More

    ಕ್ಯಾಂಪ್ಕೋ ಆನ್‌ವೀಲ್ ಯೋಜನೆ ಜಾರಿ- ಕೃಷಿಕನ ಮನೆಯಿಂದಲೇ ಅಡಕೆ ಖರೀದಿ

    ಮಂಗಳೂರು: ನೇರವಾಗಿ ಕೃಷಿಕನ ಮನೆಗೆ ಹೋಗಿ ಅಡಕೆ ಖರೀದಿ ಮಾಡುವ ಕ್ಯಾಂಪ್ಕೊ ಆನ್‌ವೀಲ್ ಯೋಜನೆ ಜನವರಿಯಿಂದ ಅಧಿಕೃತವಾಗಿ ಜಾರಿಗೊಳಿಸಲಾಗುವುದು ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.
    ಪುತ್ತೂರಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆ ಆರಂಭಿಸಲಾಗಿದೆ, ಕ್ಯಾಂಪ್ಕೊ ಸದಸ್ಯರಲ್ಲಿ ಅನೇಕರು ಹಿರಿಯ ನಾಗರಿಕರು. ಅವರಿಗೆ ಅಡಕೆ ಸುಲಿದು ಪರಿಷ್ಕರಿಸಿದ ನಂತರ ಕ್ಯಾಂಪ್ಕೊ ಶಾಖೆಗಳಿಗೆ ಒಯ್ದು ಮಾರಾಟ ಕಷ್ಟವಾಗುತ್ತಿದೆ. ಕಾರ್ಮಿಕರು ಕೂಡ ಸಮಯಕ್ಕೆ ಒದಗುವುದು ಕಡಿಮೆಯಾಗಿರುವುದನ್ನು ಗಮನಿಸಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    32 ಕೋಟಿ ರೂ. ಲಾಭ: 2019-20ನೇ ಸಾಲಿನಲ್ಲಿ ಕಾಂಪ್ಕೊ 1,848 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, 32.10 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಕರೊನಾ ಕಾರಣದಿಂದಾಗಿ ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಸರ್ವ ಸದಸ್ಯರ ಮಹಾಸಭೆ ಡಿ.13ರಂದು ನಿಗದಿಪಡಿಸಲಾಗಿದೆ ಎಂದರು.

    ಚಾಕಲೇಟ್ ಕಿಯೋಸ್ಕ್: ಗ್ರಾಹಕರಿಗೆ ಕ್ಯಾಂಪ್ಕೊದ ಎಲ್ಲ ರೀತಿಯ ಚಾಕಲೇಟ್‌ಗಳನ್ನು ಪರಿಚಯಿಸುವ ಮತ್ತು ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಪುತ್ತೂರಿನಲ್ಲಿ ವಿಶೇಷ ಚಾಕಲೇಟು ಕಿಯೋಸ್ಕ್‌ಗಳು ಕಾರ್ಯಪ್ರವೃತ್ತವಾಗಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಪೈಸ್ ಟೋಫಿ ಎಂಬ ಹೊಸ ಚಾಕಲೇಟು ಉತ್ಪನ್ನ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಉತ್ತಮ ಬೇಡಿಕೆ ಇದೆ. ಮಾಣಿ- ಮೈಸೂರು ಹೆದ್ದಾರಿಯ ಕಾವು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಗೋದಾಮು ಪೂರ್ಣ ಪ್ರಮಾಣದ ಕಾಳು ಮೆಣಸು ಸಂಸ್ಕರಣಾ ಘಟಕವನ್ನು ಹೊಂದಲಿದ್ದು, ಫೆಬ್ರವರಿಯೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

    ಆಧುನಿಕ ಯಂತ್ರ ಖರೀದಿ: ರೈತರ ಉತ್ಪನ್ನಗಳ ದಾಸ್ತಾನಿಗಾಗಿ ಸಾಕಷ್ಟು ಸ್ಥಳಾವಕಾಶ ನೀಡುವ ದೃಷ್ಟಿಯಂದ ಬೈಕಂಪಾಡಿ, ಬೆಳ್ತಂಗಡಿ ಹಾಗೂ ಕೇರಳದ ತೃಶ್ಶೂರಿನಲ್ಲಿ ಗೋದಾಮು ನಿರ್ಮಿಸಲಾಗಿದ್ದು, ಸಾಗರದಲ್ಲಿ ಗೋದಾಮು ನಿರ್ಮಾಣ ಹಂತದಲ್ಲಿದೆ. ಚಾಕಲೇಟ್ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯ ವೃದ್ಧಿಸುವ ಉದ್ದೇಶದಿಂದ ಇಟಲಿಯಿಂದ ಗಂಟೆಗೆ 400-500 ಕಿ.ಗ್ರಾಂ ಕೊಕ್ಕೊ ಪುಡಿ ಮಾಡುವ 4.55 ಕೋಟಿ ರೂ. ಮೌಲ್ಯದ ಯಂತ್ರ ಖರೀದಿಸಲಾಗುವುದು. ಅಲ್ಲದೆ ಚಾಕಲೇಟು ಹದಗೊಳಿಸುವ 36.2 ಲಕ್ಷ ರೂ. ಮೌಲ್ಯದ ಯಂತ್ರವನ್ನೂ ಹೊಂದಲಾಗುವುದು ಎಂದು ವಿವರಿಸಿದರು.
    ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ (ಪ್ರಭಾರ) ಎಚ್.ಎಂ. ಕೃಷ್ಣ ಕುಮಾರ್, ಕಿಶೋರ್ ಕೊಡ್ಗಿ, ರೇಷ್ಮಾ ಮಲ್ಯ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts