More

    ಎಪಿಎಂಸಿಯಲ್ಲಿ ಶನಿವಾರ ರಜೆ ರದ್ದು ಮಾಡಿ

    ಕಿರುವಾರ ಎಸ್​. ಸುದರ್ಶನ್​ ಕೋಲಾರ
    ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವ ತರಕಾರಿ ದಲ್ಲಾಳರು ಶನಿವಾರ ರಜೆ ಮಾಡುವುದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದೆ.

    ದಲ್ಲಾಳರು ಸಂಘ ಕಟ್ಟಿಕೊಂಡು ಸ್ವಯಂಪ್ರೇರಿತವಾಗಿ ಶನಿವಾರ ರಜೆ ಘೋಷಣೆ ಮಾಡಿಕೊಂಡಿರುವುದರಿಂದ ರೈತರು ಸಮಸ್ಯೆಗೆ ಸಿಲುಕುವಂತಾಗಿದೆ. ತರಕಾರಿ ದಲ್ಲಾಳರಿಗೆ ರೈತರ ಹಿತಕ್ಕಿಂತ ಸ್ವಹಿತಾಸಕ್ತಿಯೇ ಮುಖ್ಯ ಎಂಬ ಆರೋಪ ಕೇಳಿಬಂದಿದೆ.
    ಕೋಲಾರ ಟೊಮ್ಯಾಟೊ ಮಾರುಕಟ್ಟೆ ಏಷ್ಯಾ ಖಂಡದಲ್ಲೇ ಅತಿದೊಡ್ಡದು. ಇಲ್ಲಿನ ಎಪಿಎಂಸಿಯು 23.31 ಎಕರೆ ವಿಸ್ತೀರ್ಣ ಹೊಂದಿದ್ದು, ಟೊಮ್ಯಾಟೊ ಜತೆಗೆ ವಿವಿಧ ತರಕಾರಿ ಮಾರುಕಟ್ಟೆಯು ನಡೆಯುತ್ತಿದೆ. ಇಲ್ಲಿಂದ ತಮಿಳುನಾಡು, ಆಂಧ್ರ, ಕೇರಳ ಸೇರಿ ಇತರ ರಾಜ್ಯಗಳಿಗೂ ಸರಬರಾಜಾಗುತ್ತದೆ. ಸುಗ್ಗಿಯಲ್ಲಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಆವಕ ಹೆಚ್ಚಾಗಿರುತ್ತದೆ.
    ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ತೆರವುಗೊಳಿಸುವುದಕ್ಕಾಗಿ 18 ವರ್ಷಗಳ ಹಿಂದೆ ಅಧಿಕಾರಿಗಳು ಒಂದು ದಿನ ರಜೆ ಘೋಷಣೆ ಮಾಡುವಂತೆ ವರ್ತಕರಿಗೆ ತಿಳಿಸಿದ್ದರು. ಅದರಂತೆ ವರ್ತಕರು ಪ್ರತಿ ಶನಿವಾರ ರಜೆ ಮಾಡುತ್ತಿದ್ದಾರೆ. ಆದರೆ, ಎಪಿಎಂಸಿ ಪ್ರಾಂಗಣದಿಂದ ತರಕಾರಿ ಮಾರುಕಟ್ಟೆ ಸ್ಥಳಾಂತರವಾದ ನಂತರವೂ ಈ ರಜೆ ಮುಂದುವರಿದಿದ್ದು, ಇದರಿಂದ ತರಕಾರಿ ಬೆಳೆಗಾರರಿಗೆ ತೊಂದರೆಯಾಗಿದೆ.

    ತೊಂದರೆ ಯಾಕೆ?:
    ತರಕಾರಿ ಬಹಳ ಬೇಗ ಕೆಡುವ ಪದಾರ್ಥವಾಗಿದೆೆ. ಸಲನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ನಿಗದಿತ ಸಮಯಕ್ಕೆ ತಂದರೂ ವರ್ತಕರು ಬೇಕಾಬಿಟ್ಟಿಯಾಗಿ ಹರಾಜು ಮಾಡಿ ವಂಚನೆ ಮಾಡುತ್ತಾರೆ. ಒಂದು ವೇಳೆ ಮಾರುಕಟ್ಟೆಯಲ್ಲೇ ಬಿಟ್ಟು ಹೋದರೆ ವ್ಯಾಪಾರಸ್ಥರು ಬಂದರೆ ಮಾತ್ರ ಮಾರಾಟ ಮಾಡುತ್ತಾರೆ. ಇಲ್ಲದಿದ್ದರೆ ಮರುದಿನ ಮಾರಾಟ ಮಾಡಿ, ಕಡಿಮೆ ಬೆಲೆಗೆ ಹೋಗಿದೆ ಎನ್ನುತ್ತಾರೆ. ಈ ಕಾರಣಕ್ಕಾಗಿ ವಾರದ ಎಲ್ಲ ದಿನ ಮಾರುಕಟ್ಟೆ ತೆರೆದಿದ್ದರೆ ಅನುಕೂಲ ಎಂಬುದು ರೈತರ ಅನಿಸಿಕೆ.

    • ಶನಿವಾರ ಮಾರುಕಟ್ಟೆಗೆ ನಡೆಸಲು ಸಿದ್ಧ
      ಜಾಗದ ಸಮಸ್ಯೆಯಿಂದ ಕೆಲ ವರ್ಷಗಳ ಹಿಂದೆ ವಾರದಲ್ಲಿ ಒಂದು ದಿನ ರಜೆ ಘೋಷಣೆ ಮಾಡಲು ಅಧಿಕಾರಿಗಳೇ ತಿಳಿಸಿದ್ದರಿಂದ ಶನಿವಾರ ರಜೆ ಹಾಕಲಾಗುತ್ತಿದೆ. ಭಾನುವಾರ ತಮಿಳುನಾಡು, ಆಂಧ್ರದಲ್ಲಿ ಮಾರುಕಟ್ಟೆಗೆ ರಜೆ ಇರುವುದರಿಂದ ವ್ಯಾಪಾರಸ್ಥರು ತರಕಾರಿ ಖರೀದಿಗೆ ಮುಂದಾಗುವುದಿಲ್ಲ. ರೈತರು ಮಾರುಕಟ್ಟೆಗೆ ತಂದರೆ ಮಾರಾಟ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಶನಿವಾರದ ರಜೆ ರದ್ದು ಮಾಡಲು ಅಧಿಕಾರಿಗಳು ಎಂದೂ ಹೇಳಿಲ್ಲ ಎಂದು ತರಕಾರಿ ಮಾರಾಟಗಾರೊಬ್ಬರು ತಿಳಿಸಿದ್ದಾರೆ.
    • ದಲ್ಲಾಳರ ವಿರುದ್ಧ ಆರೋಪ
      ರೈತರು ತಂದ ತರಕಾರಿಗೆ 100 ಕೆಜಿಗೆ 5 ರಿಂದ 10 ಕೆಜಿಯಷ್ಟು ಲೆಸ್​ ಮಾಡಿ ಹಣ ನೀಡುತ್ತಾರೆ. ರೈತರಿಂದ ಶೇ.10 ಕಮಿಷನ್​ ಪಡೆದುಕೊಳ್ಳುತ್ತಾರೆ. ಹಾಗೆಯೇ ಅಧಿಕೃತವಾಗಿ ಚೀಟಿ ನೀಡದೆ ಬಿಳಿ ಚೀಟಿ ನೀಡುವ ಮೂಲಕ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮಂಡಿ ಮಾಲೀಕರು, ರೈತರ ಸಮ್ಮುಖದಲ್ಲಿ ಟೊಮ್ಯಾಟೊ ಹರಾಜು ನಡೆಯುತ್ತದೆ. ಇದರಲ್ಲಿ ವ್ಯಾಪಾರಸ್ಥರು ಪಾಲ್ಗೊಂಡು ನೇರ ಹರಾಜು ಮೂಲಕವೇ ಟೊಮ್ಯಾಟೊ ಖರೀದಿಸುತ್ತಾರೆ. ಟೊಮ್ಯಾಟೊ ಮಂಡಿ ಮಾಲೀಕರು ಯಾವುದೇ ದಿನ ರಜೆ ಘೋಷಣೆ ಮಾಡಿಕೊಂಡಿಲ್ಲ. ಆದರೆ ತರಕಾರಿ ಮಾಲೀಕರು ಏಕೆ ಶನಿವಾರ ಘೋಷಣೆ ಮಾಡಿಕೊಂಡಿದ್ದಾರೆ..? ಇದರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂಬುದು ರೈತರ ಒತ್ತಾಯ.
    • ಅಧಿಕಾರಿಗಳ ವಿರುದ್ಧ ಜಿದ್ದು
      ಟೊಮ್ಯಾಟೊ ಮತ್ತು ತರಕಾರಿ ಮಾರುಕಟ್ಟೆ ಜಾಗ ಸಮಸ್ಯೆಯಾದ ಕಾರಣ ತರಕಾರಿ ಮಾರುಕಟ್ಟೆಯಲ್ಲಿ ಎಪಿಎಂಸಿ ಪಕ್ಕದ ಟಿಎಪಿಸಿಎಂಸ್​ ಜಾಗದಲ್ಲಿ 51 ಗೋದಾಮುಗಳ ಪೈಕಿ 21 ತಾತ್ಕಾಲಿಕ ಶೆಡ್​ಗಳನ್ನು 31 ಗೋದಾಮುಗಳನ್ನು ಲೀಸ್​ ಕಂ ಸೇಸ್​ ಆಗಿ ಪರಿವರ್ತಿಸಿ ತರಕಾರಿ ವರ್ತಕರಿಗೆ ಹಂಚಿಕೆ ಮಾಡಲಾಗಿದೆ. ಪ್ರತಿ ದಿನ ಎಪಿಎಂಸಿಗೆ ಸೆಸ್​ ಪಾವತಿ ಮಾಡಲು ನಿಗದಿಪಡಿಸಲಾಗಿದೆ. ಆದರೆ ಬಹುತೇಕರು ಪಾವತಿ ಮಾಡದೆ ಸರ್ಕಾರಕ್ಕೆ ಆದಾಯ ವಂಚಿಸುತ್ತಿದ್ದಾರೆ. ಪ್ರತಿಯೊಬ್ಬರೂ ಪಾರದರ್ಶಕವಾಗಿ ಆನ್​ಲೈನ್​, ಆರ್​ಟಿಜಿಎಸ್​, ಚೆಕ್​ ಮೂಲಕ ಪಾವತಿ ಮಾಡಲು ಕ್ರಮಕೈಗೊಂಡಿದ್ದರಿಂದ ಎಪಿಎಂಸಿ ಅಧಿಕಾರಿಗಳ ವಿರುದ್ಧ ಜಿದ್ದು ಸಾಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕೋಟ್​…
    ತರಕಾರಿ ದಲ್ಲಾಳರು ಇಷ್ಟಬಂದಂತೆ ನಡೆದುಕೊಳ್ಳುತ್ತಾರೆ. ಅವರಿಗೆ ರೈತರ ಹಿತಕ್ಕಿಂತ ಸ್ವ ಹಿತಾಸಕ್ತಿಯೆ ಮುಖ್ಯವಾಗಿದೆ. ಮಾರುಕಟ್ಟೆಯಲ್ಲಿ ರೈತರ ಶೋಷಣೆ ನಿರಂತರವಾಗುತ್ತಿದೆ. ತರಕಾರಿ ವರ್ತಕರ ಹಾಗೂ ಅಧಿಕಾರಿಗಳ ನಡುವೆ ಸಮಸ್ಯೆ ಇತ್ಯರ್ಥಪಡಿಸಲು ಪ್ರತ್ಯೇಕ ತಂಡ ರಚನೆ ಮಾಡಬೇಕು.- ಕೆ.ನಾರಾಯಣಗೌಡ, ರೈತ ಸಂದ ರಾಜ್ಯ ಉಪಾಧ್ಯಕ್ಷ.

    ಕೋಟ್​…
    ಮಾರುಕಟ್ಟೆಯಲ್ಲಿ ಆಗುತ್ತಿರುವ ರೈತರ ಶೋಷಣೆ ಬಗ್ಗೆ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಶನಿವಾರ ರಜೆಯ ಬಗ್ಗೆಯೂ ಧ್ವನಿ ಎತ್ತಲಾಗಿದೆ. ಜಿಲ್ಲೆಯಲ್ಲಿ ತರಕಾರಿ ಬೆಳೆಯುವವರ ಸಂಖ್ಯೆಯು ಜಾಸ್ತಿಯಾಗುತ್ತಿದ್ದು, ರೈತರ ಹಿತದೃಷ್ಟಿಯಿಂದ ಶನಿವಾರ ರದ್ದುಗೊಳಿಸಬೇಕು. – ನಾಗರಾಜ್​, ರೈತ, ಗೂಳಿಗಾನಹಳ್ಳಿ.

    ಕೋಟ್​…
    ಶನಿವಾರ ರಜೆ ಹಾಕಿಕೊಂಡಿರುವ ಬಗ್ಗೆ ಸುಮಾರು ರೈತರಿಂದ ವಿರೋಧ ವ್ಯಕ್ತವಾಗಿದೆ. ವ್ಯವಸ್ಥೆಯನ್ನು ಸರಿಪಡಿಸಲು ಕ್ರಮಕೈಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.- ವಿಜಯಲಕ್ಷ್ಮಿ, ಕಾರ್ಯದರ್ಶಿ, ಎಪಿಎಂಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts