More

    ಜಿ.ಬೊಮ್ಮಸಂದ್ರದಲ್ಲಿ ಸರ್ಕಾರಿ ಗೌರವಗಳೊಂದಿಗೆ ಕ್ಯಾಪ್ಟನ್ ರೆಡ್ಡಿ ಅಂತ್ಯಸಂಸ್ಕಾರ ; ಸೇನಾನಿಯ ಅಂತಿಮ ದರ್ಶನ ಪಡೆದ ಜನ

    ಗೌರಿಬಿದನೂರು: ಕಾರವಾರದ ಕದಂಬ ನೌಕಾನೆಲೆಯಲ್ಲಿ ಪ್ಯಾರಾಗ್ಲೈಡಿಂಗ್ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಕ್ಯಾಪ್ಟನ್ ಬಿ.ಎಸ್.ಎಂ.ರೆಡ್ಡಿ ಅವರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಜಿ.ಬೊಮ್ಮಸಂದ್ರದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

    3 ದಿನಗಳ ಹಿಂದೆ ಕಾರವಾರದ ರವೀಂದ್ರನಾಥ್ ಠಾಗೂರ್ ಕಡಲ ತೀರದಲ್ಲಿ ಪ್ಯಾರಾ ಮೋಟರಿಂಗ್ ಮಾಡುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡು ಪ್ಯಾರಾ ಮೋಟಾರ್ ಸಮುದ್ರಕ್ಕೆ ಬಿದ್ದಿತ್ತು. ಅವಘಡದಲ್ಲಿ ಬದುಕುಳಿದಿದ್ದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ದೊರೆಯದೆ ಪೊಲೀಸ್ ಜೀಪಿನಲ್ಲಿ ಸಾಗಿಸುವಾಗ ಕೊನೆಯುಸಿರೆಳೆದಿದ್ದರು.

    ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ: ರೆಡ್ಡಿ ಅವರು ಜಿ.ಬೊಮ್ಮಸಂದ್ರದ ದಿ.ಸದಾಶಿವರೆಡ್ಡಿ ಅವರ ಪುತ್ರ. ವರ್ಷಕ್ಕೊಮ್ಮೆ ಸೋದರ ಮನಮೋಹನರೆಡ್ಡಿ ಮನೆಗೆ ಬಂದು ಹೋಗುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ರೆಡ್ಡಿ ಅವರ ಪಾರ್ಥಿವ ಶರೀರವನ್ನು ಕಾರವಾರದಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಾಗೂ ರಸ್ತೆ ಮಾರ್ಗದಲ್ಲಿ ಸ್ವಗ್ರಾಮಕ್ಕೆ ತರಲಾಯಿತು, ಬಳಿಕ ಸ್ವಂತ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಜಿಲ್ಲಾ ಹಾಗೂ ತಾಲೂಕು ಆಡಳಿತ, ನೌಕಾಪಡೆ, ಪೊಲೀಸ್ ಇಲಾಖೆ ಸಿಬ್ಬಂದಿ ಸರ್ಕಾರದ ಶಿಷ್ಠಾಚಾರಗಳೊಂದಿಗೆ ಪಾಲ್ಗೊಂಡಿದ್ದರು. ಸಾವಿರಾರು ಜನರು ಸೇನಾನಿಯ ಅಂತಿಮ ದರ್ಶನ ಪಡೆದರು.

    ಪ್ಯಾರಾಗ್ಲೈಡಿಂಗ್‌ಗೆ ಮನವಿ:ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್‌ಗೆ ಅನುಮತಿ ನೀಡಬೇಕೆಂದು ಕೆಲ ತಿಂಗಳ ಹಿಂದಷ್ಟೇ ಬಿ.ಎಸ್.ಎಂ.ರೆಡ್ಡಿ ಅವರು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೆ ಅನುಮತಿ ದೊರೆತಿರಲಿಲ್ಲ. ಈಗ ಆಸಕ್ತಿದಾಯಕ ಪ್ಯಾರಾಗ್ಲೈಡಿಂಗ್‌ನಲ್ಲಿ ತೊಡಗಿದ್ದಾಗಲೇ ಅವಘಡಕ್ಕೊಳಗಾಗಿ ಮೃತಪಟ್ಟಿರುವುದು ದುರಂತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts