More

    ವಿಜಯೇಂದ್ರಗೆ ಮಸ್ಕಿ ಅಸೆಂಬ್ಲಿ ಬೈಎಲೆಕ್ಷನ್ ಜವಾಬ್ದಾರಿ ವಹಿಸಿದ ಬಿಜೆಪಿ

    ಶಿವಮೊಗ್ಗ: ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ವಹಿಸಲಾಗಿದೆ.

    ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರಿಗೆ ಈ ವಿಷಯವನ್ನು ಸ್ವತಃ ವಿಜಯೇಂದ್ರ ಅವರೇ ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಕಳೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದಂತೆ ಈ ಬಾರಿಯೂ ಬೆಳಗಾವಿ ಲೋಕಸಭೆ ಮತ್ತು ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಳೆದ 15 ಉಪಚುನಾವಣೆಗಳಲ್ಲಿ 12 ಕಡೆ ಬಿಜೆಪಿ ಗೆಲುವು ಸಾಧಿಸಿದೆ. ಆನಂತರ ಶಿರಾ ಮತ್ತು ಆರ್‌ಆರ್ ನಗರ ಉಪಚುನಾವಣೆಯಲ್ಲೂ ಭರ್ಜರಿ ಗೆಲುವು ಸಿಕ್ಕಿತು. ಅದೇ ಉತ್ಸಾಹದೊಂದಿಗೆ ಮುಂದಿನ ಮೂರು ಉಪಚುನಾವಣೆಗಳಲ್ಲಿ ಕಾರ್ಯತಂತ್ರ ರೂಪಿಸಲಾಗುವುದು. ಇದು ಕೇವಲ ಉಪ ಚುನಾವಣೆಗೆ ಸೀಮಿತವಾಗದೇ ಮುಂದಿನ ವಿಧಾನಸಭೆ ಚುನಾವಣೆಗೂ ಗೆಲುವಿನ ಯಶಸ್ಸನ್ನು ವಿಸ್ತರಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಸೋಲಿಸುವುದೇ ನಮ್ಮ ಗುರಿ ಎಂದರು.

    ತಮ್ಮನ್ನು ಟೀಕಿಸುತ್ತಿರುವವರಿಗೆ ವಿಜಯೇಂದ್ರ ಕವಿಸಾಲನ್ನು ಉಲ್ಲೇಖಿಸಿ ಉತ್ತರ ನೀಡಿದರು. ಕಾಯಲು ಮೇಲೊಬ್ಬ ಇರುವಾಗ ಕಾಯಕವಿಲ್ಲದವನ ಕೊಂಕು ಮಾತಿಗೆ ಕೊರಗುವುದರಲ್ಲಿ ಯಾವುದೇ ಅರ್ಥವಿಲ್ಲ. ವೈಯಕ್ತಿಕ ಟೀಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ, ಕೆಲಸ, ಪಕ್ಷ ಸಂಘಟನೆ ಮೂಲಕ ನನ್ನದೇ ಆದ ಚೌಕಟ್ಟಿನಲ್ಲಿ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಸರ್ಕಾರಕ್ಕೆ ಸಂಬಂಧಿಸಿದ ಟೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ಕಾರ್ಯಕರ್ತನಾಗಿ ಸರ್ಕಾರದ ಆದೇಶಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಮೀಸಲಾತಿ ಹೋರಾಟದ ಬಗ್ಗೆ ಈಗಾಗಲೇ ಕಾನೂನು ಚೌಕಟ್ಟು ಮತ್ತು ಸಂವಿಧಾನದ ಆಶಯದಂತೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಕೂಡ ಸ್ಪಷ್ಟಪಡಿಸಿದ್ದಾರೆ. ಅದರಲ್ಲಿ ಅವರು ಯಶಸ್ವಿಯೂ ಆಗಲಿದ್ದಾರೆ ಎಂದರು.

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಹಲವಾರು ದಶಕಗಳ ಕನಸಾಗುವ ದಿನಗಳು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕೆ ಕಂಕಣಬದ್ಧರಾಗಿದ್ದಾರೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಮರ್ಪಣಾ ನಿಧಿ ಸಂಗ್ರಹವನ್ನು ನಾಜಿಗಳಿಗೆ ಹೋಲಿಕೆ ಮಾಡಿದ್ದು ದುರದೃಷ್ಟಕರ. ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಕಣ್ಮರೆಯಾಗಿದ್ದ ಕುಮಾರಸ್ವಾಮಿ, ಈಗ ತಾವಿರುವುದನ್ನು ನೆನಪಿಸಿಕೊಳ್ಳಲು ಇಂತಹ ಹೇಳಿಕೆ ನೀಡಿದ್ದಾರೆ. ಸರ್ಕಾರ ಸರಿದಾರಿಯಲ್ಲಿ ಹೋಗುತ್ತಿದೆ. ಟೀಕೆ ಮಾಡುವುದು ಪ್ರತಿಪಕ್ಷಗಳ ಕೆಲಸ. ಅದನ್ನೇ ಮುಂದುವರಿಸಿದ್ದಾರೆ ಎಂದರು.

    ವಿವಾದಿತ ಭೂಮಿಯ ರಾಮ ಮಂದಿರಕ್ಕೆ ದುಡ್ಡು ಕೊಡಲ್ಲ: ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts