ಕೆಂಗೇರಿ ಕೆರೆಗೆ ತುಂಬಿಸುತ್ತಿರುವ ಸಂಸ್ಕರಿಸಿದ ನೀರನ್ನು ಗೃಹ ಬಳಕೆಗೆ ಬಳಸಬಾರದು: ಬೆಂಗಳೂರು ಜಲಮಂಡಳಿ ಸೂಚನೆ

Kengeri Lake
Published on

ಬೆಂಗಳೂರು: ನಗರದಲ್ಲಿ ಕುಸಿಯುತ್ತಿರುವ ಅಂತರ್ಜಲ ವೃದ್ಧಿಸಲು ಹಾಗೂ ಕೆರೆಗಳನ್ನು ಸುಸ್ಥಿತಿಯಲ್ಲಿ ಕಾಪಾಡುವ ದೃಷ್ಟಿಯಿಂದ, ನಗರದ ಕೆಂಗೇರಿ ಕೆರೆ ಸೇರಿದಂತೆ 14 ಕೆರೆಗಳಿಗೆ ತುಂಬಿಸಲಾಗುತ್ತಿರುವ ಸಂಸ್ಕರಿಸಿದ ನೀರನ್ನು, ಕುಡಿಯಲು ಹಾಗೂ ಗೃಹ ಬಳಕೆಗೆ ಉಪಯೋಗಿಸಬಾರದು ಎಂದು ಬೆಂಗಳೂರು ಜಲ ಮಂಡಳಿ ಮತ್ತು ನೀರು ಸರಬರಾಜು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಸೂಚನೆ ನೀಡಿದ್ದಾರೆ.

ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಎರಡನೇ ಹಂತದಲ್ಲಿ ಸಂಸ್ಕರಿಸಿ ನಗರದ ಅಂತರ್ಜಲ ವೃದ್ಧಿಯ ದೃಷ್ಟಿಯಿಂದ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಈ ನೀರನ್ನು, ರಾಷ್ಟ್ರೀಯ ಹಸಿರು ಪ್ರಾಧಿಕರಣ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ಮನದಂಡಗಳ ಆಧಾರದ ಮೇಲೆ ಸಂಸ್ಕರಿಸಲಾಗುತ್ತಿದೆ. ಈ ನೀರನ್ನು ನೇರವಾಗಿ ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಹಿತಾಸಕ್ತಿಯ ದೃಷ್ಟಿಯಿಂದ ಈ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಕೆಂಗೇರಿ ಕೆರೆಗೆ ಸಂಸ್ಕರಿಸಿದ ನೀರನ್ನು ಹರಿಸುವ ಮೂಲಕ ಕುಸಿದಿರುವ ಅಂತರ್ಜಲವನ್ನು ಮರುಪೂರಣಗೊಳಿಸಲು ಜಲಮಂಡಳಿ ಮುಂದಾಗಿದೆ. ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಅವ್ಯಾಹತವಾಗಿ ಅಂತರ್ಜಲ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಅವಶ್ಯಕತೆ ಪೂರೈಸಲು ಅಂತರ್ಜಲ ಮರುಪೂರಣ ಮಾಡಬೇಕಿದೆ. ಇದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಜಲಮಂಡಳಿ ಕೈಗೊಳ್ಳುತ್ತಿದೆ ಎಂದರು.

ವೃಷಭಾವತಿ ವ್ಯಾಲಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ನಾಯಂಡಹಳ್ಳಿ ಕೆರೆ, ಕೆಂಗೇರಿ ಎಸ್.ಟಿ.ಪಿ ಮಂಡಳಿ ವತಿಯಿಂದ ಸಂಸ್ಕರಿಸಿದ ನೀರನ್ನು ಕೆಂಗೇರಿ ಕೆರೆಗೆ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಂಡಳಿ ವತಿಯಿಂದ ಸಂಸ್ಕರಿಸಿ ನೀರನ್ನು ದುಬಾಸಿಪಾಳ್ಯ, ಹೊಸಕೆರಳ್ಳಿ ಹಾಗೂ ಹಲಗೇವಡೆರಹಳ್ಳಿ ಕೆರೆಗಳಿಗೆ ತುಂಬಿಸಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net