More

    ವಾಣಿಜ್ಯನಗರಿಗೆ ಕ್ಯಾಮರಾ ಕಣ್ಗಾವಲು!

    ರಾಣೆಬೆನ್ನೂರ: ಭದ್ರತೆ ದೃಷ್ಟಿಯಿಂದ ನಗರದೆಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಇನ್ಮುಂದೆ ವಾಣಿಜ್ಯ ನಗರಿ ಹದ್ದಿನ ಕಣ್ಗಾವಲಿನಲ್ಲಿರಲಿದೆ.

    ನಗರಸಭೆ ವತಿಯಿಂದ 30 ಲಕ್ಷ ರೂ. ವೆಚ್ಚದಲ್ಲಿ ಫೋರ್ ಮೆಗಾಫಿಕ್ಸ್​ಲ್ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಕಿಯೋನಿಕ್ಸ್ ಕಂಪನಿಗೆ ಕ್ಯಾಮರಾ ಅಳವಡಿಕೆ ಹಾಗೂ ನಿರ್ವಹಣೆಗಾಗಿ ಗುತ್ತಿಗೆ ನೀಡಲಾಗಿದೆ.

    ಎಲ್ಲೆಲ್ಲಿ ಸಿಸಿ ಕ್ಯಾಮರಾ…?: ನಗರಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಾದ ಹಲಗೇರಿ ರಸ್ತೆ, ಗಂಗಾಪುರ ರಸ್ತೆ, ದೇವರುಗಡ್ಡ ರಸ್ತೆ, ಹಾವೇರಿ ರಸ್ತೆ, ಹರಿಹರ ರಸ್ತೆ, ಮಾಗೋಡ ರಸ್ತೆಗಳಲ್ಲಿ ಹಾಗೂ ನಗರದ ಪ್ರಮುಖ ವೃತ್ತಗಳಾದ ಪೋಸ್ಟ್ ವೃತ್ತ, ಕುರುಬಗೇರಿ ಕ್ರಾಸ್, ಸಂಗಮ್ ಸರ್ಕಲ್ ಸೇರಿ 14 ಕಡೆಗಳಲ್ಲಿ ಸ್ಟಿಲ್ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಾದ ದುರ್ಗಾ ಸರ್ಕಲ್, ಹಲಗೇರಿ ವೃತ್ತ, ಬಸ್ ನಿಲ್ದಾಣ ವೃತ್ತ ಸೇರಿ ಮೂರು ಕಡೆ ಮೂವೆಬಲ್ ಕ್ಯಾಮರಾ ಅಳವಡಿಸಲಾಗುತ್ತಿದೆ.

    ಶಹರ ಪೊಲೀಸ್ ಠಾಣೆಯಲ್ಲಿ ಕ್ಯಾಮರಾಗಳ ಕಂಟ್ರೋಲ್ ರೂಮ್ ಮಾಡಲಾಗುತ್ತಿದೆ. ಎಲ್ಲ ಕ್ಯಾಮರಾಗಳಿಗೆ ವೈಫೈ ಸಂಪರ್ಕವಿದ್ದು, ಲೈವ್ ದೃಶ್ಯವನ್ನು ಕಂಟ್ರೋಲ್ ರೂಮ್ಲ್ಲೇ ಕುಳಿತು ವೀಕ್ಷಿಸಬಹುದಾಗಿದೆ. ಜತೆಗೆ ಸಿಸಿ ಟಿವಿ ಒಂದು ತಿಂಗಳ ದೃಶ್ಯವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

    ಭದ್ರತೆಗೆ ಅನುಕೂಲ: ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಆದ್ದರಿಂದ ಇಂಥವುಗಳಿಗೆ ಕಡಿವಾಣ ಹಾಕುವ ಹಾಗೂ ಆರೋಪಿಗಳ ಗುರುತಿಗೆ ಅನುಕೂಲವಾಗುವ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಕೆಯ ಮುಖ್ಯ ಉದ್ದೇಶವಾಗಿದೆ.

    ನೋ-ರ್ಪಾಂಗ್​ನಲ್ಲಿ ವಾಹನ ನಿಲ್ಲಿಸುವವರು, ಸಾರ್ವಜನಿಕರೊಂದಿಗೆ ಅವಾಚ್ಯವಾಗಿ ನಡೆದುಕೊಳ್ಳುವವರು, ಚಿಕ್ಕಪುಟ್ಟ ಗಲಾಟೆಗಳು ನಡೆದಾಗ ಪೊಲೀಸರಿಗೆ ಈ ಸಿಸಿ ಕ್ಯಾಮರಾಗಳು ಅನುಕೂಲಕ್ಕೆ ಬರಲಿವೆ. ಇನ್ನೊಂದು ವಾರದಲ್ಲಿ ಕ್ಯಾಮರಾ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರದಲ್ಲಿ ಕಾರ್ಯಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಗರದಲ್ಲಿ ಭದ್ರತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುವ ಸಮಸ್ಯೆಗಳ ಬಗ್ಗೆ ನಿಗಾವಹಿಸಲು 17 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರ ನಿರ್ವಹಣೆಯನ್ನು ಕಿಯೋನೆಕ್ಸ್ ಸಂಸ್ಥೆ ಮಾಡಲಿದೆ. ಇದರಿಂದ ಪೊಲೀಸರಿಗೆ ತುಂಬ ಅನುಕೂಲವಾಗಲಿದೆ.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಭದ್ರತೆ ದೃಷ್ಟಿಯಿಂದ ನಗರದೆಲ್ಲೆಡೆ ಸಿಸಿ ಕ್ಯಾಮರಾ ಅಳವಡಿಸುವಂತೆ ನಗರಸಭೆ ಆಯುಕ್ತರಿಗೆ ಒತ್ತಾಯಿಸಿದ್ದೆವು. ಅದರಂತೆ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನದಲ್ಲಿ ಅವುಗಳ ನಿರ್ವಹಣೆಯನ್ನೂ ಸೂಕ್ತ ರೀತಿಯಲ್ಲಿ ಮಾಡಬೇಕು.

    | ಮಲ್ಲಣ್ಣ ಅಂಗಡಿ, ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts