More

    ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮತಪ್ರಚಾರ ಆರಂಭ

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅಧಿಕೃತವಾಗಿ ಮತಪ್ರಚಾರಕ್ಕೆ ಚಾಲನೆ ನೀಡಿದರು.
    ಚಾಮುಂಡಿಬೆಟ್ಟದಲ್ಲಿ ಅವರು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಪ್ರಚಾರ ಆರಂಭಿಸಿದರು.

    ಬೆಟ್ಟದಲ್ಲಿರುವ ಕೆಲ ಮನೆಗಳಿಗೆ ತೆರಳಿ ಮತಯಾಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದನಾಗಿ ಆಯ್ಕೆಯಾದರೆ ಮೈಸೂರು-ಕೊಡಗು ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.


    ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು. ಮಾಹಿತಿ ತಂತ್ರಜ್ಞಾನದಲ್ಲಿ ಉದ್ಯೋಗ ಅವಕಾಶ ಸೃಷ್ಟಿಸಲಾಗುವುದು. ರಾಜ್ಯದಲ್ಲಿ 4 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದ್ದು, ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಲು ಬದ್ಧ ಎಂದು ತಿಳಿಸಿದರು.


    ಎಐಸಿಸಿ ಪ್ರಕಟಿಸಿರುವ 20 ಗ್ಯಾರಂಟಿಗಳಲ್ಲಿ 10 ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡುವ ಕರಪತ್ರವನ್ನು ವಿತರಿಸಲಾಗುವುದು. ರಾಜ್ಯ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದುಕೊಂಡಿದೆ. ಈ ವರ್ಷ ಗ್ಯಾರಂಟಿಗೆ 36 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಮುಂದಿನ 2024-25ನೇ ಸಾಲಿಗೆ 52 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದರೆ ಕೊಟ್ಟ ಮಾತನ್ನು ಈಡೇರಿಸಲು ಸಿದ್ಧರಿದ್ದೇವೆ ಎಂದರು.


    ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಈಗ ಬಿಜೆಪಿಯವರು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧರಾಗಿದ್ದಾರೆ. ಯಾವ ಸುಳ್ಳನ್ನಾದರೂ ಹೇಳುತ್ತಾರೆ. ಬಿಜೆಪಿಯವರಂತೆ ನಾವು ಕೋಮು ಘರ್ಷಣೆ, ಜಾತಿ, ಜಾತಿ ನಡುವೆ ತಂದಿಡುವ ಕೆಲಸ ಮಾಡುವುದಿಲ್ಲ. ಆ ಪ್ರವೃತ್ತಿ ಕಾಂಗ್ರೆಸ್‌ಗೆ ಇಲ್ಲ. ಬಿಜೆಪಿಯವರಂತೆ ಸುಳ್ಳು ಹೇಳದೆ ಜನರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.


    ಮೈಸೂರು-ಕೊಡಗು ಜಿಲ್ಲೆಗಳ ಒಕ್ಕಲಿಗರು 10 ವರ್ಷ ಪ್ರತಾಪ ಸಿಂಹಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಒಂದು ಅವಕಾಶ ಮಾಡಿಕೊಡಬೇಕು. 10 ವರ್ಷಗಳ ಕಾಲ ಮೈಸೂರು ಯಾವ ವ್ಯವಸ್ಥೆಯಲ್ಲಿತ್ತು, ಎಷ್ಟು ಹಾಳು ಮಾಡಿಕೊಂಡಿದ್ದೇವೆ ಎಂಬುದನ್ನು ಆಲೋಚಿಸಬೇಕು ಎಂದರು.


    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಡಾ ಅಧ್ಯಕ್ಷ ಕೆ.ಮರಿಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮುಖಂಡರಾದ ಎಚ್.ವಿ.ರಾಜೀವ್, ಬಿ.ಎಂ.ರಾಮು, ಸಿ.ವಿ.ಸೀತಾರಾಮ್, ಶಿವಣ್ಣ, ಭಾಸ್ಕರ್ ಎಲ್.ಗೌಡ, ಎನ್.ಆರ್.ನಾಗೇಶ್, ಸೇವಾದಳದ ಗಿರೀಶ್ ಇನ್ನಿತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts