More

    ನ್ಯೂಯಾರ್ಕ್‌ನಿಂದ ಬಂದು ಕನ್ನಡ ಕಲಿತರು; ನಾಡು-ನುಡಿ ಬಗ್ಗೆ ಮನಬಿಚ್ಚಿ ಕೊಂಡಾಡಿದರು!

    ವಿಜಯಪುರ: ‘ಹೆಲೋ ಸರ್….ಹೇಗಿದ್ದೀರಾ? ನಾನು ರಿಚರ್ಡ್ ವೈನ್ಸ್ ಮತ್ತೆ ಈಕೆ ನನ್ನ ಪತ್ನಿ ನ್ಯಾನ್ಸಿ. ನಾವಿಬ್ಬರೂ ಅಮೆರಿಕದ ನ್ಯೂಯಾರ್ಕ್‌ನಿಂದ ಬಂದಿದ್ದೇವೆ. ಇಲ್ಲಿನ ನೆಲ, ಜಲ, ಭಾಷೆ ತುಂಬ ಸುಂದರ, ಗೋಳಗುಮ್ಮಟ, ಇಬ್ರಾಹಿಂ ರೋಜಾ, ಜಾಮೀಯಾ ಮಸೀದಿ ಹೀಗೆ ಸುತ್ತಾಡಿ ಬಂದಿದ್ದೇವೆ. ಬಹಳ ಖುಷಿಯಾಯಿತು. ನಿಮ್ಮ ನಾಡು ಬಹಳ ಸುಂದರ’

    – ಹೀಗೆ ಇಂಗ್ಲಿಷ್ ಶೈಲಿಯ ಹಾವ-ಭಾವದಲ್ಲಿಯೇ ಅಚ್ಚ ಕನ್ನಡದಲ್ಲಿ ಕರ್ನಾಟಕದ ಪ್ರವಾಸಿ ಸ್ಥಳಗಳು, ಸಂಸ್ಕೃತಿ, ಸಂಪ್ರದಾಯ, ಭಾಷೆ ಸೊಗಡು, ವೈವಿಧ್ಯತೆ ಬಗ್ಗೆ ಮಾತನಾಡುವ ಮೂಲಕ ನ್ಯೂಯಾರ್ಕ್ ದಂಪತಿ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರ ಗಮನ ಸೆಳೆದರು.

    ಆದಿಲ್‌ಶಾಹಿ ಸುಲ್ತಾನರ ಕಾಲದ ಅರೆಕಿಲ್ಲಾದ ಒಳಗಡೆ ಇರುವ ಐತಿಹಾಸಿಕ ಸಂಗೀತ ಮಹಲ್, ಗಗನ ಮಹಲ್, ಜಲಹ ಮಂಜಿಲ್, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸ್ಮಾರಕಗಳ ವೀಕ್ಷಣೆ ಸಂದರ್ಭ ಸಚಿವರನ್ನು ಮುಖಾಮುಖಿಯಾದ ಪ್ರವಾಸಿಗರಾದ ರಿಚರ್ಡ್ ವೈನ್ಸ್ ಹಾಗೂ ನ್ಯಾನ್ಸಿ ಕನ್ನಡದಲ್ಲಿ ಪರಿಚಯಿಸಿಕೊಂಡು ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಅಂದಾಜು 76-77ರ ವಯೋಮಾನದ ಹದಿಹರೆಯದಂತೆ ಆಳೆತ್ತರವಾಗಿ ಕಾಣುವ ಕೆಂಪು ಬಣ್ಣದ ಈ ದಂಪತಿಯ ಉತ್ಸಾಹ, ಲವಲವಿಕೆ ನೆರೆದವರನ್ನು ನಾಚಿಸುವಂತಿತ್ತು.

    ‘ಕಳೆದ 25 ವರ್ಷಗಳಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದೇವೆ. 1987ರಲ್ಲಿ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿದ್ದೆ. ಒಟ್ಟು ಎಂಟು ಬಾರಿ ಭಾರತ ಪ್ರವಾಸ ಕೈಗೊಂಡಿದ್ದು, ಎರಡು ವರ್ಷ ರಾಯಚೂರಿನಲ್ಲಿ ಕೃಷಿ ತಜ್ಞನಾಗಿ ಕೆಲಸ ಮಾಡಿದ್ದಾಗಿಯೂ, ಅಲ್ಲಿ ಸ್ಥಳೀಯರೊಂದಿಗೆ ಕನ್ನಡ ಕಲಿಯಬೇಕಾದ ಅನಿವಾರ್ಯತೆ ಬಂದಿದ್ದಾಗಿಯೂ ಮತ್ತೂ ಕನ್ನಡ ಭಾಷೆ ಮಾತನಾಡುವುದು ಖುಷಿ ತಂದಿದ್ದಾಗಿಯೂ ಹೆಮ್ಮೆಯಿಂದ ಹೇಳಿಕೊಂಡರು.

    ರಿಚರ್ಡ್ ತೋಳು ಬಳಸಿ ನಿಂತಿದ್ದ ನ್ಯಾನ್ಸಿ ಕೂಡ ‘ನನಗೂ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ’ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಂತೆ ಸುತ್ತಲಿನ ಜನ ಮೆಚ್ಚುಗೆ ವ್ಯಕ್ತಪಡಿಸಿ ಸಂಭಾಷಣೆಗೆ ಮುಗಿಬಿದ್ದರು. ಕೆಲವರು ಫೋಟೊ ಕ್ಲಿಕ್ಕಿಸಿಕೊಂಡರೆ ಇನ್ನೂ ಕೆಲವರು ಅಮೆರಿಕ ಮತ್ತು ಭಾರತ ಅದರಲ್ಲೂ ಕರ್ನಾಟಕ ಹಾಗೂ ವಿಜಯಪುರ ಪ್ರವಾಸಿ ಸ್ಥಳಗಳ ಬಗ್ಗೆ, ಜನ-ಜೀವನದ ಬಗ್ಗೆ ತುಲನಾತ್ಮಕವಾಗಿ ಅರಿತುಕೊಳ್ಳುವ ಇಂಗಿತ ವ್ಯಕ್ತಪಡಿಸಿ ಮಾತುಕತೆಗಿಳಿದರು.

    ರಿಚರ್ಡ್ ದಂಪತಿಯ ಕನ್ನಡ ಪ್ರೇಮ ಮೆಚ್ಚಿದ ಸಚಿವ ಎಚ್.ಕೆ. ಪಾಟೀಲ ತಮ್ಮೊಂದಿಗೆ ಬೆಳಗ್ಗೆ ಉಪಹಾರಕ್ಕೆ ಆಗಮಿಸುವಂತೆ ಪ್ರವಾಸಿ ಮಂದಿರಕ್ಕೆ ಆಹ್ವಾನ ನೀಡಿದರು. ಸಚಿವರ ಆಹ್ವಾನಕ್ಕೆ ಕನ್ನಡದಲ್ಲಿಯೇ ಕೃತಜ್ಞತೆ ಸಲ್ಲಿಸುತ್ತಾ ರಿಚರ್ಡ್ ದಂಪತಿ ದಕ್ಷಿಣದ ಕಪ್ಪು ತಾಜ್ ಖ್ಯಾತಿಯ ಇಬ್ರಾಹಿಂ ರೋಜಾ ವೀಕ್ಷಣೆಗೆ ಪ್ರಯಾಣ ಬೆಳೆಸಿದರು.

    ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

    ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts