More

    ಕೇಬಲ್ ಜಾಲ ಜನರಿಗೆ ಮಾರಕ

    ಹರೀಶ್ ಮೋಟುಕಾನ ಮಂಗಳೂರು
    ನಗರದ ಫುಟ್‌ಪಾತ್, ವಿದ್ಯುತ್ ಕಂಬ, ರಸ್ತೆ ಬದಿ, ಕಟ್ಟಡದಿಂದ ಕಟ್ಟಡಕ್ಕೆ, ಮರಗಳಲ್ಲಿ ಎಲ್ಲಿ ನೋಡಿದರೂ ಕೇಬಲ್ ಜಾಲ ಕಾಣಿಸುತ್ತಿದೆ. ಕೇಬಲ್ ಎಳೆದು ಹೆಚ್ಚಾದುದನ್ನು ಸುತ್ತಿ ಕಂಬ, ಮರಕ್ಕೆ ಸಿಕ್ಕಿಸಿರುವುದು ನೇತಾಡುತ್ತಿವೆ. ಕೆಲವೊಮ್ಮೆ ನೆಲಕ್ಕೆ ಬಿದ್ದು, ಕಾಲುಗಳಿಗೆ ಸಿಲುಕಿ ಪಾದಚಾರಿಗಳು ರಸ್ತೆಗೆ ಬೀಳುವ ಸ್ಥಿತಿ ಇದೆ. ದ್ವಿಚಕ್ರದಲ್ಲಿ ಸಂಚರಿಸುವಾಗ ಕುತ್ತಿಗೆಗೆ ಸಿಲುಕಿಕೊಂಡರೆ ಪ್ರಾಣಾಪಾಯವಾಗುವ ಸಾಧ್ಯತೆಯೂ ಇದೆ.

    ಇದರಲ್ಲಿ ಟಿವಿ, ಮೊಬೈಲ್, ವಿವಿಧ ಕಂಪನಿಗಳ ಅಂತರ್ಜಾಲ ಕೇಬಲ್‌ಗಳಿವೆ. ಪೊಲೀಸ್ ಇಲಾಖೆಯ ಸಿಸಿಟಿವಿ ಸಂಪರ್ಕಗಳು, ಫೋನ್ ಸಂಪರ್ಕ ತಂತಿಗಳು ಸೇರಿವೆ. ಕಂಬಗಳಲ್ಲಿ ಮಾತ್ರವಲ್ಲ ರಸ್ತೆ, ಫುಟ್‌ಪಾತ್‌ಗಳಲ್ಲೂ ಕೇಬಲ್ ಜಾಲ ಹರಡಿಕೊಂಡಿವೆ. ಅವ್ಯವಸ್ಥಿತ ಕೇಬಲ್ ಜಾಲ ನಗರದ ಸೌಂದರ್ಯಕ್ಕೂ ಧಕ್ಕೆಯಾಗಿವೆ.

    ವಿದ್ಯುತ್ ಕಂಬಗಳಲ್ಲಿ ಅಪಾಯ: ಕಾರ್‌ಸ್ಟ್ರೀಟ್, ಬಂದರು, ಮಣ್ಣಗುಡ್ಡೆ ಮತ್ತು ಕದ್ರಿ ಪ್ರದೇಶದ ವಿದ್ಯುತ್ ಕಂಬಗಳಲ್ಲಿ ಮಾಮೂಲಿ ವಿದ್ಯುತ್ ತಂತಿಗಳಲ್ಲದೆ, ಪ್ರತ್ಯೇಕ ಹೈಟೆನ್ಷನ್ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಎಲ್ಲ ಕಂಬಗಳ ಮೇಲೆ ಸುರುಳಿ ಸುತ್ತಿದ ಕೇಬಲ್ ಬಂಡಲ್‌ಗಳನ್ನು ಅನಗತ್ಯವಾಗಿ ನೇತು ಹಾಕಲಾಗಿದೆ. ಈ ಕಂಬಗಳಲ್ಲಿ ರಿಪೇರಿ ಬಂದರೆ ಲೈನ್‌ಮನ್‌ಗೆ ಕಂಬವೇರುವುದು ತ್ರಾಸದಾಯಕ ಕೆಲಸ. ಅವಘಡ ಸಾಧ್ಯತೆಯೂ ಹೆಚ್ಚು. ತುರ್ತು ಸಂದರ್ಭಗಳಲ್ಲಿ ಕಂಬ ಮೇಲೇರುವಂತೆಯೂ ಇಲ್ಲ, ತಕ್ಷಣ ಕೆಳಗೆ ಬರಲೂ ಸಾಧ್ಯವಿಲ್ಲ. ಮಳೆಗಾಲದಲ್ಲಿ ಕಂಬಗಳಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ಈ ಸಂದರ್ಭ ಲೈನ್‌ಮನ್‌ಗಳು ಕಂಬ ಏರಿ ಇಳಿಯಲು ಹರಸಾಹಸ ಪಡುವಂತಾಗಿದೆ.

    ಅವೈಜ್ಞಾನಿಕ ಕೇಬಲ್ ನಿರ್ವಹಣೆ: ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಟಿ.ವಿ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ. ಈ ತಂತಿಗಳು ಕೆಲವೊಮ್ಮೆ ಕಂಬದಿಂದ ಜಾರಿ ಚೆಲ್ಲಾಪಿಲ್ಲಿಯಾಗಿರುತ್ತವೆ. ಪಾದಚಾರಿ ರಸ್ತೆಗಳ ಮೇಲೆ, ಮರಗಳ ಬುಡದಲ್ಲಿ ಬಾಕ್ಸ್ ಸಮೇತ ರಾಶಿರಾಶಿ ತಂತಿಗಳು ಬಿದ್ದುಕೊಂಡಿವೆ. ಕಂಬಕ್ಕೆ ಸುತ್ತಿ ಇಟ್ಟ ಕೇಬಲ್‌ಗಳು ರಸ್ತೆಯಲ್ಲಿ ಹೋಗುವವರಿಗೆ ತಾಗುತ್ತದೆ. ಇದು ದ್ವಿಚಕ್ರ ವಾಹನಗಳಲ್ಲಿ ಹೋಗುವವರ ಪ್ರಾಣವನ್ನೇ ಕಸಿಯಬಹುದು. ದಾರಿಯಲ್ಲಿ ಇರುವ ವೈರ್‌ಗಳು ರಾತ್ರಿ ವೇಳೆ ತಕ್ಷಣ ಗಮನಕ್ಕೂ ಬರುವುದಿಲ್ಲ. ಬೈಕ್ ಸವಾರರ ಚಕ್ರಕ್ಕೆ ಸಿಲುಕಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚು. ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ಜಾಲ ಅವೈಜ್ಞಾನಿಕವಾಗಿವೆ. ಸ್ಟೇಟ್‌ಬ್ಯಾಂಕ್‌ನಿಂದ ಅಂಬೇಡ್ಕರ್ ಸರ್ಕಲ್‌ವರೆಗೆ, ಪಿವಿಎಸ್ ವೃತ್ತದಲ್ಲಿ ತಂತಿಗಳನ್ನು ಬೀದಿದೀಪ ಕಂಬಗಳಿಗೆ ಕಟ್ಟಲಾಗಿದೆ. ಕೈಗೆಟಕುವಂತಿರುವ ತಂತಿಗಳನ್ನು ದುಷ್ಕರ್ಮಿಗಳು ತುಂಡರಿಸಿದರೆ ಸಾಕ್ಷೃವೂ ಸಿಗದಂತಾಗಬಹುದು. ಕೇಬಲ್‌ಗಳನ್ನು ಅವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗಿದೆ. ಕಂಬಗಳಲ್ಲಿ ಈ ಕೇಬಲ್ ಅಳವಡಿಸುವ ಬದಲು ಡಿವೈಡರ್ ಮಧ್ಯೆ ಭೂಗತವಾಗಿ ಅಳವಡಿಸಿದರೆ ನಗರದ ಸೌಂದರ್ಯಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

    ನಿಯಮ ಕಟ್ಟುನಿಟ್ಟಾಗಲಿ: ಸಾರ್ವಜನಿಕರಿಗೆ ಅಪಾಯವಾಗುವಂತೆ ಎಲ್ಲೆಂದರಲ್ಲಿ ಕೇಬಲ್ ಅಳವಡಿಸಲು ಅವಕಾಶಗಳಿಲ್ಲ. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ನಿಯಮ ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಬೇಕಾಬಿಟ್ಟಿಯಾಗಿ ತಂತಿಗಳನ್ನು ಅಳವಡಿಸಲಾಗುತ್ತಿದೆ. ಪೊಲೀಸ್ ಇಲಾಖೆಯೂ ತಮ್ಮ ಸಿಸಿ ಕ್ಯಾಮರಾ ವೈರ್‌ಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಳವಡಿಸುವ ಬಗ್ಗೆ ಚಿಂತಿಸಬೇಕಿದೆ.

    ನಗರದ ಹಲವೆಡೆ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ವಿದ್ಯುತ್, ದೂರವಾಣಿ, ಟಿವಿ ಕೇಬಲ್‌ಗಳು ಬಿದ್ದುಕೊಂಡಿವೆ. ಪಾದಚಾರಿಗಳ ಕಾಲಿಗೆ ಸಿಲುಕಿಕೊಂಡು ತೊಂದರೆಯಾಗುತ್ತಿದೆ. ಕೇಬಲ್‌ನಲ್ಲಿ ವಿದ್ಯುತ್ ಪ್ರವಹಿಸಿದರೆ ಅಪಾಯ ಸಾಧ್ಯತೆ ಹೆಚ್ಚು.
    ಹರಿಪ್ರಸಾದ್, ಖಾಸಗಿ ಉದ್ಯೋಗಿ

    ವಿದ್ಯುತ್ ಕಂಬಗಳಲ್ಲಿ ಕೇಬಲ್ ಅಳವಡಿಸಲು ಮೆಸ್ಕಾಂನವರು ಅವಕಾಶ ನೀಡಿರುವುದರಿಂದ ಸಮಸ್ಯೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದನ್ನು ಗಮನಕ್ಕೆ ತಂದಿದ್ದೇವೆ. ಕೇಬಲ್‌ಗಳಿಂದ ಸಾರ್ವಜನಿಕರಿಗೆ ತೀವ್ರ ರೀತಿಯಲ್ಲಿ ತೊಂದರೆಯಾಗುತ್ತಿದ್ದರೆ ತಕ್ಷಣ ಪಾಲಿಕೆ ವತಿಯಿಂದ ತುಂಡರಿಸಲಾಗುವುದು.
    ಅಕ್ಷಿ ಶ್ರೀಧರ್, ಮನಪಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts