಿ ಸಲ್ಲಿಸಿ ಎಂದು ಮನವೊಲಿಸಿದರು. ನಂತರ ಕಾರ್ಮಿಕರು ಸರದಿ ಸಾಲಿನಲ್ಲಿ ನಿಂತು ಆಕ್ಷೇಪಣೆ ಸಲ್ಲಿಸಲು ಮುಂದಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts