More

    ಜನನ-ಮರಣ ನೋಂದಣಿಗೆ ಅಭಿಯಾನ  -5116 ಬಾಕಿ ಪ್ರಕರಣ ತಂತ್ರಾಂಶದಲ್ಲಿ ದಾಖಲಿಸಿ – ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಸೂಚನೆ 

    ದಾವಣಗೆರೆ: ಜಿಲ್ಲೆಯಲ್ಲಿನ ಜನನ- ಮರಣ ನೋಂದಣಿಯನ್ನು ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ದಾಖಲಿಸಬೇಕು. ಒಂದು ದಿನದ ಅಭಿಯಾನದ ಮೂಲಕ ಬಾಕಿ ಪ್ರಕರಣಗಳನ್ನು ನೋಂದಣಿ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿ ಹಾಗೂ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    2023ನೇ ಸಾಲಿನ ಜನವರಿಯಿಂದ ಅಕ್ಟೋಬರ್‌ವರೆಗೆ 12601 ಗಂಡು, 11830 ಹೆಣ್ಣು ಸೇರಿ 24998 ಮಂದಿ ಜನಿಸಿದ ಪ್ರಕರಣಗಳಿವೆ. 7951 ಗಂಡು, 5678 ಹೆಣ್ಣು ಸೇರಿ 13629 ಮಂದಿ ಮರಣ ಹೊಂದಿದ್ದಾರೆ.
    2015 ರಿಂದ 2021ರ ವರೆಗೆ 3689 ಜನನ, 1427 ಮರಣ ಸೇರಿ 5116 ನೋಂದಣಿಯಾಗದ ಪ್ರಕರಣಗಳಿದ್ದು, ಶೀಘ್ರವೇ ಅಭಿಯಾನದ ಮೂಲಕ ಇತ್ಯರ್ಥಪಡಿಸಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೂ ತೆರಳಿ ಜನನ, ಮರಣದ ಸಂಪೂರ್ಣ ಮಾಹಿತಿ ಪಡೆದು ನೋಂದಣಿ ಕಾರ್ಯದಲ್ಲಿ ನೂರರಷ್ಟು ಗುರಿ ಸಾಧಿಸಬೇಕು ಎಂದು ಸೂಚಿಸಿದರು.
    ಗ್ರಾಮೀಣ ಪ್ರದೇಶದಲ್ಲಿ ಗ್ರಾಮಲೆಕ್ಕಿಗರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ನಗರ, ಪಟ್ಟಣ ಪ್ರದೇಶದಲ್ಲಿ ಮುಖ್ಯಾಧಿಕಾರಿ, ಆಯುಕ್ತರು ಜನನ-ಮರಣ ನೋಂದಣಿ ಪ್ರಾಧಿಕಾರವಾಗಿರುತ್ತಾರೆ ಎಂದು ತಿಳಿಸಿದರು.
    ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮರಣ ಹೊಂದಿದವರ ಮರಣ ಪ್ರಮಾಣ ಪತ್ರ ಪಡೆಯಲು 4 ಮತ್ತು 4 ಎ ಅರ್ಜಿ ಭರ್ತಿ ಮಾಡಿ, ವೈದ್ಯಕೀಯ ಪ್ರಮಾಣ ಪತ್ರ ಪಡೆದು ಇ-ಜನ್ಮ ತಂತ್ರಾಂಶದಲ್ಲಿ ನೋಂದಾಯಿಸಬೇಕು ಎಂದು ಹೇಳಿದರು.
    ಜಿಲ್ಲೆಯಲ್ಲಿ 2022 ರಲ್ಲಿ ಜನನ ದರ (ಸಾವಿರ ಜನರಿಗೆ) ಗ್ರಾಮಾಂತರ ಪ್ರದೇಶದಲ್ಲಿ 11.61, ನಗರ ಪ್ರದೇಶದಲ್ಲಿ 22.52 ಸೇರಿ 15.30ರಷ್ಟಿದೆ. ಮರಣ ದರವು ಗ್ರಾಮೀಣದಲ್ಲಿ 7.71, ನಗರ ಪ್ರದೇಶದಲ್ಲಿ 7.55 ಸೇರಿ ಒಟ್ಟು 7.66 ರಷ್ಟಿದೆ. ಗ್ರಾಮೀಣ ಭಾಗದಲ್ಲಿ ಮರಣ ಪ್ರಮಾಣ ಹೆಚ್ಚಿದ್ದು ಆರೋಗ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
    ಗ್ರಾಮೀಣ ಪ್ರದೇಶದಲ್ಲಿ 916, ನಗರ ಪ್ರದೇಶದಲ್ಲಿ 20 ಸೇರಿ ಒಟ್ಟು 936 ನೋಂದಣಿ ಘಟಕಗಳಿವೆ. ನೋಂದಣಿ ಕುರಿತಂತೆ ಜನರಲ್ಲಿ ಅರಿವು ಮೂಡಿಸಿ ಕೂಲಂಕಶ ಪರಿಶೀಲನೆ ನಡೆಸಿ, ಜನನ-ಮರಣ ಪ್ರಮಾಣ ಪತ್ರಗಳು ಸುಲಭವಾಗಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
    ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ವಿಮಾ ಕಂಪನಿಗಳು ರೈತರಿಗೆ ಗೊಂದಲಕ್ಕೆ ಎಡೆಮಾಡದೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಸಿ ರೈತರ ಬಳಿ ಮೂಲ ದಾಖಲೆಗಳನ್ನು ಪಡೆದು ಪರಿಶೀಲಿಸಬೇಕು ಎಂದೂ ಡಿಸಿ ಸೂಚಿಸಿದರು.
    ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಸ್. ನೀಲಾ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ. ಮಂಜುನಾಥ್ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts