More

    ನಾಳೆಯಿಂದ ಕ್ಯಾಂಪ್ಕೊ ಅಡಕೆ ಖರೀದಿ

    ಪುತ್ತೂರು: ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ. ಏ.13 ಸೋಮವಾರದಿಂದ ಕ್ಯಾಂಪ್ಕೊ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ 9 ಕೇಂದ್ರಗಳಲ್ಲಿ ಅಡಕೆ ಖರೀದಿಸಲಿದೆ. ಎಪಿಎಎಂಸಿಗಳು ಶೂನ್ಯ ಬಡ್ಡಿ ದರದಲ್ಲಿ 50 ಸಾವಿರ ರೂ.ವರೆಗೆ 3 ತಿಂಗಳವರೆಗೆ ಅಡಕೆಗೆ ಅಡಮಾನ ಸಾಲ ನೀಡಲಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸುಲಭ ದರದಲ್ಲಿ ಅಡಕೆ ಅಡಮಾನ ಸಾಲ ನೀಡಲಿವೆ.

    ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಶಾಸಕ ಸಂಜೀವ ಮಠಂದೂರು ಮತ್ತು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

    ಷರತ್ತುಗಳು ಏನೇನು?: ಹೊಸ ಅಡಕೆಗೆ ಇಂದಿನ ದರ ಕಿಲೋಗೆ 250 ಇದ್ದು, ಹಳೇ ಅಡಕೆಗೆ 275ರ ದರವಿದೆ. ಅದರಂತೆ ಖರೀದಿಸಲಿದ್ದೇವೆ. ಕ್ಯಾಂಪ್ಕೊ ಸದಸ್ಯರಿಂದ ಮಾತ್ರ ಖರೀದಿಸಲಿದ್ದೇವೆ. ಅವರು ತಮ್ಮ ಆರ್‌ಟಿಸಿ, ಸದಸ್ಯತ್ವ ಗುರುತುಪತ್ರ ತರಬೇಕು. ವಾಹನದಲ್ಲಿ ಬರಲು ಕೂಡ ಇದು ಪಾಸ್ ರೀತಿಯಲ್ಲಿ ಕೆಲಸ ಮಾಡಲಿದೆ. ಒಬ್ಬ ಸದಸ್ಯ ತಿಂಗಳಿಗೆ ಗರಿಷ್ಠ 1 ಕ್ವಿಂಟಾಲ್ ಅಥವಾ 25 ಸಾವಿರ ರೂ. ಮೊತ್ತದ ಅಡಕೆ ಮಾರಬಹುದು. 1 ತಿಂಗಳಲ್ಲಿ ಒಂದೇ ಬಾರಿ ಮಾರಲು ಅವಕಾಶ. ಇದನ್ನು ದೃಢಪಡಿಸಲು ಆಯಾ ಮಾರಾಟಗಾರ ಸದಸ್ಯರ ವಿವರ ಆನ್‌ಲೈನ್‌ನಲ್ಲಿ ದಾಖಲಾಗಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದರು.
    ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ, ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ತಾಪಂ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು.

    ಖರೀದಿ ಕೇಂದ್ರಗಳು:
    * ಪುತ್ತೂರು (ಕೊಕ್ಕೊ: ಶುಕ್ರವಾರ, ಅಡಕೆ- ಸೋಮವಾರ, ಬುಧವಾರ, ಗುರುವಾರ)
    * ಸುಳ್ಯ (ಕೊಕ್ಕೊ: ಗುರುವಾರ, ಅಡಕೆ: ಸೋಮವಾರ, ಬುಧವಾರ, ಶುಕ್ರವಾರ)
    * ಬೆಳ್ತಂಗಡಿ (ಕೊಕ್ಕೊ: ಸೋಮವಾರ, ಅಡಕೆ: ಮಂಗಳವಾರ, ಬುಧವಾರ, ಶುಕ್ರವಾರ)
    * ಕಡಬ: ಕೊಕ್ಕೊ: ಗುರುವಾರ, ಅಡಕೆ: ಸೋಮವಾರ, ಬುಧವಾರ, ಶುಕ್ರವಾರ)
    * ಉಪ್ಪಿನಂಗಡಿ: (ಅಡಕೆ ಮಾತ್ರ: ಸೋಮವಾರ, ಬುಧವಾರ, ಶುಕ್ರವಾರ)
    * ಆಲಂಕಾರ್ (ಅಡಕೆ ಮಾತ್ರ: ಸೋಮವಾರ, ಬುಧವಾರ, ಶುಕ್ರವಾರ)
    * ನಿಂತಿಕಲ್‌ಲ್ (ಅಡಕೆ ಮಾತ್ರ: ಸೋಮವಾರ, ಬುಧವಾರ, ಶುಕ್ರವಾರ)
    * ಅಡ್ಯನಡ್ಕ (ಕೊಕ್ಕೊ: ಗುರುವಾರ, ಅಡಕೆ: ಸೋಮವಾರ, ಬುಧವಾರ, ಶುಕ್ರವಾರ)
    * ವಿಟ್ಲ (ಕೊಕ್ಕೊ: ಗುರುವಾರ, ಅಡಕೆ: ಸೋಮವಾರ, ಬುಧವಾರ, ಶುಕ್ರವಾರ)

    ಗೇರುಬೀಜ ನೇರ ಖರೀದಿ ಚಿಂತನೆ
    ಗೇರುಬೀಜ ಖರೀದಿಗೆ ಇರಬಹುದಾದ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆ ಮಾಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
    ಲಾಕ್‌ಡೌನ್ ಆರಂಭದ ಮೊದಲು ಗೇರುಬೀಜ ಕಿಲೋ ಒಂದಕ್ಕೆ 105 ರೂ. ದರವಿತ್ತು. ಈಗ ಕೆಲವೆಡೆ ವ್ಯಾಪಾರಿಗಳು 30 ರೂ.ಗೆ ಖರೀದಿಸುತ್ತಿದ್ದಾರೆ. ಬೆಳೆಗಾರರ ಶೋಷಣೆಯನ್ನು ತಪ್ಪಿಸಲು ಗೇರು ಕಾರ್ಖಾನೆಗಳೇ ಖರೀದಿ ಕೇಂದ್ರ ಸ್ಥಾಪಿಸುವುದು ಅಥವಾ ಕ್ಯಾಂಪ್ಕೊ ಖರೀದಿ ಕೇಂದ್ರಗಳ ಜತೆ ಒಡಂಬಡಿಕೆ ಮಾಡಿಕೊಂಡು ಖರೀದಿ ಸಾಧ್ಯವೇ ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಜತೆ ಸಮಾಲೋಚನೆ ನಡೆಸಿದ್ದೇನೆ ಎಂದು ತಿಳಿಸಿದರು.
    ರಾಜ್ಯ ಸರ್ಕಾರ ರೈತರಿಗೆ ಹಸಿರು ಕಾರ್ಡ್ ನೀಡುವ ಬಗ್ಗೆಯೂ ಯೋಚಿಸುತ್ತಿದೆ. ಈ ಕಾರ್ಡ್ ಇದ್ದರೆ ರೈತರು ಮಾರುಕಟ್ಟೆಗೆ ಹೋಗಿ ಬರಲು ಅನುಕೂಲವಾಗುತ್ತದೆ ಎಂದರು.

    ತುರ್ತು ಕಾರಣಕ್ಕಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ತೀರಾ ಅಗತ್ಯವಿರುವವರು ಮಾತ್ರ ಬನ್ನಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕಳೆದ 2 ವರ್ಷಗಳಲ್ಲಿ ದೇಶದಲ್ಲಿ ಅಡಕೆ ಉತ್ಪಾದನೆ 30 ಶೇಕಡಾ ಕುಸಿದಿದೆ. ಎಲ್ಲ ಗೋದಾಮುಗಳಲ್ಲಿ ಅಡಕೆ ದಾಸ್ತಾನು ಕಡಿಮೆ ಇದ್ದು, ಉತ್ತರ ಭಾರತದಲ್ಲಿ ಅಡಕೆಗೆ ಬೇಡಿಕೆ ಇದೆ.
    – ಎಸ್.ಆರ್. ಸತೀಶ್ಚಂದ್ರ, ಕ್ಯಾಂಪ್ಕೊ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts