More

    ಕೆಂಪು ಕಲ್ಲು ಗಣಿಗಾರಿಕೆ ಸಕ್ರಮಕ್ಕೆ ಅಭಿಯಾನ

    ಮಂಗಳೂರು: ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಸಕ್ರಮಗೊಳಿಸುವ ಅಭಿಯಾನ ಕೈಗೊಳ್ಳಲಾಗುವುದು. ನಿಗದಿತ ಸಮಯದೊಳಗೆ ಸಕ್ರಮಗೊಳಿಸದೆ ಗಣಿಗಾರಿಕೆ ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

    ದ.ಕ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
    ಪಟ್ಟಾ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾ ಟಾಸ್ಕ್‌ಫೋರ್ಸ್‌ಗೆ ಮಾಹಿತಿಯಿಲ್ಲದೆ ಗಣಿ ಇಲಾಖೆಯಿಂದ ನೇರವಾಗಿ ಅನುಮತಿ ನೀಡಲಾಗುತ್ತದೆ. ಇದನ್ನು ಬದಲಾಯಿಸುವಂತೆ ವಾಣಿಜ್ಯ ಇಲಾಖೆ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದರು.

    ಕೆಂಪು ಕಲ್ಲು ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ತೆಗೆಯಲಾಗುತ್ತದೆ. ಸರ್ಕಾರಿ ಭೂಮಿಯಲ್ಲಿ ಎಲ್ಲೂ ತೆಗೆಯುವ ಹಾಗಿಲ್ಲ. ಪಟ್ಟಾ ಜಾಗದಲ್ಲಿ ಅನುಮತಿ ಪಡೆದರೂ ಕೆಲವರು ಬೇರೆ ಜಾಗದಲ್ಲಿ ಹೋಗಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬಾಳೆಪುಣಿ, ಪಜೀರು ಮುಂತಾದೆಡೆಯಿಂದ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ತಾಂತ್ರಿಕ ವರದಿ ಪಡೆದಿದ್ದೇನೆ. ಈ ಬಗ್ಗೆ ಗಣಿ ಇಲಾಖೆಯ ಜಂಟಿ ನಿರ್ದೇಶಕರು ಕೂಡಾ ತನಿಖೆ ನಡೆಸುತ್ತಿದ್ದಾರೆ ಎಂದರು.

    ಅಕ್ರಮ ಮರಳುಗಾರಿಕೆ: ಜಿಲ್ಲೆಯಲ್ಲಿ ಈಗಾಗಲೇ 88 ಮಂದಿಗೆ ಸಿಆರ್‌ಜೆಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಅನುಮತಿ ನೀಡಲಾಗಿದೆ. 20 ಕಿ.ಮೀ ವ್ಯಾಪ್ತಿಯಲ್ಲಿ ಯುನಿಟ್‌ಗೆ 7 ಸಾವಿರ ರೂ. ದರವನ್ನೂ ನಿಗದಿಪಡಿಸಲಾಗಿದೆ. ಅಕ್ರಮ ಮರಳುಗಾರಿಕೆ, ಸಾಗಾಟ ತಡೆಗಟ್ಟುವುದಕ್ಕೆ ದಕ್ಕೆಯಲ್ಲಿ ಲಾಂಗ್ ರೇಂಜ್ ಇರುವ ಹೈಪವರ್ ಕ್ಯಾಮರಾ ಅಳವಡಿಸಲಾಗುವುದು. ಪೊಲೀಸ್ ಜತೆ ಜಂಟಿ ಚೆಕ್‌ಪೋಸ್ಟ್ ರಚಿಸಲಾಗುವುದು ಎಂದರು.

    ಪೊಲೀಸರು, ಗಣಿ ಇಲಾಖೆ ಮತ್ತು ಕಂದಾಯ ಇಲಾಖೆ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿ ಮುಂದಿನ ವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.
    ಮಂಗಳೂರು ಎಸಿ ಮದನ್ ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್ ಹಾಜರಿದ್ದರು.

    ಸ್ಮಾರ್ಟ್ ಸಿಟಿ ನಾಗರಿಕರ ಅಹವಾಲು: ಕೋವಿಡ್‌ನಿಂದಾಗಿ ಅನೇಕ ಕೆಲಸಗಳು ಬಾಕಿ ಉಳಿದಿದ್ದು, ಈಗ ಅವುಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಅದರಂತೆ ಹಂಪನಕಟ್ಟೆ ವೃತ್ತ, ರಸ್ತೆ ಕೆಲಸ ಶುರುವಾಗಿದೆ. ಜನರಿಗೆ ಇದರಿಂದಾಗಿ ತೊಂದರೆಯಾಗಿರುವುದು ನಿಜ, ಆದರೆ ಆದಷ್ಟೂ ಶೀಘ್ರ ಕೆಲಸ ಪೂರ್ಣ ಮಾಡಲಾಗುವುದು. ನಾಗರಿಕರಿಗೆ ಸ್ಮಾರ್ಟ್ ಸಿಟಿಯ ಅನೇಕ ಕೆಲಸಗಳ ಬಗ್ಗೆ ಆಕ್ಷೇಪ ಇದೆ. ಯಾವುದನ್ನು ನಡೆಸಬಹುದಿತ್ತು ಎಂದು ಸಲಹೆ ಇದೆ. ಅವೆಲ್ಲವನ್ನೂ ನಾನು ಸ್ಮಾರ್ಟ್ ಸಿಟಿಯ ನಿರ್ದೇಶಕರಲ್ಲಿ ಒಬ್ಬನಾಗಿ ತಿಳಿದುಕೊಂಡಿದ್ದೇನೆ. ಮುಂದಿನ ಬಾರಿ ಅವರೆಲ್ಲರ ಅಭಿಪ್ರಾಯ ಪಡೆಯುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಬೀಚ್ ಪ್ರವಾಸೋದ್ಯಮ: ಕಡಲ ಪ್ರವಾಸೋದ್ಯಮಕ್ಕೆ ಮರುಜೀವ ನೀಡಬೇಕಿದೆ. ಅದಕ್ಕಾಗಿ ತಣ್ಣೀರುಬಾವಿ, ಪಣಂಬೂರು ಸಹಿತ ಬೀಚ್‌ಗಳನ್ನು ಖಾಸಗಿ ಸಹಯೋಗದೊಂದಿಗೆ ಅಭಿವೃದ್ಧಿ ಹಾಗೂ ನಿರ್ವಹಣೆಗೊಳಪಡಿಸುವುದಕ್ಕೆ ಟೆಂಡರ್ ಮೂಲಕ ಗುತ್ತಿಗೆ ನೀಡಲಾಗುವುದು. ಪಣಂಬೂರು ಬಂದರಿಗೆ ಆಗಮಿಸುವ ವಿಲಾಸಿ ಹಡಗುಗಳ ಪ್ರಯಾಣಿಕರನ್ನು ತ್ವರಿತವಾಗಿ ವಿವಿಧ ಜಾಗಗಳಿಗೆ ಕರೆದೊಯ್ಯಲು ಹೆಲಿಟೂರಿಸಂ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಅದನ್ನು ಇನ್ನಷ್ಟು ವ್ಯವಸ್ಥಿತಗೊಳಿಸಿ, ಪೂರ್ವ ಬುಕಿಂಗ್ ಮಾಡುವಂತೆ ಸುಧಾರಣೆಪಡಿಸಲಾಗುವುದು. ಮಂಗಳೂರಿನ ಪ್ರವಾಸೋದ್ಯಮಕ್ಕೆ ಸ್ಮಾರ್ಟ್ ಸಿಟಿಯ 100 ಕೋಟಿ ರೂ.ನ ವಾಟರ್‌ಫ್ರಂಟ್ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಸದ್ಯ ಅದರ ಡ್ರೋಣ್ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts