More

    ಉಪಸಮರ ಅಖಾಡಕ್ಕೆ ಸಜ್ಜು

    * ಶಿರಾ, ರಾಜರಾಜೇಶ್ವರಿನಗರ ಉಪ ಚುನಾವಣೆಗೆ ಮುಹೂರ್ತ *ಮೂರೂ ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

    ಮಿನಿ ಸಮರವೆಂದೇ ಪರಿಗಣಿಸಲ್ಪಟ್ಟಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆಗೆ ಮೂರೂ ರಾಜಕೀಯ ಪಕ್ಷಗಳು ಸಜ್ಜಾಗಿವೆ. ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಹೀಗೆ ಹತ್ತಾರು ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಮೂರು ಪಕ್ಷದ ಮುಖಂಡರಿಗೂ ಈ ಚುನಾವಣೆ ಸವಾಲಿನದ್ದೆ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹಿಡಿತದಲ್ಲಿದ್ದ ಎರಡು ಕ್ಷೇತ್ರಗಳನ್ನು ಕಿತ್ತುಕೊಳ್ಳಲು ಬಿಜೆಪಿ ತಂತ್ರಗಾರಿಕೆ ಹೆಣೆಯುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ.

    ಅಂದಾಜು ಅಂಕಿ ಅಂಶ
    ಜಾತಿ ಲೆಕ್ಕಾಚಾರ

    ಶಿರಾ
    ಕುಂಚಿಟಿಗ ಒಕ್ಕಲಿಗ 50 ಸಾವಿರ
    ಹಳ್ಳಿಕಾರ ಒಕ್ಕಲಿಗ 8 ಸಾವಿರ
    ಎಸ್ಸಿ 45 ಸಾವಿರ
    ಗೊಲ್ಲ 20 ಸಾವಿರ
    ಮುಸ್ಲಿಂ 20 ಸಾವಿರ
    ಎಸ್ಟಿ 16 ಸಾವಿರ
    ಕುರುಬ 17 ಸಾವಿರ
    ಲಿಂಗಾಯತ 5 ಸಾವಿರ
    ಇತರ 35 ಸಾವಿರ

    ರಾಜರಾಜೇಶ್ವರಿ ನಗರ
    ಒಕ್ಕಲಿಗ 1.10 ಲಕ್ಷ
    ದಲಿತ 70 ಸಾವಿರ
    ಹಿಂದುಳಿದ 70 ಸಾವಿರ
    ಕುರುಬ 50 ಸಾವಿರ
    ಲಿಂಗಾಯತ 45 ಸಾವಿರ
    ಮುಸ್ಲಿಂ 25 ಸಾವಿರ
    ಇತರ 80 ಸಾವಿರ

    ಎರಡೂ ಕ್ಷೇತ್ರ ಉಳಿಸಿಕೊಳ್ಳಲು ಕೈ ಹೋರಾಟ

    ಸಂಭಾವ್ಯ ಅಭ್ಯರ್ಥಿಗಳು

    ಶಿರಾ: ಟಿ.ಬಿ.ಜಯಚಂದ್ರ
    ಆರ್​ಆರ್​ನಗರ: ರಾಜ್​ಕುಮಾರ್, ಬಾಲಕೃಷ್ಣ, ಹನುಮಂತರಾಯಪ್ಪ

    ಉಪಚುನಾವಣೆಗೆ ಕಾಂಗ್ರೆಸ್ ಒಂದಷ್ಟು ತಾಲೀಮು ನಡೆಸಿದೆ. ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಪಕ್ಷದ ಪ್ರಮುಖರೊಂದಿಗೆ ಈಗಾಗಲೆ ಸಭೆ ನಡೆಸಿ ಆರ್​ಆರ್ ನಗರ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂದು ಗುರಿ ನೀಡಿದ್ದಾರೆ. ಶಿರಾ ಕ್ಷೇತ್ರ ಸಂಬಂಧ ಪಕ್ಷದ ನಾಯಕರ ಒಂದು ತಂಡ ಸಮೀಕರಣ ಕೆಲಸ ನಡೆಸಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 2018ರಲ್ಲಿ ಮುನಿರತ್ನ ಗೆಲುವು ಸಾಧಿಸಿದ್ದರು. ಈಗ ಅವರು ಕಾಂಗ್ರೆಸ್​ನಲ್ಲಿಲ್ಲ, ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ನಿಚ್ಚಳ. ಹೀಗಾಗಿ ಪಕ್ಷ ಈ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ. ಆಕಾಂಕ್ಷಿಗಳ ಜತೆಗೆ ಒಂದು ಸುತ್ತಿನ ಚರ್ಚೆಯನ್ನೂ ನಡೆಸಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜ್​ಕುಮಾರ್, ಮಾಜಿ ಶಾಸಕ ಮಾಗಡಿ ಬಾಲಕೃಷ್ಣ, ಹನುಮಂತರಾಯಪ್ಪ ಹೆಸರು ಚಲಾವಣೆಯಲ್ಲಿದೆ. ಪಕ್ಷ ನಿಷ್ಠ ರಾಜ್​ಕುಮಾರ್ ಪರ ಬಹುತೇಕ ನಾಯಕರ ಒಲವಿದೆ ಎಂದು ಹೇಳಲಾಗುತ್ತಿದೆ. ಶಿರಾದಲ್ಲಿ ಕಳೆದ ಬಾರಿ ಸೋಲುಂಡ ಟಿ.ಬಿ.ಜಯಚಂದ್ರ ಅವರನ್ನೇ ಕಣಕ್ಕಿಳಿಸಲು ಪಕ್ಷ ತೀರ್ವನಿಸಿದೆ. ಮಧುಗಿರಿ ಶಾಸಕ ರಾಜಣ್ಣ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಅವರ ಮನವೊಲಿಸಲಾಗಿದೆ. ಈ ಹಿಂದೆ ಇದು ಕಾಂಗ್ರೆಸ್ ಕ್ಷೇತ್ರವಾಗಿದ್ದು, 2018ರ ಚುನಾವಣೆಯಲ್ಲಿ ಜಯಚಂದ್ರ ಸೋಲುಂಡಿದ್ದರು. ವಿಶೇಷವೆಂದರೆ, ಮಸ್ಕಿ ಸೇರಿ ಮೂರು ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಹುಡುಕಲು ಕಾಂಗ್ರೆಸ್ ಒಂದು ತಿಂಗಳ ಹಿಂದೆಯೇ ಕಸರತ್ತು. ಜತೆಗೆ ಅಲ್ಲಿನ ಜಾತಿ ಲೆಕ್ಕಾಚಾರ, ಎದುರಾಳಿಗಳ ಋಣಾತ್ಮಕ ಅಂಶಗಳನ್ನು ಪಟ್ಟಿ ಮಾಡಿಕೊಂಡು ಚಿತ್ರಣವನ್ನು ಕಣ್ಣಮುಂದೆ ಸ್ಪಷ್ಟಮಾಡಿಕೊಂಡಿದೆ. ಬುಧವಾರ ಪ್ರಮುಖ ನಾಯಕರ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ದೆಹಲಿಗೆ ಕಳಿಸಲು ಸಿದ್ಧತೆಯೂ ನಡೆದಿದೆ. ವಾರದೊಳಗೆ ಎರಡು ಕ್ಷೇತ್ರಕ್ಕೆ ಜವಾಬ್ದಾರಿ ಹಂಚಿಕೆ ನಡೆಯುತ್ತದೆ. ಆರ್.ಆರ್.ನಗರದಲ್ಲಿ ವಾರ್ಡ್ ಮಟ್ಟಕ್ಕೊಬ್ಬ, ಶಿರಾದಲ್ಲಿ ಹೋಬಳಿಗೊಬ್ಬ ಶಾಸಕ, ಮಾಜಿ ಸಚಿವರಿಗೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.

    ಸಂಖ್ಯಾಬಲ ವೃದ್ಧಿಗೆ ಕಮಲ ಕಾರ್ಯತಂತ್ರ

    ಆಕಾಂಕ್ಷಿಗಳು

    ಶಿರಾ : ಎಸ್.ಆರ್.ಗೌಡ, ಮಂಜುನಾಥ ಗೌಡ, ರಾಜಶೇಖರ್, ಬಿ.ಸುರೇಶಗೌಡ, ತಿಪ್ಪೇಸ್ವಾಮಿ, ಶ್ರೀನಿವಾಸ್
    ಆರ್​ಆರ್ ನಗರ :  ಮುನಿರತ್ನ, ಮುನಿರಾಜುಗೌಡ

    ಉಪಚುನಾವಣೆ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಚಟುವಟಿಕೆಗಳು ಮತ್ತಷ್ಟು ಬಿರುಸಾಗಿವೆ. ಈ ಬಾರಿ ಶಿರಾ ಕ್ಷೇತ್ರದಲ್ಲಿ ಖಾತೆ ತೆರೆಯಬೇಕೆಂಬ ಉಮೇದು ಕಮಲ ಪಡೆಯದ್ದಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ನೆರವಿಗೆ ಬರುವ ಆಶಾಭಾವ ಹೊಂದಿದೆ. ಹೀಗಾಗಿ ಪ್ರಬಲ ಅಭ್ಯರ್ಥಿ ಇಲ್ಲವೆ ವ್ಯವಸ್ಥಿತ ರಣತಂತ್ರದ ಮೂಲಕ ಗೆದ್ದು, ವಿಧಾನಸಭೆಯಲ್ಲಿ ಸಂಖ್ಯಾಬಲ ವೃದ್ಧಿಸಿಕೊಳ್ಳುವ ಗುರಿಯಿಟ್ಟುಕೊಂಡಿದೆ. ಶಾಸಕ ಬಿ.ಸತ್ಯನಾರಾಯಣ ನಿಧನರಾದ ಅನುಕಂಪ, ಕಳೆದ ಬಾರಿ ಸೋತ ಅನುಕಂಪದ ಪೈಪೋಟಿ ಮಧ್ಯೆ ಪಕ್ಷಕ್ಕಿರುವ ವರ್ಚಸ್ಸು ಮೇಲುಗೈ ಸಾಧಿಸಲಿದೆ ಎಂಬ ಲೆಕ್ಕಾಚಾರವಿದೆ. ಇದೇ ಕಾರಣಕ್ಕಾಗಿ ಟಿಕೆಟ್​ಗಾಗಿ 5-6 ಆಕಾಂಕ್ಷಿಗಳು ಪೈಪೋಟಿಗೆ ಇಳಿದಿದ್ದಾರೆ. ಆದರೆ, ನಾಯಕರ ಮನದಲ್ಲಿ ಏನಿದೆ ಎಂದು ತಿಳಿಯದೆ ಪ್ರಭಾವಿಗಳ ಮೊರೆ ಹೋಗಿದ್ದಾರೆ. ಕಳೆದ ಬಾರಿ ಸೋತ ಎಸ್.ಆರ್.ಗೌಡ ಸೇರಿ ಮಂಜುನಾಥ ಗೌಡ, ರಾಜಶೇಖರ್, ತುಮಕೂರು ಜಿಲ್ಲಾಧ್ಯಕ್ಷ ಬಿ.ಸುರೇಶಗೌಡ, ರಾಜ್ಯ ಒಬಿಸಿ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಮುಖಂಡರು ಹಾಗೂ ಕಾರ್ಯಕರ್ತರ ಮಟ್ಟದ ರ್ಚಚಿತ ಹೆಸರುಗಳು ಹೊರತಾಗಿ ಬೇರೊಬ್ಬರು ಕಣಕ್ಕಿಳಿದರೂ ಅಚ್ಚರಿಯಿಲ್ಲ.

    ಮುನಿರತ್ನ ನಿರಾಳ: ಕೊನೆಗೂ ಚುನಾವಣೆ ನಿಗದಿಯಾಯಿತಲ್ಲ ಎಂದು ಆರ್.ಆರ್.ನಗರ ಪ್ರತಿನಿಧಿಸಿದ್ದ ಮುನಿರತ್ನ ನಿರಾಳರಾಗಿದ್ದಾರೆ. ಅದಕ್ಕೆ ಇರಬೇಕು, ತಕ್ಷಣವೇ ಮೈಸೂರಿಗೆ ಹೊರಟು ಚಾಮುಂಡಿ ಬೆಟ್ಟ ಹತ್ತಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್​ನಿಂದ ಗೆದ್ದಿದ್ದ ‘ಆಪರೇಷನ್ ಕಮಲ’ ಫಲಾನುಭವಿ ದೀರ್ಘಾವಧಿ ಅತಂತ್ರ ಸ್ಥಿತಿಯ ನೋವಿನಿಂದ ಹೊರ ಬಂದಿದ್ದು, ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂಬ ಅಚಲ ನಂಬಿಕೆ ಹೊಂದಿದ್ದಾರೆ. ಟಿಕೆಟ್ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಬುಧವಾರ ಭೇಟಿಯಾಗಿ ರ್ಚಚಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಸಹಿತ ರಾಜ್ಯ ನಾಯಕರ ಒಲವು ಗಿಟ್ಟಿಸಿಕೊಳ್ಳಲು ಯೋಚಿಸಿದ್ದು, ಈ ವಿಷಯದಲ್ಲಿ ಆಪ್ತ ಸಚಿವರು ಬೆನ್ನಿಗೆ ನಿಲ್ಲುವುದು ನಿಶ್ಚಿತ. ಕಳೆದ ಬಾರಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಮುನಿರಾಜುಗೌಡ ಮನವೊಲಿಸುವುದು ಬಿಎಸ್​ವೈಗೆ ಸ್ವಲ್ಪಮಟ್ಟಿಗೆ ತಲೆನೋವಾಗಲಿದೆ ಎಂದು ಮೂಲಗಳು ಹೇಳಿವೆ.

    ಅ.1ರಿಂದ 8 ನಾಮಪತ್ರ ಸಲ್ಲಿಕೆ

    ಅ.9 ಅರ್ಜಿ ಪರಿಶೀಲನೆ

    ಅ.12 ಉಮೇದುವಾರಿಕೆ ಹಿಂಪಡೆಯಲು ಕಡೆ ದಿನ

    ಅ.28 ಮತದಾನ

    ನ. 2 ಫಲಿತಾಂಶ

    ಶಿರಾ ಕ್ಷೇತ್ರದಲ್ಲಿ ಸೆಣಸಾಟ ರಾಜರಾಜೇಶ್ವರಿ ಪರದಾಟ

    ಆಕಾಂಕ್ಷಿಗಳು

    ಶಿರಾ : ಅಮ್ಮಾಜಮ್ಮ ಸತ್ಯನಾರಾಯಣ, ಸತ್ಯಪ್ರಕಾಶ್, ಆರ್.ಉಗ್ರೇಶ್

    ಆರ್​ಆರ್ ನಗರ : ಆರ್.ಪ್ರಕಾಶ್, ಜಿ.ಎಚ್. ರಾಮಚಂದ್ರ

    ಉಪಚುನಾವಣೆ ಆಖಾಡಕ್ಕಿಳಿಯಲು ಜೆಡಿಎಸ್ ಸನ್ನದ್ಧವಾಗಿದೆ. ತನ್ನ ಹಿತದಲ್ಲಿದ್ದ ಶಿರಾ ಉಳಿಸಿಕೊಳ್ಳಲು ಜೆಡಿಎಸ್ ಬೆವರು ಹರಿಸಲು ಸಜ್ಜಾಗಿದೆ. ಮೈತ್ರಿ ಸರ್ಕಾರ ಪತನದ ನಂತರ ಜೆಡಿಎಸ್​ಗೆ ಭವಿಷ್ಯವಿಲ್ಲ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಚುನಾವಣೆ ಫಲಿತಾಂಶದ ಮೂಲಕ ಪ್ರತ್ಯುತ್ತರ ನೀಡಬೇಕಾದ ಹೊಣೆಗಾರಿಕೆ ಜೆಡಿಎಸ್ ಮೇಲಿದೆ. ಹೀಗಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಶಿರಾ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಬಿಜೆಪಿಗೆ ಶಿರಾದಲ್ಲಿ ಗಟ್ಟಿ ನೆಲೆ ಇಲ್ಲವೆಂದರೂ ಸರ್ಕಾರ ಇರುವುದರಿಂದ ಸರ್ಕಸ್ ಮಾಡುವ ಸಾದ್ಯತೆಗಳಿವೆ. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಾಥ್ ನೀಡಿರುವುದರಿಂದ ಜೆಡಿಎಸ್​ಗೆ ಈ ಉಪ ಸಮರ ಸವಾಲಾಗಿದೆ. ಅನುಕಂಪದ ಅಲೆ ನೆಚ್ಚಿಕೊಳ್ಳಬೇಕೆ? ಅಥವಾ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವಾಲೊಡ್ಡುವ ಅಭ್ಯರ್ಥಿಯನ್ನು ಕಣಕ್ಕಿಳಸಬೇಕೆ ಎಂಬ ಗೊಂದಲದಲ್ಲಿ ಜೆಡಿಎಸ್ ಮುಖಂಡರಿದ್ದಾರೆ. ಈಗಾಗಲೇ ಶಿರಾ ಮುಖಂಡರ ಜತೆ ದೇವೇಗೌಡರು ಸಭೆ ನಡೆಸಿದ್ದಾರೆ. ಬುಧವಾರ ಕೂಡ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲು ಸಭೆ ಕರೆದಿದ್ದು, ಎಚ್.ಡಿ.ಕುಮಾರಸ್ವಾಮಿ ಕೂಡ ಪಾಲ್ಗೊಳ್ಳಲಿದ್ದಾರೆ. ಬಿ.ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮ ಅಥವಾ ಪುತ್ರ ತಾಪಂ ಮಾಜಿ ಅಧ್ಯಕ್ಷ ಸತ್ಯಪ್ರಕಾಶ್ ಹಾಗೂ ಶಿರಾ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

    ರಾಜರಾಜೇಶ್ವರಿ ನಗರದಲ್ಲಿ ಕಳೆದ ಬಾರಿ ಜಿ.ಎಚ್.ರಾಮಚಂದ್ರಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಜೆಡಿಎಸ್ ಬೆಂಗಳೂರು ನಗರ ಅಧ್ಯಕ್ಷ ಆರ್.ಪ್ರಕಾಶ್ ಆಕಾಂಕ್ಷಿಯಾಗಿದ್ದಾರೆ. ಇವರಲ್ಲದೆ ಕೆಲವು ಹೊಸ ಮುಖಗಳೂ ಟಿಕೆಟ್ ನಿರೀಕ್ಷಿಸುತ್ತಿದ್ದು, ಕುಮಾರಸ್ವಾಮಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಿಜೆಪಿ ಜತೆ ಒಳ ಒಪ್ಪಂದ? : ಶಿರಾದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಜೆಡಿಎಸ್​ಗೆ ಕಾಂಗ್ರೆಸ್ಸೇ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಹಾಗಾಗಿ ಶಿರಾದಲ್ಲಿ ಬಿಜೆಪಿ ಬೆಂಬಲ ಪಡೆಯಲು, ಇದಕ್ಕೆ ಪ್ರತಿಯಾಗಿ ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸುವ ಕುರಿತು ಜೆಡಿಎಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

    ನಾಯಕತ್ವಕ್ಕೆ ಉಪಗೆಲುವು ಅನಿವಾರ್ಯ
    ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಈ ಉಪಚುನಾವಣೆ ಹೊಸ ಜವಾಬ್ದಾರಿ ತೆಗೆದುಕೊಂಡ ನಂತರ ಎದುರಾಗಿರುವ ಮೊದಲ ಅಗ್ನಿಪರೀಕ್ಷೆಯಾಗಿದೆ. ಇಬ್ಬರು ನಾಯಕರಿಗೂ ಚುನಾವಣೆ ಎದುರಿಸಿಯೂ ಗೊತ್ತು, ತಮ್ಮದಲ್ಲದ ಕ್ಷೇತ್ರಗಳಲ್ಲೂ ತಂತ್ರಗಾರಿಕೆ ಮಾಡಿದ ಅನುಭವವೂ ಇದೆ. ಆದರೆ, ಪಕ್ಷದ ಅಧ್ಯಕ್ಷರು ಮತ್ತು ಉಸ್ತುವಾರಿಯಾಗಿ ಜವಾಬ್ದಾರಿ ತೆಗೆದುಕೊಂಡ ಮೇಲೆ ಎದುರಾಗುತ್ತಿರುವ ಮೊದಲ ಚುನಾವಣೆ ಆಗಿರುವುದರಿಂದ ಇಲ್ಲಿನ ಫಲಿತಾಂಶ ಅವರ ನಾಯಕತ್ವದ ಅವಲೋಕನವಾಗಲಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದರೆ ವರ್ಚಸ್ಸು ಹೆಚ್ಚಲಿದೆ, ಒಂದು ಉತ್ತಮ ಶುಭಾರಂಭವೂ ಸಿಗಲಿದೆ. ಉಪ ಚುನಾವಣೆಗಳಲ್ಲಿ ಆಡಳಿತಾರೂಢ ಸರ್ಕಾರ ಗೆಲ್ಲಲಿದೆ ಎಂಬ ಸಲೀಸು ಅಭಿಪ್ರಾಯವಿದೆ. ಇದನ್ನು ಸುಳ್ಳಾಗಿಸುವ ಅನಿವಾರ್ಯತೆ ಈ ಹೊಸ ಜೋಡಿಗಿದೆ. ಜತೆಗೆ ಡಿ.ಕೆ.ಶಿವಕುಮಾರ್ ಉಪಚುನಾವಣೆ ನಡೆದ ಸಂದರ್ಭದಲ್ಲೆಲ್ಲ ರಣಬೇಟೆಗಾರನಂತೆ ಬಿಂಬಿಸಿಕೊಂಡು ಒಂದು ಸಾಧನವಾಗಿ ಬಳಕೆಯಾಗುತ್ತಿದ್ದರು. ಉಪಚುನಾವಣೆಗಳ ಫಲಿತಾಂಶ ಏನೇ ಆಗಿರಬಹುದು, ಡಿಕೆಶಿ ಪ್ರವೇಶವನ್ನು ವಿಶೇಷ ರೀತಿಯಲ್ಲಿ ತೋರಿಸಲಾಗುತ್ತಿತ್ತು. ಈ ಬಾರಿ ಮಾತ್ರ ಅವರ ನೇತೃತ್ವದಲ್ಲೇ ಚುನಾವಣೆ ನಡೆಯುತ್ತಿದೆ. ಅವರಿಗೆ ಎರಡು ಕ್ಷೇತ್ರ ಉಳಿಸಿಕೊಳ್ಳುವ ವಿಶೇಷ ಹೊಣೆಗಾರಿಕೆಯಂತೂ ಇದೆ.

    ಕಾಂಗ್ರೆಸ್​ನದು ಈ ಕತೆಯಾದರೆ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡು ರೀತಿಯಲ್ಲಿ ಉಪಚುನಾವಣೆ ಮುಖ್ಯವಾಗಿದೆ. ತಮ್ಮನ್ನು ನಂಬಿ ಕಾಂಗ್ರೆಸ್ ಬಿಟ್ಟು ಅನರ್ಹತೆ ಪಟ್ಟ ಕಟ್ಟಿಕೊಂಡ ಮುನಿರತ್ನಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರಬೇಕಿದೆ. ಹಾಗೆಯೇ ನೆಲೆ ಇಲ್ಲದ ಶಿರಾದಲ್ಲಿ ಫಲಿತಾಂಶವನ್ನು ತಮ್ಮತ್ತ ತಿರುಗಿಸಿಕೊಳ್ಳಬೇಕಿದೆ. ಸಾಮಾನ್ಯವಾಗಿ ಉಪಚುನಾವಣೆ ಫಲಿತಾಂಶವನ್ನು ಸರ್ಕಾರದ ಕಾರ್ಯವೈಖರಿಯ ಮಾಪನವಾಗಿ ರಾಜಕೀಯ ನಾಯಕರು ಅಳೆಯುತ್ತಾರೆ. ಹೀಗಾಗಿ ಈ ಎರಡು ಸ್ಥಾನ ಗೆಲ್ಲಿಸಿಕೊಂಡು ತಮ್ಮ ಸರ್ಕಾರ ಪರ ಜನಾಭಿಪ್ರಾಯವಿದೆ ಎಂದು ಸಿಎಂ ತೋರಿಸಿಕೊಳ್ಳಬೇಕಿದೆ. ಈ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಪಾತ್ರ ನಗಣ್ಯ. ಇದಿಷ್ಟೇ ಅಲ್ಲದೆ, ಸರ್ಕಾರದ ಮೇಲಿನ ತಮ್ಮ ಹಿಡಿತವನ್ನು ಇನ್ನಷ್ಟು ಭದ್ರ ಮಾಡಿಸಿಕೊಳ್ಳಲು ಹಾಗೂ ಪಕ್ಷದೊಳಗಿನ ‘ಬದಲಾವಣೆ’ ಗುಸುಗುಸುಗೆ ಬ್ರೇಕ್ ಹಾಕಲು ಈ ಗೆಲುವು ಸಿಎಂಗೆ ಅನಿವಾರ್ಯ.

    ಕೈಗೆ ಎಸ್​ಬಿಎಂ ಸವಾಲು: ಮೈತ್ರಿ ಸರ್ಕಾರ ಪತನದ ವೇಳೆ ಅಚ್ಚರಿ ರೀತಿಯಲ್ಲಿ ಕಾಂಗ್ರೆಸ್​ನಿಂದ ಜಿಗಿದ ‘ಎಸ್​ಬಿಎಂ’ ಎಂದು ಖ್ಯಾತರಾಗಿದ್ದ ಸೋಮಶೇಖರ್, ಭೈರತಿ ಬಸವರಾಜ್ ಮತ್ತು ಮುನಿರತ್ನ ಪೈಕಿ ಇಬ್ಬರು ಉಪಚುನಾವಣೆಯಲ್ಲಿ ಜಯಿಸಿ ದಡ ಸೇರಿ ನಿರುಮ್ಮಳರಾಗಿದ್ದಾರೆ. ಇದೀಗ ಚುನಾವಣೆ ಎದುರಿಸುವ ಸರದಿ ಮುನಿರತ್ನ. ಅವರು ದಡ ಸೇರಬೇಕಿದೆ, ಅವರನ್ನು ದಡ ಸೇರಿಸುವ ಹೊಣೆ ಸಿಎಂ ಜತೆಗೆ ಸಚಿವರಾಗಿರುವ ಸೋಮಶೇಖರ್ ಮತ್ತು ಭೈರತಿ ಬಸವರಾಜ್ ಮೇಲೂ ಇದೆ. ಅದೇ ರೀತಿ ಇಷ್ಟು ವರ್ಷ ತಮ್ಮ ಜತೆಗಿದ್ದ ‘ಎಸ್​ಬಿಎಂ’ ಎದುರಿಸುವ ಸಂಕಟದಲ್ಲಿ ಡಿಕೆಶಿ ಇದ್ದಾರೆ.

    ‘ಚಂದಮಾಮ’ದ ವಿಕ್ರಂ-ಬೇತಾಳ ಚಿತ್ರ ರಚಿಸುತ್ತಿದ್ದ ಕಲಾವಿದ ಶಿವಶಂಕರನ್ ಇನ್ನಿಲ್ಲ

    ತಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts