More

    ದೇಶಭಕ್ತಿ ವಿಚಾರದಲ್ಲಿ ಎಂದಿಗೂ ರಾಜಿ ಇಲ್ಲ

    ಕೋಲಾರ: ದೇಶಭಕ್ತಿ ಮತ್ತು ರಾಷ್ಟ್ರದ ಐಕ್ಯತೆ ವಿಚಾರದಲ್ಲಿ ಬಿಜೆಪಿ ಎಂದೆಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

    ನಗರದ ಎಂಜಿ ಚೌಕದಲ್ಲಿ ಬಿಜೆಪಿ ಶನಿವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಪರ ಜನಜಾಗೃತಿ ರ‌್ಯಾಲಿ ಉದ್ದೇಶಿಸಿ ಮಾತನಾಡಿ, ಪೌರತ್ವದ ವಿಚಾರದಲ್ಲಿ ಈ ಹಿಂದೆ ಡಾ.ಮನಮೋಹನ್‌ಸಿಂಗ್ ಸಹಮತ ವ್ಯಕ್ತಪಡಿಸಿದಾಗ ಮೌನವಾಗಿದ್ದ ಕಾಂಗ್ರೆಸ್ ಈಗ ರಾಜಕೀಯ ದುರುದ್ದೇಶದಿಂದ ದೇಶಕ್ಕೆ ಬೆಂಕಿ ಹಚ್ಚಲು ಹೊರಟಿದೆ ಎಂದು ಕಿಡಿಕಾರಿದರು.

    ಪಾಕಿಸ್ತಾನ, ಬಾಂಗ್ಲಾ, ಅಪ್ಘಾನಿಸ್ತಾನದಲ್ಲಿ ಶೋಷಣೆಗೆ ಒಳಗಾದವರಿಗೆ ಪೌರತ್ವ ನೀಡಲು ಕಾಯ್ದೆ ತರಲಾಗಿದ್ದು, ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ಮತ್ತು ಸಿಪಿಎಂ ಜನರಲ್ಲಿ ಗೊಂದಲ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ಅವರ ರಾಷ್ಟ್ರೀಯ ನೀತಿಗಳಿಂದ ಎಲ್ಲ ಧರ್ಮದವರು ಬೆಂಬಲಿಸಲು ತೀರ್ಮಾನಿಸಿರುವುದರಿಂದ ಮುಂದೆ ತಮಗೆ ಉಳಿಗಾಲವಿಲ್ಲವೆಂದು ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿದೆೆ ಎಂದು ಟೀಕಿಸಿದರು.

    ತಾಯಿ ಭಾರತಾಂಬೆಯ ಆರಾಧನೆಯ ಭಾರತವಿದು. ಭಾರತಾಂಬೆಯ ಗೌರವ ಉಳಿಸಲು ಪೌರತ್ವ ಕಾಯ್ದೆ ತರಲಾಗಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದಾಗ, ರಾಮ ಮಂದಿರದ ತೀರ್ಪು ಬಂದಾಗ ದೇಶದಲ್ಲಿ ಗಲಭೆಗಳಾಗಲಿಲ್ಲ. ಅದರೆ ಪೌರತ್ವ ತಿದ್ದುಪಡಿ ಕಾಯ್ದೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದರಿಂದ ಹತಾಶವಾದ ಕಾಂಗ್ರೆಸ್ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದೆ. ಹಾಗಾಗಿ ಜನರಲ್ಲಿ ಪೌರತ್ವ ಕಾಯ್ದೆ ಅರಿವು ಮೂಡಿಸುವ ದಿಸೆಯಲ್ಲಿ ಜಾಗೃತಿ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.

    ಕಾಂಗ್ರೆಸ್ಸಿನಿಂದ ವೋಟ್ ಬ್ಯಾಂಕ್ ರಾಜಕೀಯ: ಮೋದಿ ಅವರು ಸ್ವಾರ್ಥವಿಲ್ಲದೆ ದೇಶದ ಏಕತೆ, ಸಮಗ್ರತೆಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಸಿಪಿಎಂ ಮೋದಿ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಟೀಕಿಸಿದರು.

    ವೋಟ್ ಬ್ಯಾಂಕಿಗೊಸ್ಕರ ತಮ್ಮನ್ನು ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ಮತ್ತು ಸಿಪಿಎಂ ಬಗ್ಗೆ ಎಚ್ಚರ ವಹಿಸದಿದ್ದರೆ ಈ ಎರಡೂ ಪಕ್ಷಗಳು ತಮ್ಮನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಬಿಜೆಪಿ ಪ್ರತಿಯೊಬ್ಬ ಭಾರತೀಯನ ಪರವಾಗಿ ಇದೆ. ಆದರೆ ಕಾಂಗ್ರೆಸ್ ರಾಜಕೀಯ ಕಾರಣಗಳಿಗಾಗಿ ಕೋಮು ಸೌಹಾರ್ದ ಹಾಳು ಮಾಡಲೆತ್ನಿಸುತ್ತಿದೆ ಎಂದು ಆರೋಪಿಸಿದರು.

    ಗಾಂಧಿ ಹೆಸರಿಟ್ಟುಕೊಂಡಿರುವ ಕಾಂಗ್ರೆಸ್ ನಾಯಕರು ಗಾಂಧಿ ತತ್ವಗಳನ್ನು ಪಾಲಿಸುತ್ತಿಲ್ಲ, ಬಿಜೆಪಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದೆ ಎನ್ನುವ ಆ ಪಕ್ಷದವರು ಪೌರತ್ವ ಕಾಯ್ದೆಗೆ ಮುಸ್ಲಿಂ ಸಮುದಾಯ ಬೆಂಬಲ ನೀಡಬಾರದೆಂದು ಗಲಭೆಗೆ ಪ್ರಚೋದಿಸುತ್ತಿರುವುದು ಸರಿಯೇ ಎಂದು ತರಾಟೆಗೆ ತೆಗೆದುಕೊಂಡರು.

    ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ರಾಜ್ಯ ಮುಖಂಡರಾದ ನಿರ್ಮಲ್ ಕುಮಾರ್ ಸುರಾನಾ, ಮುಖಂಡರಾದ ಓಂಶಕ್ತಿ ಚಲಪತಿ,ವಿಜಯಕುಮಾರ್, ಕೃಷ್ಣಾರೆಡ್ಡಿ, ಸಿ.ಡಿ. ರಾಮಚಂದ್ರ, ಮಮತಾ, ಅರುಣಮ್ಮ, ವಾಸುದೇವ, ಮಾಗೇರಿ ನಾರಾಯಣಸ್ವಾಮಿ ಸೇರಿ ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

    ಕಾಯ್ದೆ ಒಪ್ಪದ್ದಿದ್ರೆ ಪಾಕಿಸ್ತಾನಕ್ಕೆ ಹೋಗಿ: ಯಾರು ಬೇಕಾದರೂ ನೆಲೆಸಲು, ಲೂಟಿ ಮಾಡಲು ಭಾರತ ಧರ್ಮ ಛತ್ರವಲ್ಲ, ನಮ್ಮ ಪ್ರಜೆಗಳಿಗೆ ಮಾತ್ರ ಇಲ್ಲಿ ಬದುಕಲು ಅವಕಾಶ, ನಾವು ನೀಡುವ ತೆರಿಗೆ ಹಣ ನುಸುಳುಕೋರರ ಪಾಲಾಗಲು ಅವಕಾಶ ನೀಡಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

    ಪೌರತ್ವ ತಿದ್ದುಪಡಿ ಕಾಯ್ದೆ ಪರ ಜನಜಾಗೃತಿ ರ‌್ಯಾಲಿ ಉದ್ದೇಶಿಸಿ ಮಾತನಾಡಿ, ಯಾವುದೇ ಕಾರಣಕ್ಕೂ ಕಾಯ್ದೆ ಹಿಂಪಡೆಯುವುದಿಲ್ಲ, ದೇಶದ ಹಿತಕ್ಕಾಗಿ ಜಾರಿಗೆ ತಂದಿರುವ ಕಾಯ್ದೆ ಒಪ್ಪಲು ಇಷ್ಟವಿಲ್ಲದ ಕಾಂಗ್ರೆಸ್ ಮತ್ತು ಸಿಪಿಐಎಂನವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಸವಾಲು ಹಾಕಿದರು.

    ಪೌರತ್ವದ ಅರಿವಿಲ್ಲದ ಕಾಂಗ್ರೆಸ್ ಜನರನ್ನು ಪ್ರಚೋದಿಸಿ ಗಲಭೆ ಸೃಷ್ಟಿಸುತ್ತಿದೆೆ. ಇಲ್ಲಿ ನೆಲೆಸಿರುವ ಮುಸಲ್ಮಾನರಿಗೆ ತೊಂದರೆಯಾಗುವುದಿಲ್ಲವೆಂದು ಪ್ರಧಾನಿ ಸೇರಿ ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹೇಳುತ್ತಿದ್ದರೂ ವೋಟ್‌ಬ್ಯಾಂಕ್‌ಗಾಗಿ ಪ್ರಚೋದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾ, ಪಾಕಿಸ್ತಾನದಲ್ಲಿ ಶೋಷಣೆಗೆ ಒಳಗಾದ ಹಿಂದುಗಳಿಗೆ ಭಾರತದಲ್ಲಿ ಪೌರತ್ವ ನೀಡಲು ಈ ಹಿಂದಿನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಎಲ್ಲ ಧರ್ಮದವರು ಬಿಜೆಪಿ ಬೆಂಬಲಿಸಬಹುದೆಂಬ ಭಯದಿಂದ ಕಾಂಗ್ರೆಸ್ ಗಲಭೆಗೆ ಪ್ರಚೋದನೆ ನೀಡುತ್ತಿದ್ದು, ಜನರು ತಕ್ಕ ಪಾಠ ಕಲಿಯಲಿದ್ದಾರೆಂದು ಎಚ್ಚರಿಸಿದರು.

     

    ಕ್ಲಾಕ್ ಟವರ್ ಮೂಲಕ ಮೆರವಣಿಗೆ ಹಾದುಹೋಗಲು ಅನುಮತಿ ನಿರಾಕರಿಸಿದ್ದು ಸರಿಯಲ್ಲ. ಕೋಲಾರ ಭಾರತಾಂಬೆಯನ್ನು ಆರಾಧಿಸುವ ಪವಿತ್ರ ಸ್ಥಳ ಎಂಬುದನ್ನು ಜಿಲ್ಲಾಧಿಕಾರಿ ಮತ್ತು ಎಸ್ಪಿ ಅರ್ಥ ಮಾಡಿಕೊಳ್ಳಬೇಕು.
    ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ

    ಪ್ರಧಾನಿ ಮೋದಿ ದೇಶದ ಹಿತಕ್ಕಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಪೌರತ್ವ ಕಾಯ್ದೆ ಅನುಷ್ಠಾನದಿಂದ ಇಲ್ಲಿ ನೆಲೆಸಿರುವ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಾಗದು. ದೇಶ ಹಿತಕ್ಕೆ ಸಂಬಂಧಿಸಿದ ನಿರ್ಧಾರಗಳಿಗೆ ಜನ ಸರ್ಕಾರವನ್ನು ಬೆಂಬಲಿಸಬೇಕು.
    ಎಚ್.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ

    ಟವರ್‌ಗೆ ಹೋಗೇ ಹೋಗ್ತಿವಿ: ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಪೌರತ್ವ ವಿರೋಧಿಸುವವರು ದೇಶದ್ರೋಹಿಗಳೆಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ. ಗಾಂಧಿಯನ್ನು ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಗಾಂಧಿ ಹೇಳಿಕೆಯನ್ನು ಒಪ್ಪುತ್ತಿಲ್ಲವೇಕೆ ಎಂದು ತರಾಟೆಗೆ ತೆಗೆದುಕೊಂಡರು. ಕೋಲಾರದ ಅವಿಭಾಜ್ಯ ಅಂಗವಾಗಿರುವ ಕ್ಲಾಕ್ ಟವರ್‌ಗೆ ಪ್ರವೇಶಿಸಲು ಜನರಿಗೆ ಹಕ್ಕಿದೆ. ಇದನ್ನು ಕಸಿದುಕೊಳ್ಳುವುದು ತಪ್ಪು. ಅತಿಸೂಕ್ಷ್ಮ ಪ್ರದೇಶವೆಂದು ಹೇಳಿ ಜನರಿಗೆ ಅಡ್ಡಿಪಡಿಸುವುದು ಯಾವ ನ್ಯಾಯ? ಕ್ಲಾಕ್ ಟವರ್ ಪಾಕಿಸ್ತಾನದಲ್ಲಿಲ್ಲ. ಆದರೆ ಅಧಿಕಾರಿಗಳು ಜಮ್ಮು-ಕಾಶ್ಮೀರದ ನಂತರ ಕೋಲಾರದ ಕ್ಲಾಕ್ ಟವರ್ ಅತಿ ಸೂಕ್ಷ್ಮ ಪ್ರದೇಶವೆಂದು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಜಾಥಾಗೆ ಅಡ್ಡಿಯುಂಟು ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
    ಶುಕ್ರವಾರ ರಾತ್ರಿ ಪೊಲೀಸ್ ಅಧಿಕಾರಿಗಳು ನಮ್ಮ ಪಕ್ಷದ ಮುಖಂಡರನ್ನು ದಾರಿ ತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಲಾಕ್ ಟವರ್‌ಗೆ ಹೋಗುವುದು ಶತಃಸಿದ್ಧ ಎಂದರು.

    ಮಾರ್ಗ ಬದಲಿಸಿದ್ದಕ್ಕೆ ಲಾಠಿಚಾರ್ಜ್: ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ನಿಗದಿತ ಮಾರ್ಗ ಬದಲಿಸಿದವರ ಮೇಲೆ ಲಘು ಲಾಠಿ ಚಾರ್ಜ್ ಮಾಡಲಾಗಿದೆಯೇ ಹೊರತೂ ಪೊಲೀಸರಿಗೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ ಸ್ಪಷ್ಟಪಡಿಸಿದರು.

    ಜನಜಾಗೃತಿ ರ‌್ಯಾಲಿಯಲ್ಲಿ ನಡೆದ ಲಾಠಿಚಾರ್ಜ್ ಕುರಿತಂತೆ ಸುದ್ದಿಗಾರರ ಜತೆ ಮಾತನಾಡಿ, ಭಾರತೀಯ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ರ‌್ಯಾಲಿ ನಡೆಸುತ್ತಿರುವ ಕುರಿತು ಸಮಿತಿಯ ತಿಮ್ಮರಾಯಪ್ಪ ಮತ್ತಿತರರು ಜಿಲ್ಲಾ ಪೊಲೀಸ್ ಇಲಾಖೆಗೆ ಅನುಮತಿ ಕೋರಿದ್ದರು. ನಿಗದಿತ ಮಾರ್ಗದಲ್ಲೇ ರ‌್ಯಾಲಿ ಸಾಗಬೇಕೆಂಬ ಮತ್ತಿತರ ಷರತ್ತುಗಳನ್ನು ಹಾಕಿ ಅನುಮತಿ ನೀಡಲಾಗಿತ್ತು ಎಂದರು.

    2006 ರಿಂದ ಕೋಲಾರ ನಗರದಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ ಕೆಲವು ಮಾರ್ಗಗಳಲ್ಲಿ ಕೆಲವೊಂದು ಸಮುದಾಯಗಳ ರ‌್ಯಾಲಿ ನಿಷೇಧಿಸಲಾಗಿದೆ. ಅದರಂತೆ ಪೊಲೀಸ್ ಇಲಾಖೆ ಆಸ್ಪತ್ರೆ ವೃತ್ತದಿಂದ ಎಂ.ಜಿ.ರಸ್ತೆಗೆ ರ‌್ಯಾಲಿ ಸಾಗಲು ಸೂಚಿಸಿತ್ತು. ಆದರೆ ರ‌್ಯಾಲಿಯಲ್ಲಿದ್ದವರು ಕ್ಲಾಕ್ ಟವರ್ ಕಡೆ ಹೋಗಲು ಬ್ಯಾರಿಕೇಡ್‌ಗಳನ್ನು ಮುರಿದು ನುಗ್ಗಿದ್ದರಿಂದಾಗಿ ಲಘು ಲಾಠಿ ಪ್ರಹಾರ ನಡೆಸಲಾಗಿದೆೆ. ಈ ಸಂಬಂಧ ತನಿಖೆ ನಡೆಸಿ ಪೊಲೀಸರಿಂದ ತಪ್ಪಾಗಿದ್ದರೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್, ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತಿತರರಿದ್ದರು.

    ಕಾವಲು ಕಾಯ್ದ ಡಿಸಿ, ಎಸ್ಪಿ: ಕೋಲಾರ: ಜನಜಾಗೃತಿ ಕಾರ್ಯಕ್ರಮ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಣ್ಗಾವಲಿನಲ್ಲಿ ನಡೆಯಿತು. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಸಭೆಗೆ ಅನುಮತಿ ನಿರಾಕರಿಸಿದ್ದರಿಂದ ಎಂಜಿ ಚೌಕದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಯುವಕರ ಗುಂಪೊಂದು ಕ್ಲಾಕ್ ಟವರ್ ಮೂಲಕ ರ‌್ಯಾಲಿ ನಡೆಸಲೇಬೇಕೆಂದು ಪಟ್ಟು ಹಿಡಿದು ಎಸ್ಸೆನ್ನಾರ್ ಆಸ್ಪತ್ರೆ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಪೊಲೀಸರು ಲಾಠಿ ಬೀಸಿದ್ದರಿಂದ ಕಾರ್ಯಕರ್ತರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

    ಈ ಮಧ್ಯೆ ವೇದಿಕೆ ಕಾರ್ಯಕ್ರಮಕ್ಕೆ ತೆರಳೋಣ ಎಂದು ಮುನಿಸ್ವಾಮಿ ಜನರಲ್ಲಿ ಮನವಿ ಮಾಡಿಕೊಂಡು ವೇದಿಕೆ ಕಾರ್ಯಕ್ರಮದತ್ತ ತೆರಳಿದರೂ ಕಾರ್ಯಕರ್ತರು ತೆರಳದೆ ಲಾಠಿ ಪ್ರಹಾರ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಾಗೂ ಕ್ಲಾಕ್ ಟವರ್‌ಗೆ ಹೋಗಲೇಬೇಕೆಂದು ಪಟ್ಟು ಹಿಡಿದರು. ಡಿಸಿ ಜೆ.ಮಂಜುನಾಥ್ ಮತ್ತು ಎಸ್ಪಿ ಕಾರ್ತಿಕ್ ರೆಡ್ಡಿ ಬ್ಯಾರಿಕೇಡ್ ಬಳಿ ಎರಡು ಗಂಟೆ ಕಾವಲು ನಿಂತು ಮೆರವಣಿಗೆ ಕ್ಲಾಕ್ ಟವರ್ ಬಳಿ ಹೋಗದಂತೆ ತಡೆದಿದರು. ನೆರೆದಿದ್ದ ಗುಂಪು ಪೊಲೀಸರು ಎರಡನೇ ಬಾರಿಗೆ ಚದುರಿಸಿದ ನಂತರವಷ್ಟೇ ತೆರಳಿದರು.

    ಸಭೆ ವಿಳಂಬ: ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಸಭೆ 1.30 ಗಂಟೆ ತಡವಾಗಿ ಆರಂಭವಾಯಿತು. ಪೊಲೀಸರ ಲಾಠಿ ಪ್ರಹಾರದಿಂದ ಜನರು ಚದುರಿದ್ದರು. ಜನ ಸೇರುವವರೆಗೂ ನಾಯಕರು ವೇದಿಕೆ ಬಳಿ ಸುಳಿದಿರಲಿಲ್ಲ. ಕ್ಲಾಕ್ ಟವರ್, ಅಮ್ಮವಾರಿಪೇಟೆ, ಎಂಬಿ ರಸ್ತೆ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಮೆರವಣಿಗೆ ನಡೆಯದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಕಾರ್ಯಕ್ರಮ ಮುಗಿದು ನಾಯಕರೆಲ್ಲ ವಾಪಸಾದ ಮೇಲೂ ಸಂಜೆಯವರೆಗೆ ಡೂಂಲೈಟ್ ವೃತ್ತದಿಂದ ಕ್ಲಾಕ್ ಟವರ್ ಮಾರ್ಗದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ. ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರವಷ್ಟೇ ಅವಕಾಶ ಕಲ್ಪಿಸಲಾಯಿತು.

    ಪೊಲೀಸರ ಕಾರ್ಯವೈಖರಿಗೆ ತರಾಟೆ: ಎಸ್ಸೆನ್ನಾರ್ ಆಸ್ಪತ್ರೆ ವೃತ್ತದಲ್ಲಿ ಆಂಬುಲೆನ್ಸ್‌ಗಳ ಸಂಚಾರಕ್ಕೆ ಹಾಗೂ ಆಸ್ಪತ್ರೆ ಒಳರೋಗಿಗಳಿಗೆ ಕಿರಿಕಿರಿ ಉಂಟಾಯಿತು. ಸಭೆಗೆ ಭಾಗವಹಿಸಲು ದೂರದ ಊರುಗಳಿಂದ ಬಂದವವರನ್ನು ಪೊಲೀಸರು ನಗರ ಹೊರವಲಯದಲ್ಲೇ ತಡೆದರು. ಬೇಸತ್ತ ಜನರು ಸಂಸದ ಎಸ್.ಮುನಿಸ್ವಾಮಿ ಅವರಿಗೆ ದೂರು ನೀಡಿದ್ದರಿಂದ ಪೊಲೀಸರ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

    ಅಂಗಡಿ ಮುಂಗಟ್ಟು ಬಂದ್: ಎಂಜಿ ಚೌಕದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಭಾಷಣವನ್ನು ಜನ ಬಿಸಿಲಲ್ಲೂ ಆಲಿಸಿದರು. ರ‌್ಯಾಲಿ ಹಿನ್ನೆಲೆಯಲ್ಲಿ ಶಾರದಾ ಟಾಕೀಸ್ ರಸ್ತೆ, ಎಂಜಿ ರಸ್ತೆ, ದೊಡ್ಡಪೇಟೆ, ಕಾಳಮ್ಮಗುಡಿ ಬೀದಿ ಸೇರಿ ಅನೇಕ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಬಹುತೇಕ ಮುಚ್ಚಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts