More

    ಇ-ಹರಾಜು ಪ್ರಕ್ರಿಯೆ ರದ್ದು

    ಹುಣಸೂರು: ಅರಣ್ಯ ಇಲಾಖೆ ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಇ-ಹರಾಜು ಪ್ರಕ್ರಿಯೆಯನ್ನು ರೈತರ ತೀವ್ರ ವಿರೋಧ ಹಾಗೂ ದಿಢೀರ್ ಪ್ರತಿಭಟನೆಯಿಂದಾಗಿ ರದ್ದುಗೊಳಿಸಲಾಯಿತು.

    ಅರಣ್ಯ ಇಲಾಖೆಯ ಹುಣಸೂರು ವಿಭಾಗ ವ್ಯಾಪ್ತಿಯ ಕಲ್ಲಬೆಟ್ಟದಲ್ಲಿರುವ ಸರ್ಕಾರಿ ನಾಟಾ ಸಂಗ್ರಹಾಲಯದಲ್ಲಿ ದಾಸ್ತಾನಿರುವ 500 ಲಾಟ್‌ಗಳ ಇ-ಹರಾಜು ಪ್ರಕ್ರಿಯೆ ಆಯೋಜನೆಗೊಂಡಿತ್ತು. ಈ ಕುರಿತು ತಿಂಗಳ ಹಿಂದೆಯೇ ಇಲಾಖೆ ಪ್ರಕಟಣೆ ಹೊರಡಿಸಿ ಕಚೇರಿ ಮುಂಭಾಗ ಪೋಸ್ಟರ್ ಮೂಲಕ ಮಾಹಿತಿ ಪ್ರಕಟಿಸಿತ್ತು. ಅದರಂತೆ ಭಾನುವಾರ ಇ-ಹರಾಜು ಆರಂಭಗೊಂಡು ಎರಡು ಸೆಷನ್ ಅಂತ್ಯಗೊಂಡಿದ್ದವು. ಅಷ್ಟರಲ್ಲಿ ತಾಲೂಕು ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಸದಸ್ಯರು ಮತ್ತು ರೈತಸಂಘದ 100ಕ್ಕೂ ಹೆಚ್ಚು ಮುಖಂಡರು ಸ್ಥಳಕ್ಕಾಗಮಿಸಿ ಇ-ಹರಾಜು ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

    ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ.ಸಿ.ಚಂದ್ರೇಗೌಡ ಮಾತನಾಡಿ, ಅನಕ್ಷರಸ್ಥರೇ ಹೆಚ್ಚಾ ಗಿರುವ ರೈತರಿಗೆ ಇ-ಹರಾಜು ಪ್ರಕ್ರಿಯೆ ಬಗ್ಗೆ ತಿಳಿದಿಲ್ಲ. ಮೇಲಾಗಿ ಭಾನುವಾರ ಇ-ಹರಾಜು ಪ್ರಕ್ರಿಯೆ ಇದೆ ಎಂಬುದೂ ನಮಗೆ ತಿಳಿದಿ ರಲಿಲ್ಲ. ಕೆಲ ರೈತರು ಇದನ್ನು ಗಮನಿಸಿ ಇಲ್ಲಿಗೆ ಬಂದಿದ್ದೇವೆ. ನಮಗೆ ಬಹಿರಂಗ ಹರಾಜಿನ ಮೂಲಕ ಯಾವುದೇ ತೆರಿಗೆ ವಿಧಿಸದೆ ಸೌದೆ ಒದಗಿಸಬೇಕು. ಇ-ಟೆಂಡರ್‌ಗಾಗಿ 20 ಸಾವಿರ ರೂ. ಮುಂಗಡ ಹಣ ಇಡುವಷ್ಟು ಶ್ರೀಮಂತ ರೈತರು ನಾವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಸಿಎಫ್ ಪೂವಯ್ಯ ರೈತರಿಂದ ಮನವಿ ಸ್ವೀಕರಿಸಿ, ರೈತರ ಅಭಿಪ್ರಾಯಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ಈ ದಿನದ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಲು ಮೇಲಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಇ-ಟೆಂಡರ್ ಮೂಲಕವೇ ಹರಾಜು ನಡೆಯಬೇಕಿದೆ. ಪ್ರಸ್ತುತ ತಂಬಾಕು ಬೆಳೆಗಾರರಿಗೆ ಸೌದೆಯ ಅವಶ್ಯಕತೆ ಇದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಮತ್ತೊಂದು ದಿನಾಂಕವನ್ನು ನಿಗದಿಪಡಿಸಿ ಸೌದೆಗಳ ಮಾರಾಟ ನಡೆಸಲಾಗುವುದೆಂದು ತಿಳಿಸಿದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು.ಎಂ.ಶಿವಣ್ಣ, ಕಿರಸೊಡ್ಲು ಮಾದೇಗೌಡ, ಕಿರಿಜಾಜಿ ಶಿವಶಂಕರ್, ಕಲ್ಲಹಳ್ಳಿ ವಿಷಕಂಠಪ್ಪ, ಜಯಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts