More

    ಬಾಲಕನ ಸಹಿತ ಕಾರು ಟೋಯಿಂಗ್, ಟಿಂಟ್ ಅಳವಡಿಸಿದ್ದರಿಂದ ತಿಳಿಯದೆ ಸಮಸ್ಯೆ

    ಮಂಗಳೂರು: ನಗರದಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಇದ್ದಾಗಲೇ ಟೋಯಿಂಗ್ ಮಾಡಿ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಹೊತ್ತೊಯ್ದ ಘಟನೆ ಗುರುವಾರ ಸಂಜೆ ನಡೆದಿದೆ.

    ಮಿಜಾರುವಿನ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳು ಮತ್ತು ಚಾಲಕನ ಜತೆ ನಗರಕ್ಕೆ ಶಾಪಿಂಗ್‌ಗೆ ಬಂದಿದ್ದು, ಕದ್ರಿಯ ಗಿರಿಯಾಸ್ ಸಮೀಪ ುಟ್‌ಪಾತ್‌ನಲ್ಲಿ ಕಾರನ್ನು ಪಾರ್ಕಿಂಗ್ ಮಾಡಿದ್ದರು. ಈ ಸಂದರ್ಭ ಮಹಿಳೆಯ 7 ವರ್ಷದ ಬಾಲಕ ಮಲಗಿದ್ದ ಕಾರಣ ಅವನನ್ನು ಚಾಲಕನ ಜತೆ ಕಾರಿನಲ್ಲೇ ಬಿಟ್ಟು ಮಹಿಳೆ ಶಾಪಿಂಗ್‌ಗೆ ತೆರಳಿದ್ದರು. ಮಹಿಳೆ ಮೊಬೈಲ್ ಬಿಟ್ಟು ಹೋಗಿದ್ದು, ಕೊಡಲೆಂದು ಚಾಲಕ ಕಾರನ್ನು ಲಾಕ್ ಮಾಡಿ ಹೋಗಿದ್ದರು. ಈ ವೇಳೆ ಪೊಲೀಸರ ಟೋಯಿಂಗ್ ವಾಹನ ಅದೇ ದಾರಿಯಲ್ಲಿ ಬಂದಿದ್ದು, ಕಾರನ್ನು ತೆರವು ಮಾಡುವಂತೆ ಘೋಷಣೆ ಮಾಡಿದ್ದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಕಾರಿನ ಗಾಜಿಗೆ ಟಿಂಟ್ ಇದ್ದ ಕಾರಣ ಒಳಗೆ ಬಾಲಕ ಇರುವುದು ಗೊತ್ತಾಗದೆ ಟೋಯಿಂಗ್ ನಿರ್ವಾಹಕರು ಕಾರನ್ನು ಟೋಯಿಂಗ್ ಮಾಡಿದ್ದಾರೆ.

    ಮಹಿಳೆ ಶಾಪಿಂಗ್ ಮುಗಿಸಿ ಬಂದಾಗ ಬಾಲಕನ ಸಹಿತ ಕಾರು ನಾಪತ್ತೆಯಾಗಿತ್ತು. ಚಾಲಕನಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಕಾರನ್ನು ಟೋಯಿಂಗ್ ಮಾಡಿರುವುದನ್ನು ಸ್ಥಳೀಯ ಅಂಗಡಿಯವರು ತಿಳಿಸಿದರು. ತಕ್ಷಣ ಕದ್ರಿ ಠಾಣೆಗೆ ತೆರಳಿ ವಿಷಯ ತಿಳಿಸಿದಾಗ ಸ್ವತಃ ಪೊಲೀಸರಿಗೂ ಗಾಬರಿಯಾಗಿದೆ. ಪರಿಶೀಲಿಸಿದಾಗ ಬಾಲಕ ಕಾರಿನಲ್ಲಿ ಮಲಗಿದ ಸ್ಥಿತಿಯಲ್ಲೇ ಇತ್ತು.

    ಮಹಿಳೆ ಕಾರನ್ನು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದಕ್ಕೆ, ಟಿಂಟ್ ಹಾಕಿರುವುದಕ್ಕೆ ದಂಡ ವಿಧಿಸಿ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ತೆರವಾಗದ ಟಿಂಟ್: ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಬಳಸುವ ಪ್ರಕರಣಗಳು ಕಡಿಮೆಯಾಗಿಲ್ಲ. ಪೊಲೀಸರು ಆಗೊಮ್ಮೆ ಈಗೊಮ್ಮೆ ಕಾರ್ಯಾಚರಣೆ ನಡೆಸಿ ಸಾಮಾನ್ಯ ಕಾರುಗಳಿಂದ ಟಿಂಟ್ ತೆಗೆಸುತ್ತಾರೆ. ಆದರೆ ಐಷಾರಾಮಿ ಕಾರುಗಳು ಟಿಂಟ್ ಹೊಂದಿದ್ದರೂ ಪೊಲೀಸರು ಗಮನ ಹರಿಸುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts