More

    ಬೈಂದೂರು ರುದ್ರಭೂಮಿ ಶಿಥಿಲ, ಹೊಸ ಚೇಂಬರ್ ಅಳವಡಿಸಲು ಆರ್ಥಿಕ ಕೊರತೆ

    ಬೈಂದೂರು: ಬೈಂದೂರು ಹಿಂದು ರುದ್ರಭೂಮಿಯಿ ಅವ್ಯವಸ್ಥೆಯಿಂದ ಸುಸೂತ್ರವಾಗಿ ಶವಸಂಸ್ಕಾರ ಮಾಡಲಾಗದ ಪರಿಸ್ಥಿತಿ ಬಂದೊದಗಿದೆ.

    10 ವರ್ಷ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ರೈಲ್ವೆ ನಿಲ್ದಾಣದ ಅನತಿ ದೂರದಲ್ಲಿ ಎಲ್ಲ ಸೌಕರ್ಯಗಳಿಂದ ಕೂಡಿದ ಹಿಂದು ರುದ್ರಭೂಮಿ ನಿರ್ಮಿಸಲಾಗಿತ್ತು. ಯಡ್ತರೆ, ಬೈಂದೂರು, ಬಿಜೂರು, ಗ್ರಾಮದವರು ಸಹ ಶವ ಸಂಸ್ಕಾರಕ್ಕೆ ಇದೇ ರುದ್ರಭೂಮಿಯನ್ನು ಬಳಸಿಕೊಳ್ಳುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ರಿಪೇರಿ ಕಾಣದ ಪರಿಣಾಮ ಸಂಪೂರ್ಣ ಅವಸಾನದಂಚಿಗೆ ಸಾಗಿದೆ.

    ಇತ್ತೀಚೆಗೆ ಯಡ್ತರೆ ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್ ಬೈಂದೂರು ನೇತೃತ್ವದಲ್ಲಿ ಸಮಾನ ಮನಸ್ಕ ಯುವಕರ ಪಡೆಯೊಂದು ಒಂದು ಎಕರೆಗಿಂತ ಹೆಚ್ಚು ಸ್ಥಳ ಹೊಂದಿದ ಸ್ಮಶಾನವನ್ನು ಸ್ವಚ್ಛಗೊಳಿಸುವ ಮೂಲಕ ಹೊಸರೂಪ ನೀಡಿದರು. ಆದರೆ ಶವ ಸಂಸ್ಕಾರಕ್ಕೆ ಉಪಯೋಗಿಸುವ ಚಿತೆಗೆ (ಸಿಲಿಕಾನ್ ಚೇಂಬರ್) ಆರ್ಥಿಕ ಸಂಪನ್ಮೂಲದ ಕೊರತೆಯಿಂದ ಅದನ್ನು ರಿಪೇರಿ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ದಾನಿಗಳ ನೆರವಿನಿಂದ ಎರಡು ಹೊಸ ಚೇಂಬರ್ ಅಳವಡಿಸುವ ಯೋಜನೆ ಇದೆ ಎಂದು ಗಿರೀಶ್ ಮಾಹಿತಿ ನೀಡಿದ್ದಾರೆ.

    ರುದ್ರಭೂಮಿಯಲ್ಲಿ ಒಮ್ಮೆಲೇ ಎರಡೆರಡು ಶವಗಳು ಬಂದಾಗ ಪರಿಸ್ಥಿತಿ ಹೇಳತೀರದಾಗಿದೆ. ಕಟ್ಟಿಗೆ ಕೊಡುವ ಸಿಲಿಕಾನ್ ಚೇಂಬರ್ ಸಂಪೂರ್ಣ ತುಕ್ಕು ಹಿಡಿದಿದ್ದು, ಇದರ ಕಳಗಡೆ ಕೆಂಪುಕಲ್ಲನ್ನು ಜೋಡಿಸಿ ಅದರ ಮೇಲೆ ಕಟ್ಟಿಗೆ ಇಡಬೇಕಾದ ಸ್ಥಿತಿಯಿದೆ. ಮೂಲ ಸೌಕರ‌್ಯಗಳ ಕೊರತೆಯಿಂದ ಅತ್ಯಂತ ಕಷ್ಟದಿಂದ ಶವಸಂಸ್ಕಾರ ಮಾಡಲಾಗುತ್ತಿದೆ. ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಗಮನಹರಿಸಬೇಕಾಗಿದೆ.
    – ಗಿರೀಶ್ ಬೈಂದೂರು, ಮಾಜಿ ಅಧ್ಯಕ್ಷರು ಗ್ರಾಪಂ ಯಡ್ತರೆ

    ಸುಗಮ ಸಂಸ್ಕಾರಕ್ಕೆ ಅಗತ್ಯ ಅನುಕೂಲ ಸೃಷ್ಟಿಸುವ ಹೊಣೆಯನ್ನು ಕಾಯ್ದೆಗಳು ಸ್ಥಳೀಯಾಡಳಿತಕ್ಕೆ ಒಪ್ಪಿಸಿವೆ. ಹಲವು ಅಂತಹ ಆಡಳಿತಗಳು, ಸ್ವಯಂ ಸೇವಾ ಸಂಘಟನೆಗಳು ಸಕಲ ಸೌಲಭ್ಯಗಳನ್ನು ಒಳಗೊಂಡ ಮಾದರಿ ಚಿತಾಗಾರಗಳನ್ನು ನಿರ್ಮಿಸಿ, ನಿರ್ವಹಿಸುತ್ತಿರುವ ಸುದ್ದಿ ಕೇಳಿಬರುತ್ತದೆ. ಇದು ಎಲ್ಲ ಸ್ಥಳೀಯಾಡಳಿತಗಳ ಕಣ್ತೆರೆಸಿ, ಅವು ಆದ್ಯತೆಯ ಮೇಲೆ ಕಾರ್ಯೋನ್ಮುಖವಾಗಬೇಕಾದುದು ಇಂದಿನ ತುರ್ತು.
    – ಎಸ್. ಜನಾರ್ದನ ಮರವಂತೆ, ಚಿಂತಕ

    ಬೈಂದೂರು ಸ್ಮಶಾನದ ಮೂಲ ಸೌಕರ್ಯ ಕೊರತೆಗಳ ಬಗ್ಗೆ ಗಮನಕ್ಕೆ ಬಂದಿದೆ. ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕ್ರಿಯಾಯೋಜನೆಯಲ್ಲಿ ಈ ಕಾಮಗಾರಿಯನ್ನು ಸೇರಿಸಿ ಸರಿಪಡಿಸಲಾಗುವುದು. ಜತೆಗೆ ತಗ್ಗರ್ಸೆ ಗ್ರಾಮದಲ್ಲಿ ಸುಸಜ್ಜಿತವಾದ ಸ್ಮಶಾನ ನಿರ್ಮಾಣಕ್ಕೆ ಈಗಾಗಲೇ ಒಂದೂವರೆ ಎಕರೆ ಸ್ಥಳವನ್ನು ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು.
    ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts