More

    ಹಾಜಬ್ಬ, ಹುಸೈನ್, ಸಿದ್ದೀಕ್‌ಗೆ ಬ್ಯಾರಿ ಗೌರವ ಪ್ರಶಸ್ತಿ, 2021ನೇ ಸಾಲಿನ ಪುರಸ್ಕಾರವೂ ಪ್ರಕಟ

    ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮಂಗಳವಾರ 2021ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕೃತರ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

    ಬ್ಯಾರಿ ಭಾಷೆ-ಶಿಕ್ಷಣ ಕ್ಷೇತ್ರದಲ್ಲಿ ಹರೇಕಳ ಹಾಜಬ್ಬ, ಬ್ಯಾರಿ ಕಲೆ-ಸಾಹಿತ್ಯ ಕ್ಷೇತ್ರದಲ್ಲಿ ಹುಸೈನ್ ಕಾಟಿಪಳ್ಳ, ಬ್ಯಾರಿ ಸಂಸ್ಕೃತಿ-ಸಮಾಜಸೇವೆ ಕ್ಷೇತ್ರದಲ್ಲಿ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಶ್ರಫ್ ಅಪೋಲೊ (ಸಂಗೀತ), ಡಾ.ಕೆ.ಎ.ಮುನೀರ್ ಬಾವ (ಸಂಘಟನೆ), ಮರಿಯಮ್ ಫೌಝಿಯ ಬಿ.ಎಸ್ (ಸಾಧಕಿ), ಬ್ಯಾರಿ ಝುಲ್ಫಿ (ಯುವ ಪ್ರತಿಭೆ), ಮುಹಮ್ಮದ್ ಬಶೀರ್ ಉಸ್ತಾದ್(ದಫ್), ಮುಹಮ್ಮದ್ ಫರಾಝ್ ಅಲಿ (ಬಾಲ ಪ್ರತಿಭೆ) ಗೌರವ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಗೌರವ ಪ್ರಶಸ್ತಿ 50 ಸಾವಿರ ರೂ, ಪುರಸ್ಕಾರ 10 ಸಾವಿರ ರೂ.ನಗದು, ಶಾಲು, ಹಾರ, ಸ್ಮರಣಿಕೆ ಮತ್ತು ಪುರಸ್ಕಾರ ಪತ್ರಗಳನ್ನು ಒಳಗೊಂಡಿದೆ. ಕರೊನಾ ಪ್ರಕರಣ ಇಳಿದ ಬಳಿಕ ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಕ್ಷರ ಸಂತ ಹಾಜಬ್ಬ: ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮಂಗಳೂರಿನ ಸ್ಟೇಟ್‌ಬ್ಯಾಂಕ್ ಸರ್ಕಲ್‌ನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ಶಾಲೆ ನಿರ್ಮಿಸಿದವರು.

    ಕವಿ ಹೃದಯದ ಹುಸೈನ್: ಮಂಗಳೂರಿನ ಹುಸೈನ್ ಕಾಟಿಪಳ್ಳ ಹುಸೈನ್ ಕಾಟಿಪಳ್ಳರ ಗೀತೆಗಳು ಎಂಬ ಬ್ಯಾರಿ ಹಾಡುಗಳ ಪುಸ್ತಕ, ಬಿರ್‌ಂದ ಹಾಗೂ ಮೈಲಾಂಜಿ ಎಂಬ ಎರಡು ಬ್ಯಾರಿ ಕವನ ಸಂಕಲನಗಳು, ಅಧ್ಯಕ್ಷರ ರಾಜೀನಾಮೆ ಎಂಬ ಕನ್ನಡ ಕಥಾ ಸಂಕಲನ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಅವರ ಆತ್ಮಕಥನದ ನಿರೂಪಿಸಿದ್ದಾರೆ.

    ವೈದ್ಯರಾಗಿ ಸಮಾಜಮುಖಿ ಕಾರ್ಯ: ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರ್ 20 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿದ್ದಾರೆ. ಮಂಗಳೂರಿನ ಅಡ್ಡೂರು ಎಂಬಲ್ಲಿರುವ ಕ್ಲಿನಿಕ್‌ನಲ್ಲಿ ಕರೊನಾ ಸಂಕಷ್ಟದ ದಿನಗಳಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಹಾಗೂ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

    ಅಶ್ರಫ್ ಅಪೋಲೊ ಕಲ್ಲಡ್ಕ (ಬ್ಯಾರಿ ಸಂಗೀತ): ಕಲ್ಲಡ್ಕದ ಅಶ್ರಫ್ ಅಪೋಲೊ ಕವಿ ಮತ್ತು ಗಾಯಕರು. 60ಕ್ಕಿಂತ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಬ್ಯಾರಿ, ಕನ್ನಡ, ತುಳು, ಹಿಂದಿ ಸಹಿತ 4,500ಕ್ಕಿಂತ ಹೆಚ್ಚಿನ ಗೀತೆಗಳನ್ನು ಹಾಡಿದ್ದಾರೆ. 65ರಷ್ಟು ಆಡಿಯೋ ಕ್ಯಾಸೆಟ್ ಬಿಡುಗಡೆಯಾಗಿವೆ. 17 ಬ್ಯಾರಿ ಹಾಡುಗಳನ್ನು ಹೊಸ ರಾಗ ಸಂಯೋಜನೆಯಲ್ಲಿ ಹಾಡಿದ್ದಾರೆ.

    ಸಂಘಟನಾ ಶಕ್ತಿಯ ಬಾವಾ: ಮಂಜೇಶ್ವರ ಕಡಂಬಾರಿನ ಡಾ.ಕೆ.ಎ.ಮುನೀರ್ ಬಾವಾ ಕಿರಿಯ ವಯಸ್ಸಿನಲ್ಲಿ ಯಶಸ್ವಿ ಉದ್ಯಮಿಯಾದವರು. 2013ರಲ್ಲಿ ದ.ಕ.ಜಿಲ್ಲಾ ವಕ್ಫೃ್ ಬೋರ್ಡ್ ಉಪಾಧ್ಯಕ್ಷರಾದರು. ಕೀನ್ಯಾದಲ್ಲಿ ಜರುಗಿದ 10ನೇ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ಇವರಿಗೆ ಸಂದಿದೆ.

    ಮಕ್ಕಳ ಶಿಕ್ಷಣಕ್ಕೆ ಹೆಗಲು ನೀಡಿದ ಮರಿಯಮ್: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಶೈಕ್ಷಣಿಕ ಹಿಂಜರಿಕೆ, ಮಾರ್ಗದರ್ಶನದ ಕೊರತೆಯನ್ನು ನೀಗಿಸಲು ಆರಂಭದಲ್ಲಿ ಮರಳಿ ಬಾ ಶಾಲೆ ಸ್ಥಾಪಿಸಿ ಯಶಸ್ಸು ಕಂಡವರು ಕಡಬದ ಮರಿಯಮ್ ಫೌಝಿಯ ಬಿ.ಎಸ್.

    ಬ್ಯಾರಿ ಝುಲ್ಫಿ: ಮಂಗಳೂರಿನ ಬ್ಯಾರಿ ಝುಲ್ಫಿ ಬ್ಯಾರಿ ಭಾಷೆಯಲ್ಲಿ ಹಲವು ವಿಡಿಯೋ, ಆಡಿಯೋ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾರಿ ಭಾಷೆಯಲ್ಲಿ ನೂರಾರು ಮನರಂಜನಾ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ.

    ದಫ್ ತರಬೇತಿ ನೀಡಿದ ಉಸ್ತಾದ್: ರಾಜ್ಯದ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಫ್ ತರಬೇತಿ ನೀಡಿದ ಸಾಧನೆ ಮಾಡಿದವರು ಉಡುಪಿಯ ಮುಹಮ್ಮದ್ ಬಶೀರ್ ಉಸ್ತಾದ್. ಸೌದಿ ಅರೇಬಿಯಾದಲ್ಲಿಯೂ ತರಬೇತಿ ನೀಡಿದ್ದಾರೆ. ಹಲವು ಭಾಷೆಗಳಲ್ಲಿ ಗೀತೆ ರಚಿಸಿ, ಹಾಡಿರುವ ಇವರಿಗೆ 100ಕ್ಕಿಂತ ಹೆಚ್ಚು ಪ್ರಶಸ್ತಿಗಳು ಲಭಿಸಿವೆ.

    ವೇಗದ ಸ್ಕೇಟಿಂಗ್ ಪಟು ಅಲಿ: ಮುಹಮ್ಮದ್ ಫರಾಝ್ ಅಲಿ ಮಂಗಳೂರಿನಲ್ಲಿ ಆರನೇ ತರಗತಿ ವಿದ್ಯಾರ್ಥಿ. ರಾಷ್ಟ್ರೀಯ ಮಟ್ಟದ ಸ್ಪೀಡ್ ಸ್ಕೇಟರ್. ದಕ್ಷಿಣ ಭಾರತದ ಏಳು ರಾಜ್ಯಗಳನ್ನು ಒಳಗೊಂಡು ಬೆಳಗಾವಿಯಲ್ಲಿ ನಡೆದ ಸಿಬಿಎಸ್‌ಸಿ ಸೌತ್ ರೆನ್ ಸ್ಕೂಲ್ ಗೇಮ್ಸ್‌ನಲ್ಲಿ ಚಿನ್ನ, ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಸ್ಕೇಟಿಂಗ್‌ನಲ್ಲಿ ಎರಡು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts