More

    ಪಾಕಿಸ್ತಾನ ಗಡಿ ಸಮೀಪ ಸೇನೆಯಿಂದ ಕೆಫೆ ಫ್ರೀಡಂ ಆರಂಭ

    – ಜಮ್ಮು- ಕಾಶ್ಮೀರದ ಉರಿ ಕಮಾನ್ ಪೋಸ್ಟ್​ನಲ್ಲಿ ತಿರಂಗಾ ಹಾರಾಟ
    – ಜನರಲ್ಲಿ ವಿಶ್ವಾಸ ವೃದ್ಧಿಸಲು ಭಾರತೀಯ ಸೇನೆ ಪ್ರಯತ್ನ

    ಶ್ರೀನಗರ: ಸದಾ ಮದ್ದುಗುಂಡುಗಳ ಸದ್ದು ಕೇಳಿಸುತ್ತಿದ್ದ ಉತ್ತರ ಕಾಶ್ಮೀರದ ಉರಿ ಸೆಕ್ಟರ್​ನ ಗಡಿನಿಯಂತ್ರಣ ರೇಖೆಯಲ್ಲಿ ಈಗ ನೆಮ್ಮದಿಯಿಂದ ಕಾಫಿ ಕುಡಿಯಲು ಅಡ್ಡಿ ಇಲ್ಲ. ಭಾರತೀಯ ಸೇನೆ ಉರಿ ಎಲ್​ಒಸಿಯ ‘ಕಮಾನ್ ಪೋಸ್ಟ್’ ಸಮೀಪ ‘ಕೆಫೆ ಫ್ರೀಡಂ’ ಎಂಬ ರೆಸ್ಟೋರೆಂಟ್​ಗೆ ಚಾಲನೆ ನೀಡಿದೆ. ಕಮಾನ್ ಪೋಸ್ಟ್​ಗೆ ಭೇಟಿ ನೀಡುವ ಜನರಲ್ಲಿ ವಿಶ್ವಾಸ ವೃದ್ಧಿಸುವ ಸಲುವಾಗಿ ಭಾರತೀಯ ಸೇನೆ ಈ ಕ್ರಮ ತೆಗೆದುಕೊಂಡಿದೆ. ಅಷ್ಟೇ ಅಲ್ಲ, ಕಮಾನ್ ಅಮಾನ್ ಸೇತು ಪೋಸ್ಟ್ ಸಮೀಪ ತಿರಂಗಾವನ್ನೂ ಹಾರಿಸಿದೆ. ಈ ಹೊಸ ಬೆಳವಣಿಗೆ ಉತ್ತರ ಕಾಶ್ಮೀರದ ಜನರಲ್ಲಿ ವಿಶ್ವಾಸ ಹೆಚ್ಚುವಂತೆ ಮಾಡಿದೆ.

    – ಅಕ್ರಮ ದಂಧೆಗೆ ಬಳಕೆ ಕಾರಣ ಬಂದ್

    ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಕಾರಣವಾಗಬೇಕಾಗಿದ್ದ ಈ ಸೇತುವೆಯನ್ನು ಪಾಕಿಸ್ತಾನಿಗಳು ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಮಾದಕ ದ್ರವ್ಯ ಕಳ್ಳಸಾಗಣೆ, ಕಳ್ಳನೋಟು ದಂಧೆಗೆ ಬಳಸತೊಡಗಿದ್ದರು. ಈ ನಡುವೆ, ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹಳಸಿದ ಕಾರಣ 2019ರಲ್ಲಿ ಈ ಸೇತುವೆ ಬಂದ್ ಮಾಡಲಾಗಿತ್ತು.

    – ಕಮಾನ್ ಅಮಾನ್ ಸೇತು ಎಂದರೆ?

    ಜಮ್ಮು – ಕಾಶ್ಮೀರ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಡುವೆ ಸಂಪರ್ಕ ಸೇತುವೆ ಈ ‘ಕಮಾನ್ ಅಮಾನ್ ಸೇತು’. 2019ರಿಂದ ಇಲ್ಲಿ ಸಂಚಾರ ಬಂದ್ ಆಗಿತ್ತು. ಪರಸ್ಪರ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. 2,500ಕ್ಕೂ ಹೆಚ್ಚು ವ್ಯಾಪಾರಸ್ಥರು ಎರಡೂ ಕಡೆ ವ್ಯಾಪಾರ ವಹಿವಾಟು ಮಾಡುತ್ತಾರೆ. ಉರಿ-ಮುಜಾಫರಾಬಾದ್ ಮತ್ತು ಪೂಂಛ್ -ರಾವಲ್​ಕೋಟ್ ನಡುವೆ ಸಂಪರ್ಕ ರಸ್ತೆಗಳನ್ನು ಈ ಸೇತುವೆ ಜೋಡಿಸುತ್ತದೆ. ಭಾರತ ಮತ್ತು ಪಾಕಿಸ್ತಾನಗಳ ನಡು ವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಇದು ನೆರವಾಗುತ್ತಿದೆ.

    – ಕದನ ವಿರಾಮದ ನೆರವು

    ಕಳೆದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಗಳ ನಡುವೆ ಕದನ ವಿರಾಮ ಒಪ್ಪಂದ ಜಾರಿಯಾಗಿದೆ. ಇದೇ ಕಾರಣಕ್ಕೆ ಉರಿ ಸೆಕ್ಟರ್​ನ ಕಮಾನ್ ಅಮಾನ್ ಸೇತುವೆ ಬಳಿ ಬರುವ ಜನರಲ್ಲಿ ವಿಶ್ವಾಸ ವೃದ್ಧಿಸುವ ಕೆಲಸಕ್ಕೆ ಭಾರತೀಯ ಸೇನೆ ಮುಂದಾಯಿತು. ಹಾನಿಗೀಡಾಗಿದ್ದ ಸೇತುವೆಯನ್ನು ಮಾರ್ಚ್ ತಿಂಗಳಲ್ಲಿ ದುರಸ್ತಿ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜತೆಗೆ ಪ್ರವಾಸಿಗರಿಗಾಗಿ ಸೇನೆಯೇ ಕೆಫೆ ಫ್ರೀಡಂ ಪ್ರಾರಂಭಿಸಿದೆ.

    ಕಮಾನ್ ಪೋಸ್ಟ್ ಗೆ ಭೇಟಿ ನೀಡುವ ಪ್ರತಿಯೊಬ್ಬರೂ ಕೆಫೆ ಫ್ರೀಡಂಗೆ ಭೇಟಿ ನೀಡಿ ಎಲ್​ಒಸಿ ನೋಡುತ್ತ ಕಪ್ ಕಾಫಿ ಹೀರುವಷ್ಟು ಇಲ್ಲಿನ ಪರಿಸ್ಥಿತಿ ತಿಳಿಯಾಗಿದೆ. ಬಳಿಕ ಸೇತುವೆ ಬಳಿ ಹೋಗಿ ಸೆಲ್ಪಿ ಕೂಡ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ.

    | ಮೇಜರ್ ವಿಶಾಲ್ ದೇವ್ ಕೆಫೆ ಫ್ರೀಡಂ ಉಸ್ತುವಾರಿ

    ((ಫೋಟೋ ಕ್ಯಾಪ್ಷನ್​))
    ಉರಿ ಸೆಕ್ಟರ್​ನ ಗಡಿನಿಯಂತ್ರಣ ರೇಖೆಯಲ್ಲಿ ಆರಂಭವಾಗಿರುವ ಕೆಫೆ ಫ್ರೀಡಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts