ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು; ವಾಹನ ಚಲಾಯಿಸುತ್ತಿದ್ದ ಚಿತ್ರನಟ ನಾಗಭೂಷಣ್ ಮದ್ಯಪಾನ ಮಾಡಿದ್ದರಾ?

Nagabhusan
Published on

ಬೆಂಗಳೂರು: ಚಿತ್ರನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವಿಗೀಡಾಗಿದ್ದು, ಆಕೆಯ ಪತಿ ಗಾಯಗೊಂಡಿದ್ದಾರೆ. ರಾತ್ರಿಯಲ್ಲಿ ಈ ಅಪಘಾತವಾಗಿದ್ದರಿಂದ ನಟ ನಾಗಭೂಷಣ್ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರಾ ಎಂಬ ಪ್ರಶ್ನೆಯೊಂದೂ ಮೂಡಿದೆ.

ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 9.30ರ ಸುಮಾರಿಗೆ ಅಪಘಾತವಾಗಿತ್ತು. ಪಾದಚಾರಿಗಳಾದ ಕೃಷ್ಣ ಮತ್ತು ಪ್ರೇಮಾ ಎಂಬವರಿಗೆ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಪ್ರೇಮಾ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಅವರ ಪತಿ ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದರು.

ಈ ಕುರಿತಂತೆ ಡಿಸಿಪಿ (ಸಂಚಾರ-ದಕ್ಷಿಣ) ಶಿವಪ್ರಕಾಶ್ ದೇವರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಕಾರು ಚಾಲಕ ವಾಹನ ಓಡಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಪ್ರೇಮಾ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕೃಷ್ಣರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಚಾಲಕ, ಚಿತ್ರನಟ ನಾಗಭೂಷಣ್ ಅವರನ್ನು ಬಂಧಿಸಿ, ಸ್ಟೇಷನ್ ಬೇಲ್ ನೀಡಿ ಕಳುಹಿಸಲಾಗಿದೆ.

ಅತಿವೇಗವೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅವರು ಮದ್ಯಪಾನ ಮಾಡಿಲ್ಲ ಎನ್ನುವುದು ಆಲ್ಕೋಹಾಲ್ ಟೆಸ್ಟಿಂಗ್ ಮೀಟರ್​ನಲ್ಲಿ ಕಂಡುಬಂದಿದೆ. ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಮುಂದಿನ ವಿಚಾರಣೆಗೆ ಅವರನ್ನು ಮತ್ತೆ ಕರೆಯಲಾಗುತ್ತದೆ. ಅಲ್ಲದೆ ಅಪಘಾತದ ಬಳಿಕ ಅವರು ಸ್ಥಳೀಯರ ಜತೆ ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net