More

    ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಣೆ ಸಾಧ್ಯತೆ: ಸಿಎಂ ದೆಹಲಿ ಪ್ರವಾಸ ಪಕ್ಕಾ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದೀರ್ಘ ಅವಧಿ ಬಳಿಕ ದೆಹಲಿ ಪ್ರವಾಸ ಕೈಗೊಳ್ಳುವುದು ಪಕ್ಕಾ ಆಗಿದೆ. ನೆರೆ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದು ಮೇಲ್ನೋಟದ ಅಜೆಂಡಾ. ಆದರೆ, ಅವರ ದೆಹಲಿ ಭೇಟಿ ಸುದ್ದಿಯೇ ಬಿಜೆಪಿ ಸಚಿವಾಕಾಂಕ್ಷಿಗಳ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

    ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ದೆಹಲಿಗೆ ಮರಳಿದ ಮರು ದಿನವೇ ಸಿಎಂ ಕೂಡ ದೆಹಲಿಗೆ ಹೋಗಲಿದ್ದೇನೆ ಎಂದಿರುವುದು ಗಮನಾರ್ಹ. ಅಲ್ಲದೆ, ಈ ಬಾರಿಯ ಬಿಎಸ್​ವೈ ದೆಹಲಿ ಭೇಟಿ ವಿವಿಧ ಕಾರಣಗಳಿಗೆ ಪ್ರಾಮುಖ್ಯತೆ ಪಡೆಯಲಿದೆ.

    ಮುಂದಕ್ಕೆ ಹೋಗುವ ಸಾಧ್ಯತೆ

    ಬಿಜೆಪಿಯ ಇನ್ನೊಂದು ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ. ಏಕೆಂದರೆ ಸೆಪ್ಟೆಂಬರ್​ನಲ್ಲಿ ಅಧಿವೇಶನ ಇರುವುದರಿಂದ ಅದು ಮುಗಿದ ನಂತರವಷ್ಟೇ ವಿಸ್ತರಣೆ ಮಾಡಬಹುದೆಂದು ಕೆಲವರು ವಾದಿಸುತ್ತಿದ್ದಾರೆ. ಆದರೆ, ಸಿಎಂ ಯಡಿಯೂರಪ್ಪ ದೆಹಲಿ ಭೇಟಿ ನಂತರವಷ್ಟೇ ಎಲ್ಲವೂ ಅಂತಿಮವಾಗಲಿದೆ.

    ಕೇಂದ್ರ ಗೃಹ ಸಚಿವ ಅಮಿಶ್ ಷಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆಗೆ ನೇರ ಮಾತುಕತೆ ನಡೆಸಬೇಕು ಎನ್ನುವುದು ಬಿಎಸ್​ವೈ ಇಚ್ಛೆಯಾಗಿದೆ. ಈ ಭೇಟಿ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕುರಿತು ಮುಂದಿನ ಹೆಜ್ಜೆಯಿಡುವ ಸಿಎಂ ಒಲವಿಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡಬಹುದೇ ಎಂಬ ಚರ್ಚೆ ಹುಟ್ಟು ಹಾಕಿದೆ.

    ಹಾಗೆಯೇ, ಕರೊನಾ ನಿಯಂತ್ರಣ ಹಾಗೂ ನಿರ್ವಹಣಾ ಕ್ರಮಗಳು, ಬೆಂಗಳೂರಿನ ಗಲಭೆ ತತ್ಸಂಬಂಧಿತ ಬೆಳವಣಿಗೆಗಳು, ಎಸ್​ಡಿಪಿಐ ಮತ್ತು ಪಿಎಫ್​ಐ ಪಾತ್ರ ಇನ್ನಿತರ ಪ್ರಮುಖ ವಿದ್ಯಮಾನಗಳ ಕುರಿತು ಸಿದ್ಧತೆಗಳೊಂದಿಗೆ ಸಿಎಂ ತೆರಳಿ, ಹೈಕಮಾಂಡ್​ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ; ಹಿರಿಯರು ಅಲ್ಲ, ಕಿರಿಯರೂ ಅಲ್ಲ; ಕೋವಿಡ್​ ಹರಡಲು ಇವರೇ ಕಾರಣ….! 

    ಗರಿಗೆದರಿದ ಸಚಿವಾಕಾಂಕ್ಷಿಗಳ ನಿರೀಕ್ಷೆ: ದೆಹಲಿ ಪ್ರವಾಸವನ್ನು ಬಿಎಸ್​ವೈ ಖಚಿತಪಡಿಸುತ್ತಿದ್ದಂತೆಯೇ ಪಕ್ಷ ಮೂಲ ಹಾಗೂ ವಲಸಿಗರಲ್ಲಿ ಸಚಿವಾಕಾಂಕ್ಷಿಗಳ ನಿರೀಕ್ಷೆ ಗರಿಗೆದರಿದೆ. ಎಂಎಲ್ಸಿಗಳಾದ ಎಂ.ಟಿ.ಬಿ.ನಾಗರಾಜ್ ಮತ್ತು ಆರ್. ಶಂಕರ್ ಅಪೇಕ್ಷೆ ಫಲಿಸಲಿದ್ದರೆ, ಮತ್ತೊಬ್ಬ ವಲಸಿಗ ಎಚ್.ವಿಶ್ವನಾಥ್​ಗೆ ಮಂತ್ರಿ ಸ್ಥಾನದ ಭಾಗ್ಯ ಇನ್ನೂ ಅಸ್ಪಷ್ಟ. ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಗೆ ಅತಿ ಹೆಚ್ಚು ಪ್ರಾತಿನಿಧ್ಯ ಸಿಕ್ಕಿರುವ ಕಾರಣ ಕೆಲವರಿಗೆ ತೊಡಕಾಗಲಿದೆ. ಮಾತು ಕೊಟ್ಟಂತೆ ನಡೆದುಕೊಳ್ಳುವುದಕ್ಕಾಗಿ ಎಲ್ಲ 6 ಸ್ಥಾನಗಳನ್ನು ಭರ್ತಿ ಮಾಡಬೇಕು ಎನ್ನುವುದು ಸಿಎಂ ಒತ್ತಾಸೆಯಾಗಿದೆ. ಸಚಿವ ಸಂಪುಟ ಪುನಾರಚನೆ ಕಾಲಕ್ಕೆ ಪ್ರದೇಶ, ಜಿಲ್ಲೆ, ಸಮುದಾಯಗಳ ಮಧ್ಯೆ ಸಮತೋಲನ ಕಾಪಾಡುವುದಕ್ಕೆ ಒತ್ತು ನೀಡಬೇಕೆಂಬ ಲೆಕ್ಕಾಚಾರವಿದೆ.

    ಪಕ್ಷ ಮೂಲದ ಹಲವು ಹಿರಿಯರನ್ನು ಸಂಭಾಳಿಸುವುದು ಸಿಎಂ ಮುಂದಿರುವ ಸವಾಲು. ವರಿಷ್ಠರ ಭೇಟಿಗೆ ತೆರಳುವ ಮುನ್ನ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಿ ರ್ಚಚಿಸಲಿದ್ದಾರೆ. ನಿಗಮ-ಮಂಡಳಿ ಒಲ್ಲೆ ಎಂದಿದ್ದ ಹಲವರ ಮನವೊಲಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದು, ಉಳಿದವರನ್ನು ಸಮಾಧಾನ ಮಾಡುವ ವರ್ಚಸ್ಸು, ಸಾಮರ್ಥ್ಯ ಬಿಎಸ್​ವೈಗೆ ಇದೆ ಎಂದು ಮೂಲಗಳು ಹೇಳಿವೆ.

    ಕೇರಳ ಸಚಿವಾಲಯದ ಬೆಂಕಿಯಲ್ಲಿ ಸುಟ್ಟು ಹೋದವೇ ಚಿನ್ನ ಕಳ್ಳ ಸಾಗಾಟದ ದಾಖಲೆಗಳು? ವಿಪಕ್ಷಗಳು ಹೇಳೋದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts