More

    ಬೈಂದೂರಿಗೆ ಪಟ್ಟಣ ಪಂಚಾಯಿತಿ ಪಟ್ಟ, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

    ಬೈಂದೂರು: ಬೈಂದೂರು, ಯಡ್ತರೆ ಮತ್ತು ಪಡುವರಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಬೈಂದೂರು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸುವ ನಗರಾಭಿವೃದ್ಧಿ ಸಚಿವಾಲಯದ ಪ್ರಸ್ತಾವನೆಗೆ ಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

    ಡಿ.31ರಂದು ಸಚಿವಾಲಯ ಆರಂಭಿಕ ಅಧಿಸೂಚನೆ ಹೊರಡಿಸಿತ್ತು. ಈಗ ಆರು ತಿಂಗಳ ಬಳಿಕದ ಸರ್ಕಾರದ ನಿರ್ಧಾರದಿಂದ ತಾಲೂಕು ಕೇಂದ್ರವಾಗಿರುವ ಬೈಂದೂರು ಪ್ರದೇಶದ ಅಭಿವೃದ್ಧಿಗೆ ವೇಗ ಸಿಗಲಿದೆ. 1971ರಲ್ಲಿ ಬೈಂದೂರು, ಯಡ್ತರೆ ಗ್ರಾಮ ಪಂಚಾಯಿತಿಗಳು ಸೇರಿ ಪುರಸಭೆಯಾಗಿತ್ತು. ಅದರ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳೂ ನಡೆದಿದ್ದವು. ಆದರೆ ಗ್ರಾಮೀಣ ಪ್ರದೇಶಕ್ಕೆ ಸಿಗುವ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಭಾವಿಸಿದ ಇಲ್ಲಿನ ಜನರ ಆಗ್ರಹಕ್ಕೆ ಮಣಿದ ಸರ್ಕಾರ, 1997ರಲ್ಲಿ ಪೂರ್ವ ಸ್ಥಿತಿಗೆ ಮರಳಿಸಿತು.

    ಪ್ರದೇಶದ ಅಭಿವೃದ್ಧಿಯ ವೇಗವರ್ಧನೆಗೆ ಪಟ್ಟಣ ಪಂಚಾಯಿತಿ ಅಥವಾ ಪುರಸಭೆ ಆಗುವುದೇ ಒಳಿತು ಎಂಬ ಭಾವನೆ ಬಂದ ಕಾರಣ ಜನರು ತಮ್ಮ ಪ್ರತಿನಿಧಿಗಳ ಮೇಲೆ ತಂದ ಒತ್ತಡದ ಫಲವಾಗಿ ಈಗ ಪಟ್ಟಣ ಪಂಚಾಯಿತಿ ರೂಪು ತಳೆದಿದೆ.
    ಬೈಂದೂರು ಪಟ್ಟಣ ಪಂಚಾಯಿತಿಯ ವ್ಯಾಪ್ತಿ 54.24 ಚದರ ಕಿ.ಮೀ. ಇರಲಿದೆ. 2011ರ ಜನಗಣತಿ ಪ್ರಕಾರ ಅದರ ಜನಸಂಖ್ಯೆ 24,957 ಮತ್ತು ಜನಸಾಂದ್ರತೆ 433. ವ್ಯಾಪ್ತಿಯ ಕೃಷಿಯೇತರ ಚಟುವಟಿಕೆಗಳ ಉದ್ಯೋಗ ಪ್ರಮಾಣ ಶೇ.55. ಪೂರ್ವದಲ್ಲಿ ಪಶ್ಚಿಮ ಘಟ್ಟ ಮತ್ತು ಯಳಜಿತ ಗ್ರಾಮ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಭಾಗಶಃ ಶಿರೂರು ಗ್ರಾಮ ಮತ್ತು ಪಶ್ಚಿಮಘಟ್ಟ ಹಾಗೂ ದಕ್ಷಿಣದಲ್ಲಿ ಸುಮನಾವತಿ ನದಿ ಈ ಪಟ್ಟಣ ಪಂಚಾಯಿತಿ ಗಡಿಗಳಾಗಿವೆ.

    ಬೈಂದೂರು ಪಟ್ಟಣ ಪಂಚಾಯಿತಿ ಆಗಬೇಕೆನ್ನುವುದು ಕನಸಾಗಿತ್ತು. ಈಗಾಗಲೇ 600 ಕೋಟಿ ರೂಪಾಯಿಗೂ ಹೆಚ್ಚು ಅಧಿಕ ಅನುದಾನ ದೊರೆತಿದೆ. ಪಟ್ಟಣ ಪಂಚಾಯಿತಿ ಅದ ಬಳಿಕ ಇನ್ನಷ್ಟು ಅನುದಾನ ತರಲು ಸಾಧ್ಯವಾಗುತ್ತದೆ. ಬೈಂದೂರು ಅಭಿವೃದ್ಧಿಗೆ ಇದರಿಂದ ಇನ್ನಷ್ಟು ವೇಗ ದೊರೆಯಲಿದೆ. ಮಾತ್ರವಲ್ಲದೆ ಅತ್ಯುತ್ತಮ ಶಕೆ ಆರಂಭವಾಗಲಿದೆ. ಸಂಸದರು ಹಾಗೂ ಮುಖ್ಯಮಂತ್ರಿ ಬೈಂದೂರು ಜನತೆಗೆ ಬಂಪರ್ ಕೊಡುಗೆ ನೀಡಿದ್ದಾರೆ. ಇದು ಬೈಂದೂರು ಪ್ರಗತಿಯ ಮುನ್ನುಡಿ.
    – ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಶಾಸಕ

    ಜನರ ಹಲವು ವರ್ಷಗಳ ಬೇಡಿಕೆ ಕೈಗೂಡುವಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಯತ್ನ ಇದೆ. ಈ ಬೈಂದೂರು ಶೀಘ್ರವಾಗಿ ಅಭಿವೃದ್ಧಿ ಸಾಧಿಸಲಿದೆ.
    – ಗಿರೀಶ್ ಬೈಂದೂರು, ಮಾಜಿ ಅಧ್ಯಕ್ಷ, ಯಡ್ತರೆ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts