More

    ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಆರ್​ಎಸ್​ಎಸ್​-ಬಿಜೆಪಿ ಹಿರಿಯ ನಾಯಕರಿಂದ ಚೆಕ್​ಮೇಟ್! ಇಲ್ಲಿದೆ ಇನ್​ಸೈಡ್​ ಸ್ಟೋರಿ

    ರಾಜ್ಯದಲ್ಲಿ ಸಂಪುಟ ರಚನೆ ಪ್ರಕ್ರಿಯೆ ಬಿರುಸು ಪಡೆದಿದೆ. ದೆಹಲಿ ಹೈಕಮಾಂಡ್​ನಿಂದ ಸಂಪುಟಕ್ಕೆ ಗ್ರೀನ್ ಸಿಗ್ನಲ್ ಪಡೆಯುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಪಕ್ಷ ಕ್ಲೀನ್ ಇಮೇಜ್​​ ಹೊಂದಿರಬೇಕು ಅನ್ನೋ ಲೆಕ್ಕಾಚಾರ ಹಾಕಿಕೊಂಡಿರುವ ಆರ್​ಎಸ್​ಎಸ್​-ಬಿಜೆಪಿ ಹಿರಿಯ ನಾಯಕರು, ಇದಕ್ಕಾಗಿ ಒಂದು ಚೆಕ್​ಮೇಟ್​ ಮುಂದಿಟ್ಟಿದ್ದಾರೆ. ಸಿಡಿ ಭಯದಲ್ಲಿ ಕೋರ್ಟ್​ ತಡೆಯಾಜ್ಞೆ ತಂದವರಿಗೆ ಸಂಪುಟದಲ್ಲಿ ಚಾನ್ಸ್ ಕೊಡೋದೇ ಬೇಡ ಎಂಬ ಹೊಸ ಕೊಕ್ಕೆ ಬಿದ್ದಿದೆ.

    ತಡೆಯಾಜ್ಞೆ ತಂದ ಶಾಸಕರಿಗೆ ರೆಡ್ ಸಿಗ್ನಲ್
    ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಆರಂಭದಿಂದಲೇ ಆಡಳಿತಕ್ಕೆ ಚುರುಕು ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ದಿನ ಪ್ರವಾಹಪೀಡಿತ ಪ್ರದೇಶಗಳ ಭೇಟಿ ಬೆನ್ನಲ್ಲೇ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಆಡಳಿತ ನಿರ್ವಹಣೆ ಸಂಬಂಧಪಟ್ಟ ಸಚಿವರ ಜತೆ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ಇದರ ಜತೆಗೆ ತಮ್ಮನ್ನ ಮುಖ್ಯಮಂತ್ರಿಯನ್ನಾಗಿಸಿದ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಷಾ, ಪಕ್ಷಾಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​​ ಭೇಟಿ ಉತ್ಸಾಹದಲ್ಲಿದ್ದಾರೆ ಬೊಮ್ಮಾಯಿ.

    ಬೊಮ್ಮಾಯಿ ಅವರು ದೆಹಲಿಗೆ ಸಂಭಾವ್ಯ ಸಚಿವರ ಪಟ್ಟಿಯನ್ನ ಕೂಡ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಯಾರೆಲ್ಲರನ್ನು ಹೊಸ ಸಚಿವರನ್ನಾಗಿ ಮಾಡಬೇಕು? ಜಾತಿ, ಪ್ರಾದೇಶಿಕ ಆಧಾರದ ಮೇಲೆ ಯಾರಿಗೆಲ್ಲಾ ಸ್ಥಾನ ಕೊಡಬೇಕು? ಹೊಸಮುಖಗಳಿಗೆ ಅವಕಾಶ ಜತೆಗೆ ಹಿರಿಯರ ಸ್ಥಾನಮಾನ ಏನು? ಸರ್ಕಾರ ರಚನೆಗೆ ತಮ್ಮದೇ ಆದ ಕೊಡುಗೆ ಕೊಟ್ಟಿರೋ ವಲಸಿಗ ಸಚಿವರ ಕತೆ ಏನು? ಹೀಗೆ ನಾನಾ ಕೋನಗಳಲ್ಲಿ ಸಚಿವರ ಪಟ್ಟಿಯನ್ನು ವರಿಷ್ಠರ ಮುಂದಿಡೋಕೆ ಬೊಮ್ಮಾಯಿ ಪಟ್ಟಿ ಕೈಲಿ ಹಿಡಿದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

    ಇಂಥಾ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ಪರಿಗಣನೆಗೆ ಇದೀಗ ಮತ್ತೊಂದು ಮಾನದಂಡ ಸೇರ್ಪಡೆಗೊಂಡಿದೆ ಎನ್ನಲಾಗಿದೆ. ಇದು ಒಂದು ವೇಳೆ ಸಚಿವ ಸ್ಥಾನ ಪರಿಗಣನೆ ಸಂದರ್ಭದಲ್ಲಿ ಅನುಷ್ಠಾನಕ್ಕೆ ಬಂದ್ರೆ, ಕನಿಷ್ಠ 10 ಮಂದಿ ಕಮಲ ಶಾಸಕರು ರೇಸ್​ನಿಂದ ಮೊದಲ ಸುತ್ತಿನಲ್ಲೇ ಔಟ್ ಆಗಲಿದ್ದಾರೆ. ಇದು ಸಹಜವಾಗಿಯೇ ಈ ಕ್ಯಾಟಗಿರಿಯಡಿ ಬರೋ ಶಾಸಕರಲ್ಲಿ ತಲ್ಲಣ ಸೃಷ್ಟಿಸಿದೆ. ಹಾಗಿದ್ರೆ, ಏನದು ಈ ಡೇಂಜರಸ್ ಮಾನದಂಡ ಅಂತೀರಾ.. ಅದುವೇ ಸಿಡಿ ತಡೆಯಾಜ್ಞೆ.!


    ಸಿಡಿ ಹೆಸರೇಳಿದ್ರೆ ಸಾಕು ಮೊದಲೇ ಹಲವರು ಬೆಚ್ಚಿಬೀಳೋದು ಗ್ಯಾರೆಂಟಿ.! ಕುಂತ್ರೂ ಸಿಡಿ ಭಯ..ನಿಂತ್ರೂ ಸಿಡಿ ಭೀತಿ..ಮಲಗಿದ್ರೂ ಅದೇ ಸಿಡಿ ಆತಂಕ..ಹೀಗೆ ಕನಸು-ಮನಸಲ್ಲೂ ಸಿಡಿ ಸುರುಳಿ ಸುತ್ತಿದ ಕಾರಣ ಈ ಹಿಂದಿನ ಬಿಎಸ್​ವೈ ಸಂಪುಟದಲ್ಲಿದ್ದ ಕನಿಷ್ಠ ಆರು ಮಂದಿ ಸಚಿವರು ಮೊದಲು ಮಾಡಿದ ಕೆಲಸವೆಂದ್ರೆ ಕೋರ್ಟ್​ ಕದ ತಟ್ಟಿದ್ದು. ತಮ್ಮ ಮಾನಹಾನಿಗಾಗಿ ತಿರುಚಿದ ಸಿಡಿ ಬಿಡುಗಡೆ ಸಾಧ್ಯತೆ ಇರುವುದರಿಂದ ಯಾವುದೇ ಮಾಧ್ಯಮ, ಪತ್ರಿಕೆಗಳು ಸಿಡಿ ಬಂದ್ರೂ ಪ್ರಸಾರ ಮಾಡಬಾರದು ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಬಾರದು ಅಂತಾ ಕೋರ್ಟ್​ ಮೊರೆ ಹೋದದ ಮಂದಿ ಕೊನೆಗೂ ತಡೆಯಾಜ್ಞೆ ತರೋದ್ರಲ್ಲಿ ಯಶಸ್ವಿಯಾದರು.

    ಇಲ್ಲಿ ಏನೋ ಇರೋದ್ರಿಂದಲೇ ಮುಂಜಾಗೃತೆಯಾಗಿ ಈ ನಾಯಕರು ಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ ಅಂತಾ ಎಲ್ಲಡೆ ಗುಸುಗುಸು ಆರಂಭವಾದ್ರೆ, ಸ್ಟೇ ತಂದ ಕೆಲವರ ಸ್ಥಿತಿ ಯಾರದ್ದೋ ಒತ್ತಡಕ್ಕೆ ಮಣಿದು ಯಾಕಾದ್ರೂ ತಡೆಯಾಜ್ಞೆ ತಂದೆವೋ ಎಂಬಂತಾಯಿತು. ಒಟ್ಟಾರೆ ಸ್ಟೇ ತಂದವರು ತಮ್ಮ ಮಾನವನ್ನು ತಾವೇ ಹರಾಜು ಹಾಕಿಕೊಂಡಂತಾಯ್ತು ಅಂತಾ ಜನ ಮಾತನಾಡಿಕೊಳ್ಳಲು ಇದು ಅವಕಾಶ ಮಾಡಿ ಕೊಟ್ಟಿದ್ದು ನಿಜ. ಸಿಡಿಗೆ ಬೆದರಿ ಯಾವಾಗ ಆಗಿನ ಸಚಿವರು ಧಿಡೀರ್ ತಡೆಯಾಜ್ಞೆ ತಂದರೋ, ಇದು ಕುಂಬಳಕಾಯಿ ಕಳ್ಳ ಅಂದ್ರೆ ಬೆನ್ನು ಮುಟ್ಟಿ ನೋಡಿದ ಕತೆ ಅಂತಾ ಪ್ರತಿಪಕ್ಷಗಳು ಕುಟುಕಿದವು. ಸಿಡಿ ಮುಜುಗರವನ್ನೇ ಎನ್​ಕ್ಯಾಶ್ ಮಾಡಿಕೊಳ್ಳಲು ಹೊರಟ ಕಾಂಗ್ರೆಸ್, ಸ್ಟೇ ತಂದ ಸಚಿವರಿಗೆ ಅಸಹಕಾರ ಪ್ರತಿಭಟನೆ ನಡೆಸಿದ್ದಿದೆ.

    ಇದೀಗ ಇದನ್ನೇ ಸಚಿವ ಸ್ಥಾನಕ್ಕೆ ಕೊಕ್ಕೆಯಾಗಿ ಹಿಡಿದು ನಿಂತಿದ್ದಾರಂತೆ ಆರ್​ಎಸ್​ಎಸ್​​-ಬಿಜೆಪಿ ಹಿರಿಯ ನಾಯಕರು. ಒಂದು ವೇಳೆ ಇಂಥವರಿಗೆ ಮಂತ್ರಿಗಿರಿ ಕೊಟ್ರೆ, ಮುಂದೊಂದು ದಿನ ಸಿಡಿ ರಿಲೀಸ್ ಆಗಿಬಿಟ್ರೆ, ಪಕ್ಷ ಹಾಗೂ ಸರ್ಕಾರಕ್ಕೆ ದೊಡ್ಡ ಮುಜುಗರ ಆಗಲಿದೆ. ಇದರಿಂದಾಗಿ ಈ ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಬೇಡ ಅನ್ನೋ ಬಗ್ಗೆ ಕೇಸರಿ ಪ್ರಮುಖರು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಈ ಹಿರಿಯ ಥಿಂಕ್ ಟ್ಯಾಂಕ್​ ನೀಡೋ ಲೇಟೆಸ್ಟ್ ಉದಾಹರಣೆ ಡಿವಿಎಸ್.

    ಮೋದಿ ಸಂಪುಟ ಪುನಾರಚನೆಗೂ ಕೆಲವೇ ದಿನ ಮುನ್ನ ಕೇಂದ್ರ ಸಚಿವರಾಗಿದ್ದ ಡಿವಿ ಸದಾನಂದಗೌಡ, ಶಂಕಿತ ಸಿಡಿ ರಿಲೀಸ್​​​ ಆದ್ರೆ, ಪ್ರಸಾರ ಮಾಡದಂತೆ ಕೋರ್ಟ್​ನಿಂದ ತಡೆಯಾಜ್ಞೆ ತಂದರು. ಕಾಕತಾಳೀಯ ಎಂಬಂತೆ ಮೋದಿ ಸಂಪುಟ ಪುನಾರಚನೆಯಲ್ಲಿ ಹಿರಿಯ ಸಚಿವರಾಗಿದ್ದ ಡಿವಿ ಸದಾನಂದಗೌಡರಿಗೆ ಕೊಕ್ ನೀಡಲಾಯಿತು. ಖುದ್ದು ಪ್ರಧಾನಿ ಮೋದಿರವರೇ ಈ ಮಾನದಂಡಕ್ಕೆ ಒತ್ತು ಕೊಟ್ಟಿರುವಾಗ, ರಾಜ್ಯ ಸಂಪುಟ ರಚನೆ ವೇಳೆಯೂ ಇದನ್ನ ಪಾಲಿಸಬೇಕು ಎಂಬುದು ಕೆಲ ಹಿರಿಯರ ವಾದ ಎನ್ನಲಾಗಿದೆ. ಈ ನಿದರ್ಶನ ಗಣನೆಗೆ ಬಂದ್ರೆ, ಸಂಪುಟದಿಂದ ಸಿಡಿ ತಡೆಯಾಜ್ಞೆ ಟೀಂ ಹೊರಗುಳಿಯಬೇಕಾಗಿರೋದು ಅನಿವಾರ್ಯ. ಇದೇ ಸದ್ಯ ವಲಸಿಗ ಶಾಸಕರಲ್ಲಿ ಢವಢವ ತಂದಿರೋದು.

    6 ಬಾಂಬೆ ಫ್ರೆಂಡ್ಸ್​ ಅಲ್ಲದೇ, ಕರೊನಾ ಬೆಡ್ ಬ್ಲಾಕಿಂಗ್ ಸಂಬಂಧಪಟ್ಟಂತೆ ಬಿಜೆಪಿಯ ಓರ್ವ ಶಾಸಕ ಮಾಧ್ಯಮಗಳ ತಡೆಯಾಜ್ಞೆಯನ್ನ ತಂದಿದ್ದಾರೆ. ಇನ್ನ, ಕಳೆದ ವರ್ಷದಿಂದ ಈಚೆಗೆ ಬೇರೆ ಬೇರೆ ಕಾರಣಕ್ಕೆ ಬಿಜೆಪಿಯ ಇನ್ನೂ ನಾಲ್ವರು ಶಾಸಕರು ತಮ್ಮ ವಿರುದ್ಧದ ವರದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ. ಸಂಪುಟ ಪುನಾರಚನೆ ವೇಳೆ ಕೋರ್ಟ್​ ತಡೆಯಾಜ್ಞೆ ಮಾನದಂಡ ಜಾರಿಗೆ ಬಂದ್ರೆ, ಸಂಪುಟ ಪೈ ಪೋಟಿಯಲ್ಲಿರೋ ಕನಿಷ್ಟ 10 ಸಚಿವಾಕಾಂಕ್ಷಿಗಳು ಹೊರಗುಳಿಯಬೇಕಾಗಬಹುದು. ಹಿಂಗಾದ್ರೆ, ಸಂಪುಟಕ್ಕಾಗಿ ಉಂಟಾಗಿರೋ ಟ್ರಾಫಿಕ್ ಜಾಮ್ ತನ್ನಿಂತಾನೇ ಕಮ್ಮಿಯಾಗಬಹುದು.

    ಇರೋದರಲ್ಲಿ ಸಮಾಧಾನ ಸಂಗತಿ ಎಂದ್ರೆ, ಈ ಮಾನದಂಡ ಜಾರಿ ಇನ್ನೂ ಪ್ರಸ್ತಾವನೆ ಹಂತದಲ್ಲಿದೆಯಷ್ಟೇ ಹೊರತು ಜಾರಿಗೆ ಬಂದಿಲ್ಲ. ಇದರ ಸಾಧಕ-ಬಾಧಕಗಳ ಬಗ್ಗೆ ಕೂಲುಂಕಷ ಚರ್ಚೆ ಹಾಗೂ ಇದರಿಂದ ಪಕ್ಷಕ್ಕೆ ಆಗಬಹುದಾದ ಲಾಭ-ನಷ್ಟಗಳ ಲೆಕ್ಕಾಚಾರ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ, ಒಂದು ವೇಳೆ ಯಾರದ್ದದರೂ ಸೆಕ್ಸ್​ ಸಿಡಿ ಹಗರಣ ಬೆಳಕಿಗೆ ಬಂದ್ರೆ, ಪಕ್ಷಕ್ಕಾಗುವ ಮುಜುಗರ, ಕಳಂಕ ತಪ್ಪಿಸೋ ದೃಷ್ಟಿಯಿಂದ ಕೋರ್ಟ್​ ಸ್ಟೇ ತಂದ ಶಾಸಕರ ಪರಿಗಣನೆ ಬೇಡ ಅಂತಾ ಆರ್​ಎಸ್​​ಎಸ್​-ಬಿಜೆಪಿ ಹಿರಿತಲೆಗಳು ಸಲಹೆಯನ್ನೇನೋ ಕೊಟ್ಟಿದ್ದಾರೆ. ಇದರ ಜತೆಗೆ ಕ್ಲೀನ್ ಇಮೇಜ್ ಉಳ್ಳ, ವರ್ಚಸ್ವೀ, ಯುವ ಶಾಸಕರಿಗೆ ಸಂಪುಟದಲ್ಲಿ ಮಣೆ ಹಾಕಿದ್ರೆ, ಪಕ್ಷಕ್ಕೂ ಒಳ್ಳೆಯ ಹೆಸರು ಎಂಬುದು ಈ ಹಿರಿಯರ ಅಭಿಮತ. ಹೀಗಾಗಿ ಸಿಡಿ ಕೇಸ್​​ ಕೋರ್ಟ್​ ಸ್ಟೇ ತಂದ ಮಾಜಿ ಸಚಿವರ ಜತೆಗೆ 10ಕ್ಕೂ ಹೆಚ್ಚು ಬಿಜೆಪಿ ಶಾಸಕರಲ್ಲಿ ಆತಂಕ ಹೆಚ್ಚಾಗಿದೆ.

    ರಾಜ್ಯಕ್ಕೆ ರಾಜ್ಯವೇ ಈಗ ಮತ್ತೊಮ್ಮೆ ದೆಹಲಿಯತ್ತ ನೋಡೋ ಸ್ಥಿತಿ ಎದುರಾಗಿದೆ. ಏಕೇಂದ್ರೆ, ಸದ್ಯ ಒನ್ ಮ್ಯಾನ್ ಟೀಂ ಕ್ಯಾಪ್ಟನ್ ಆಗಿರೋ ಬೊಮ್ಮಾಯಿ, ಸುಲಲಿತ ಆಡಳಿತಕ್ಕಾಗಿ ಇನ್ನು ಒಂದಷ್ಟು ಮೆಂಬರ್​ಗಳನ್ನ ನೀಡಬೇಕು ಅಂತಾ ಹೈಕಮಾಂಡ್ ಎದುರು ಮನವಿ ಸಲ್ಲಿಸಿದ್ದಾರೆ. ಆದ್ರೆ, ಆತುರ ಬೇಡ ಅಂತಾ ಕಿವಿಮಾತು ಹೇಳಿರೋ ದಿಲ್ಲಿ ಕಮ್ಯಾಂಡ್, ಬೊಮ್ಮಾಯಿಗೆ ಕೊಟ್ಟ ಸಜೆಷನ್..ಕ್ಲೀನ್ ಗವರ್ನ್​ಮೆಂಟ್.

    ಗಾಡ್​​ಫಾದರ್ ನಂಬಿಕುಳಿತ ಕೆಲ ಶಾಸಕರು!
    ರಾಜ್ಯದಲ್ಲಿ ಹೊಸ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಮೂರು ದಿನ ಕಳೆದಿದೆ. ದೆಹಲಿ ಬಿಜೆಪಿ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸೋಕೆ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ರಾಜ್ಯ ಕ್ಯಾಬಿನೆಟ್​​ ರಚನೆ ಸಂಬಂಧ ವರಿಷ್ಠರ ಜತೆ ಸಮಾಲೋಚನೆಗೆ ಸಿಎಂ ಮುಂದಾಗಿದ್ದಾರೆ. ದೆಹಲಿ ಭೇಟಿ ವೇಳೆ ವರಿಷ್ಟರ ಜತೆ ಸಚಿವ ಸಂಪುಟ ಪಟ್ಟಿ ಫೈನಲ್ ಮಾಡೋ ಬಗ್ಗೆ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ. ಈ ಬಗ್ಗೆ ವರಿಷ್ಠರ ಸಲಹೆ ಪಡೆದ ಬಳಿಕವೇ ಸಂಪುಟದಲ್ಲಿ ಯಾರಿರಬೇಕೆಂಬ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ಬೊಮ್ಮಾಯಿ ನಿರ್ಧರಿಸಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿರನ್ನ ಭೇಟಿಯಾದ ಬೊಮ್ಮಾಯಿ, ತಮ್ಮನ್ನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ ಕಾರಣ ಕೃತಜ್ಞತೆ ಸಲ್ಲಿಸಿದ್ದಾರೆ. ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ ಕೂಡ ರಾಜ್ಯದ ಪ್ರಗತಿ ದೃಷ್ಟಿಯಿಂದ ಅಗತ್ಯ ಸಹಕಾರ ಕೊಡೋ ಭರವಸೆ ನೀಡಿದರು ಎನ್ನಲಾಗಿದೆ. ಇದಕ್ಕೂ ಮುನ್ನ, ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಆಯ್ಕೆಗೆ ಸಹಕರಿಸಿದ ಬಗ್ಗೆ ಥ್ಯಾಂಕ್ಸ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉತ್ತಮ ಆಡಳಿತ ನೀಡಬೇಕೆಂದು ಬೊಮ್ಮಾಯಿಗೆ ಅಮಿತ್ ಷಾ ಕಿವಿಮಾತು ಹೇಳಿದ್ದಾರೆ.

    ಇನ್ನ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನ ಭೇಟಿಯಾದ ಬೊಮ್ಮಾಯಿ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ, 21 ಸದಸ್ಯರ ಸಂಭಾವ್ಯ ಸಚಿವರ ಪಟ್ಟಿಯನ್ನ ಕೂಡ ಜೆಪಿ ನಡ್ಡಾ ಮುಂದಿಟ್ಟರು ಎನ್ನಲಾಗಿದೆ. ಇದರಲ್ಲಿ ಹಳಬರ ಜತೆ ಹೊಸ ಮುಖಗಳ ಹದಮಿಳಿತ ಸಂಪುಟವನ್ನ ರಚಿಸಬೇಕೆಂಬ ತುಡಿತವನ್ನ ಬೊಮ್ಮಾಯಿ ಹೊಂದಿದ್ದಾರೆ. ಹೀಗಾಗಿ ಸಚಿವರ ಟೆಂಟೆಟಿವ್ ಪಟ್ಟಿಗೆ ಅನುಮೋದನೆ ಕೊಟ್ರೆ ಶೀಘ್ರವೇ ಸಂಫುಟ ವಿಸ್ತರಣೆಗೆ ಸಿದ್ಧ ಎಂದು ವರಿಷ್ಠರ ಎದುರು ಬೊಮ್ಮಾಯಿ ಹೇಳಿದ್ದಾರೆ. ಏನೇ ಆದ್ರೂ, ಇನ್ನೂ ಒಂದು ವಾರ ಕಾಲ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಅಸ್ತು ಅನ್ನೋದು ಡೌಟ್ ಎನ್ನಲಾಗಿದೆ. ಸಂಪುಟ ರಚನೆಗೆ ಆತುರಪಡೆದೇ, ಎಲ್ಲಾ ಅಂಶಗಳನ್ನೂ ಅಳೆದೂ ತೂಗಿಯೂ, ಉತ್ತಮ ಕ್ಯಾಬಿನೆಟ್ ರೂಪಿಸಬೇಕೆಂಬುದು ಹೈಕಮಾಂಡ್ ಒತ್ತಾಸೆ ಎಂದು ಹೇಳಲಾಗಿದೆ.

    ಇನ್ನ, ದೆಹಲಿಯಲ್ಲಿನ ರಾಜ್ಯದ ಸಂಸದರು, ಹಾಗೂ ರಾಜ್ಯಕ್ಕೆ ಸೇರಿದ ಕೇಂದ್ರ ಸಚಿವರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭೋಜನ ಕೂಟದಲ್ಲಿ ಪಾಲ್ಗೊಂಡರು. ಆನಂತರ ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಇತರೆ ಕಾರ್ಯಗಳ ಪ್ರಯುಕ್ತ ಕೇಂದ್ರ ಸಚಿವರನ್ನ ಭೇಟಿಯಾಗೋ ನಿಟ್ಟಿನಲ್ಲಿ ದೆಹಲಿಯಲ್ಲೇ ಉಳಿಯಲು ನಿರ್ಧರಿಸಿದರು. ಇನ್ನೊಂದೆಡೆ, ದೆಹಲಿಯಲ್ಲೇ ಕೆಲದಿನಗಳಿಂದ ಬೀಡುಬಿಟ್ಟಿರೋ ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮದೇ ಆದ ಗಾಡ್​ ಫಾದರ್​​ಗಳ ಮೂಲಕ ಬೊಮ್ಮಾಯಿ ಸಂಪುಟ ಸೇರೋಕೆ ಲಾಬಿ ನಡೆಸಿದ್ದಾರೆ. ಸಂಪುಟ ಸೇರ್ಪಡೆ ಬಗ್ಗೆ ತಾವು ಮಧ್ಯಪ್ರವೇಶಿಸಲ್ಲ ಅಂತಾ ಈಗಾಗ್ಲೇ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಸಂಪುಟ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿರವರೇ ಫೈನಲ್ ಡಿಸಿಷನ್ ತೆಗೆದುಕೊಳ್ಳಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಕ್ಲಿಯರ್ ಮಾಡಿದ್ದಾರೆ. ಇದರಿಂದಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು, ನೇರವಾಗಿ ಬೊಮ್ಮಾಯಿ ಸಂಪರ್ಕ ಜತೆಗೆ ದೆಹಲಿ ಮಟ್ಟದಲ್ಲಿ ಪ್ರಭಾವ ಬೀರಿಸೋಕೆ ಹರಸಾಹಸಪಡ್ತಿದ್ದಾರೆ.

    ಬಿಎಸ್​ವೈ ಸಂಪುಟದಲ್ಲಿ ಸಚಿವರಾಗಿದ್ದ ನಾಯಕರ ಜತೆಗೆ ಈಗ ಬೊಮ್ಮಾಯಿ ಸಂಪುಟ ಸೇರೋಕೆ ಹಾತೊರೆಯುತ್ತಿರೋ ಶಾಸಕರ ಸಂಖ್ಯೆಯೇ 30 ದಾಟಿದೆ. ಜಾತಿವಾರು, ಪ್ರಾದೇಶಿಕವಾರು, ಹಿರಿತನ ಆಧಾರದ ಮೇರೆಗೆ, ಇವರಲ್ಲಿ ಬಹಳಷ್ಟು ಮಂದಿ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸ್ತಿದ್ದಾರೆ. ಪಕ್ಷನಿಷ್ಠೆ, ಸಂಘಟನಾ ಶಕ್ತಿ, ವಯಸ್ಸು, ಭವಿಷ್ಯದಲ್ಲಿ ಪಕ್ಷಕ್ಕಾಗಬಹುದಾದ ಅನುಕೂಲ… ಹೀಗೆ ಸಂಫುಟ ಸೇರ್ಪಡೆ ಸಂಬಂಧಪಟ್ಟಂತೆ ಬಿಜೆಪಿ ವರಿಷ್ಟರು ಹಲವು ಮಾನದಂಡಗಳನ್ನ ಕೂಡ ಪರಿಗಣಿಸಲಿದ್ದಾರೆ ಎಂದು ಹೇಳಲಾಗಿದೆ.

    ಇದರ ಬೆನ್ನಲ್ಲೇ ಆರ್ ಅಶೋಕ್, ಕೆಎಸ್ ಈಶ್ವರಪ್ಪ ಮುಂತಾದ ಹಿರಿಯ ನಾಯಕರು, ಉಪಮುಖ್ಯಮಂತ್ರಿ ಸ್ಥಾನ ಪಡೆಯಲು ತೀವ್ರ ಯತ್ನ ನಡೆಸಿದ್ದಾರೆ. ಈಗಾಗ್ಲೇ ಕೆಎಸ್ ಈಶ್ವರಪ್ಪ ಕೂಡ ತಾವು ಸಿಎಂ ಆಗಬೇಕೆಂದು ಹಲವು ಸ್ವಾಮೀಜಿಗಳು, ಕಾರ್ಯಕರ್ತರು ಆಸೆಪಟ್ಟರೂ ಆ ಸ್ಥಾನ ಸಿಗಲಿಲ್ಲ. ಈಗ ಅಟ್​ಲೀಸ್ಟ್ ಡಿಸಿಎಂ ಸ್ಥಾನದಲ್ಲಿ ತಮ್ಮನ್ನ ನೋಡಬೇಕೆಂಬುದು ಸ್ವಾಮೀಜಿಗಳು, ಅಭಿಮಾನಿಗಳ ಆಸೆ. ಕೇಂದ್ರ ಬಿಜೆಪಿ ವರಿಷ್ಠರು ಡಿಸಿಎಂ ಸ್ಥಾನವನ್ನಾದರೂ ಕೊಡಬೇಕು ಅಂತಾ ಕೆಎಸ್ ಈಶ್ವರಪ್ಪ ಬಯಸಿದ್ದಾರೆ.

    ಇನ್ನೊಂದೆಡೆ, ದೆಹಲಿಯಲ್ಲೇ ಉಳಿದ ಮತ್ತೋರ್ವ ಸಿಎಂ ಆಕಾಂಕ್ಷಿಯಾಗಿದ್ದ ಅರವಿಂದ್ ಬೆಲ್ಲದ್ ಕೂಡ ಉನ್ನತ ಸ್ಥಾನಮಾನದ ನಿರೀಕ್ಷೆಯಲ್ಲಿದ್ದಾರೆ. ಆದ್ರೆ, ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಬೆಲ್ಲದ್​​ ಸಂಪುಟ ಸೇರ್ಪಡೆ ಸುಲಭವಲ್ಲ. ಆದ್ರೂ ದೆಹಲಿಯಲ್ಲಿ ಪ್ರಭಾವ ಹೊಂದಿರೋ ರಾಜ್ಯದ ಕೆಲ ಪ್ರಭಾವಿಗಳು ಅರವಿಂದ್ ಬೆಲ್ಲದ್​​ಗೆ ಸಂಫುಟ ಸ್ಥಾನದ ಬಗ್ಗೆ ಅಭಯ ನೀಡಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಕೆಲ ಶಾಸಕರು, ಸಚಿವ ಸ್ಥಾನಕ್ಕಾಗಿ ತಂತಮ್ಮ ಗಾಡ್​​ಫಾದರ್​​ಗಳನ್ನ ನಂಬಿ ಕೂತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನ ಸಂಘಟಿಸೋ ದೃಷ್ಟಿಯಿಂದ ತಮಗೆ ಅವಕಾಶ ಕೊಡಬೇಕು ಅನ್ನೋದು ದೆಹಲಿಗೆ ಆಗಮಿಸಿರೋ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಆಗ್ರಹ. ಮೋದಿ ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಕೊಟ್ಟಂತೆ, ರಾಜ್ಯದಲ್ಲೂ ಮಹಿಳೆಯರಿಗೆ ಸಂಪುಟದಲ್ಲಿ ಅಧಿಕ ಅವಕಾಶ ಕೊಡಬೇಕು ಅಂತಾ ತೇಜಸ್ವಿನಿ ಒತ್ತಾಯಿಸಿದ್ದಾರೆ.

    ಒಟ್ಟಾರೆ, ಸದ್ಯ ಸಂಪುಟದಲ್ಲಿ ಚಾನ್ಸ್ ಪಡೆಯಲೇಬೇಕೆಂಬ ಆಸೆಯೊಂದಿಗೆ ಅನೇಕ ಶಾಸಕರು ತೀವ್ರ ಪ್ರಯತ್ನ ಮುಂದುವರೆಸಿದ್ದಾರೆ. ದೆಹಲಿ ಯಿಂದಲೇ ಲಾಬಿ ಮಾಡೋಕೆ ಕೆಲವರು ರಾಜಧಾನಿಯಲ್ಲೇ ಠಿಕಾಣಿ ಹೂಡಿದ್ದಾರೆ. ದೆಹಲಿಗೆ ತೆರಳಿರೋ ಹಲ ಶಾಸಕರು, ಮಾಜಿ ಸಚಿ ವರು ತಮ್ಮ ಶಕ್ತಿಗೆ ತಕ್ಕಂತೆ ಸ್ಥಾನಮಾನದ ಅಪೇಕ್ಷೆಯಲ್ಲಿದ್ದಾರೆ. ಆದ್ರೆ, ಅಚ್ಚರಿಗಳಿಗೆ ಫೇಮಸ್ ಆಗಿರೋ ಬಿಜೆಪಿ ವರಿಷ್ಠರು ಸಚಿವರ ಆಯ್ಕೆಗೆ ಇಲ್ಲಿ ಯಾವ ಮಂತ್ರದಂಡ ಪ್ರಯೋಗಿಸ್ತಾರೋ? ಕಮಲದ ಕ್ರಿಟೀರಿಯಾ ಏನು ಎಂಬುದು ಮಾತ್ರ ಎಂದಿನಂತೆ ಸಸ್ಪೆನ್ಸ್..ಸಸ್ಪೆನ್ಸ್​.


    ಇದೊಂದ್ ಚಾನ್ಸ್ ಕೊಡಿ..ಇದು ಬಹಳಷ್ಟು ಶಾಸಕರ ಹಕ್ಕೊತ್ತಾಯ. ಅದರಲ್ಲೂ 70 ವರ್ಷ ಬಾರ್ಡರ್​ನಲ್ಲಿರೋ ಶಾಸಕರಂತೂ ಇನ್ನಿಲ್ಲದಂತೆ ಪ್ರಯತ್ನ ನಡೆಸಿದ್ದಾರೆ. ಏಕೇಂದ್ರೆ, ಬಿಜೆಪಿ ವಯಸ್ಸಿನ ಡೆಡ್​ಲೈನ್ 75 ದಾಟಿಬಿಟ್ರೆ ಪದವಿ ಚಾಪ್ಟರ್ ಕ್ಲೋಸ್ ಅನ್ನೋದು ಇವರ ಭಯಕ್ಕೆ ಕಾರಣ. ಇನ್ನ, ಈ ಸಲ ಮಂತ್ರಿಯಾಗಲೇಬೇಕು ಅಂತಾ ಮರಳಿ ಯತ್ನ ಮಾಡಿರೋ ಯತ್ನಾಳ್ ಈ ಫ್ಲೋನಲ್ಲಿ ಸ್ವಾಮೀಜಿಗಳ ವಿರುದ್ಧವೇ ನಾಲಿಗೆ ಹರಿಬಿಡೋ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

    ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಪಡೆಯಲೇಬೇಕು ಅನ್ನೋದು ಕನಿಷ್ಟ 60 ಬಿಜೆಪಿ ಶಾಸಕರ ಆಸೆ. ಸೀನಿಯಾರಿಟಿ ಕೋಟಾ, ಜಾತಿ ಕೋಟಾ, ಪ್ರಾದೇಶಿಕ ಕೋಟಾ, ನಿಷ್ಟೆ ಕೋಟಾ, ಸಂಘಟನೆ ಕೋಟಾ…ಅನುಭವದ ಕೋಟಾ. ಹೀಗೆ ನಾನಾ ಫ್ಯಾಕ್ಟರ್​ಗಳ ಆಧಾರದ ಮೇಲೆ ಶಾಸಕರು ರೆಸ್ಯೂಮ್ ಮುಂದಿಡ್ತಿದ್ದಾರೆ. ಇನ್ನ, ಎಲ್ಲರಿಗಿಂತ ನಾನೇ ಸೀನಿಯರ್ ಅಂತಾ ಮತ್ತೆ ಪ್ರತಿಪಾದಿಸಿರೋ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಹಳೇ ಸ್ಟೈಲ್​ ತೋರಿದ್ದಾರೆ. ಇದೇ ಲಹರಿಯಲ್ಲಿ ಬಿಎಸ್​ವೈ ಪರ ದನಿ ಎತ್ತಿದ್ದ ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧವೇ ಆಪೇಕ್ಷಾರ್ಹ ಮಾತುಗಳನ್ನ ಆಡೋ ಮೂಲಕ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಯತ್ನಾಳ್​​ಗೆ ದಿಂಗಾಲೇಶ್ವರ ಶ್ರೀಗಳು ಸೌಮ್ಯವಾಗೇ ಎದುರೇಟು ಕೊಟ್ಟಿದ್ದಾರೆ.

    ರಾಜ್ಯ ಸಚಿವ ಸಂಪುಟ ಸೇರೋಕೆ ವಿವಿಧ ಶಾಸಕರು ನಾನಾ ರೀತಿ ಪ್ರಯತ್ನ ನಡೆಸಿದ್ದಾರೆ. 70ರ ಆಸುಪಾಸಿನಲ್ಲಿರೋ ಬಿಜೆಪಿ ಶಾಸಕ ರಂತೂ, ಈ ಸಲ ಮಿಸ್ ಆದ್ರೆ, ಬಿಎಸ್​ವೈ ನೀತಿ ಎಲ್ಲಿ ಜಾರಿಗೆ ಬರುತ್ತೋ ಎಂಬ ಆತಂಕದಲ್ಲಿದ್ದಾರೆ. ಇನ್ನ, ಬಿಎಸ್​ವೈರನ್ನ ಭೇಟಿಯಾದ ಕೊಳ್ಳೇಗಾಲ ಬಿಎಸ್​ಪಿ ಶಾಸಕ ಎನ್​ ಮಹೇಶ್, ಬಿಜೆಪಿ ಸೇರ್ಪಡೆ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮಂತ್ರಿಗಿರಿಗೆ ಒಂದು ಕೈ ನೋಡೋಣ ಅನ್ನೋ ಪ್ಲ್ಯಾನ್ ಮಾಡಿದ್ದಾರೆ. ಹಾವೇರಿಯಲ್ಲಿ ಶಾಸಕ ನೆಹರೂ ಓಲೇಕಾರ್​ಗೆ ಈ ಸಲ ಸಚಿವ ಅವಕಾಶ ಕೊಡಲೇಬೇಕು ಅಂತಾ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಮೂರು ಸಲ ಶಾಸಕರಾಗಿ ಆಯ್ಕೆಯಾಗಿರೋ ಓಲೇಕಾರ್​ಗೆ ಸಂಪುಟದಲ್ಲಿ ಚಾನ್ಸ್ ನೀಡಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

    ಇನ್ನೊಂದೆಡೆ, ಸಚಿವಾಕಾಂಕ್ಷಿಗಳ ಲೆಕ್ಕ ಹೆಚ್ಚಿರೋ ಕಾರಣ, ಈ ಸಲ ವಿಧಾನ ಪರಿಷತ್ ಸದಸ್ಯರಿಗೆ ಆದ್ಯತೆ ನೀಡದೇ ಇರಲು ಪಕ್ಷ ತೀರ್ಮಾನಿಸಿದೆ ಎನ್ನಲಾಗಿದೆ. ಈಗಿರೋ ಐವರ ಬದಲು ಇಬ್ಬರಿಗಷ್ಟೇ ಸ್ಥಾನ ಕೊಡಲು ಕಮಲ ವರಿಷ್ಟರು ನಿರ್ಣಯಿಸಿದ್ದಾರೆ ಎಂದು ಹೇಳಲಾಗಿದೆ. ಹಾಗಿದ್ರೆ, ಕೋಟಾ ಶ್ರೀನಿವಾಸ ಪೂಜಾರಿ, ಸಿಪಿ ಯೋಗೇಶ್ವರ್, ಆರ್ ಶಂಕರ್ ಗೆ ಸಚಿವ ಸ್ಥಾನ ಕಷ್ಟ ಎನ್ನಲಾಗ್ತಿದೆ. ಹಾಗೆಯೇ ಪರಿಷತ್ ಸದಸ್ಯರಾಗಿರೋ ಲಕ್ಷ್ಮಣ ಸವದಿ ಹಾಗೂ ಎಂಟಿಬಿ ನಾಗರಾಜ್​​ ಗೆ ಲಕ್ ಖುಲಾಯಿಸೋ ಮಾತು ಕೇಳಿಬರುತ್ತಿದೆ. ಆದ್ರೆ, ಅದೃಷ್ಟದ ಜತೆಗೆ ಹೈಕಮಾಂಡ್ ಸಂತೋಷಗೊಂಡ್ರೆ ಸಿಪಿವೈ ಕೂಡ ಸಚಿವ ಸ್ಥಾನದ ಎಕ್ಸಾಂ ಪಾಸ್ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ.

    ಒಟ್ಟಾರೆ, ಬೊಮ್ಮಾಯಿ ಸಂಪುಟ ರಚನೆಗೆ ಹೈ ಕಮಾಂಡ್ ಹಸಿರು ನಿಶಾನೆ ಕೊಟ್ರೆ, ಲಕ್ ಯಾರಿಗೆ ಕಾದಿದೆ ಅನ್ನೋದರ ಬಗ್ಗೆ ಕುತೂಹಲ ಹೆಚ್ಚಿದೆ. ಬಿಎಸ್​ವೈ ಕ್ಯಾಬಿನೆಟ್​​ನಲ್ಲಿ ಮಂತ್ರಿಯಾದವರಿಗೆ ಈ ಸಲವೂ ಲಕ್ ಖುಲಾಯಿಸುತ್ತೋ..ಅಥವಾ ಹೊಸಬರತ್ತ ವರಿಷ್ಠರು ಚಿತ್ತ ಹರಿಸ್ತಾರೋ ಗೊತ್ತಿಲ್ಲ..! ಇಲ್ಲಿ ಆಕಾಂಕ್ಷಿಗಳಿಗಂತೂ ಒಂಥರಾ ಟೆನ್ಷನ್​​..ಟೆನ್ಷನ್​..!

    ದೆಹಲಿಗೆ ತೆರಳಿದ ಬೊಮ್ಮಾಯಿ ಅಭಿವೃದ್ಧಿ ಮಂತ್ರ ಪಠಿಸಿದ್ದಾರೆ. ದೆಹಲಿಯಲ್ಲಿ ಬೊಮ್ಮಾಯಿ ಬೆನ್ನುತಟ್ಟಿರೋ ಮೋದಿ ಕೂಡ ಎಲ್ಲಾ ರೀತಿ ಸಹಕಾರ ಕೊಡ್ತೀವಿ.,.ಕ್ಲೀನ್ ಗವರ್ನನ್ಸ್ ಕೊಡಬೇಕು ಅಂತಾ ಕಿವಿಮಾತು ಹೇಳಿದ್ದಾರೆ. ಇನ್ನೊಂದೆಡೆ, ಡಿಸಿಎಂ ಸ್ಥಾನಕ್ಕೆ ಕೆಲವರು ಟವಲ್ ಹಾಕಿದ್ರೆ, ಇನ್ನೂ ಹಲವರು ಗೂಟದ ಕಾರ್ ಏರಿದ್ರೆ ಸಾಕು ಅಂತಾ ಒಂಟಿಕಾಲಲ್ಲೇ ನಿಂತು ಜಪ ಮಾಡ್ತಿದ್ದಾರೆ. ಆದ್ರೆ, ಈ ಸಲ ಕ್ಲೀನ್ ಇಮೇಜ್ ಇರೋ ಸರ್ಕಾರದ ಹಪಾಹಪಿಯಲ್ಲಿರೋ ಹೈಕಮಾಂಡ್ ಬೂದುಗಾಜಿನಲ್ಲಿ ಯಾರೆಲ್ಲಾ ಕಾಣಿಸ್ತಿದ್ದಾರೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts